ಸಾಗರ: ಕೋವಿಡ್ 2ನೇ ಅಲೆಯ ಕಠಿಣ ನಿಯಮ ಉಲ್ಲಂಘಿಸಿ ನಗರದ ವಿವಿಧ ರಸ್ತೆಗಳಲ್ಲಿ ಸಂಚರಿಸುತ್ತಿದ್ದ ಸಾರ್ವಜನಿಕರಿಗೆ, ದ್ವಿಚಕ್ರ ವಾಹನ ಸವಾರರಿಗೆ ಪೇಟೆ ಠಾಣೆ ಪೊಲೀಸರು ಶನಿವಾರ ಲಾಠಿ ಬಿಸಿ ಮುಟ್ಟಿಸಿದ್ದಾರೆ.
ಎಸ್‌ಎನ್ ನಗರದಲ್ಲಿನ ಮೀನು ಮಾರುಕಟ್ಟೆ ವ್ಯಾಪ್ತಿಯಲ್ಲಿ ರಿಯಾಯ್ತಿ ಅವ ಧಿ ಮುಗಿದಿದ್ದರೂ ಜನರು ಸಂಚರಿಸುತ್ತಿದ್ದ ಕಾರಣ ಲಾಠಿ ಬೀಸಿದ ಪೊಲೀಸರು ಜನರನ್ನು ಎಚ್ಚರಿಸಿದರು. ಎಸ್‌ಎನ್ ನಗರ, ಅಂಬೇಡ್ಕರ್, ಐತಪ್ಪ, ಆಜಾದ್ ವೃತ್ತಗಳಲ್ಲಿ ಸಂಚರಿಸುತ್ತಿದ್ದವರಿಗೆ ಲಾಠಿ ಬೀಸಿ ಮನೆಗೆ ಕಳುಹಿಸಿದರು.
ಭಾನುವಾರ ನಗರದ ವಿವಿಧ ಭಾಗಗಳಲ್ಲಿ ಅನಾವಶ್ಯಕವಾಗಿ ಸಂಚರಿಸುತ್ತಿದ್ದ 10 ದ್ವಿಚಕ್ರ ವಾಹನಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ತಾಲೂಕಿನಾದ್ಯಂತ ಶನಿವಾರ ಒಟ್ಟು 17,500 ರೂ. ದಂಡ ವಸೂಲಿಯಾಗಿದೆ. ಕೋವಿಡ್ ನಿಯಮ ಉಲ್ಲಂಘನೆ ಹಿನ್ನೆಲೆಯಲ್ಲಿ 60 ಮಾಸ್ಕ್ ಧರಿಸದವರ, ಮೋಟಾರು ವಾಹನ ಕಾಯ್ದೆ ಅಡಿ 23 ವಾಹನ ಸವಾರರ ವಿರುದ್ಧ ಪ್ರಕರಣ ದಾಖಲಿಸಿ, ದಂಡ ಸಂಗ್ರಹಿಸಲಾಗಿದೆ. ಕಾರ್ಯಾಚರಣೆಯಲ್ಲಿ ನಗರ ಠಾಣೆಯ ವೃತ್ತ ನಿರೀಕ್ಷಕ ಅಶೋಕ್ ಕುಮಾರ್, ಸಬ್ ಇನ್ ಸ್ಪೆಕ್ಟರ್ ತುಕಾರಾಮ್ ಸಾಗರ್‌ಕರ್, ಸಿಬ್ಬಂದಿ ಸಂತೋಷ್, ಮಾಲತೇಶ್, ಸುರೇಂದ್ರ, ರವಿ, ಅಬ್ದುಲ್, ಪವನ್, ಮಂಜುನಾಥ್, ಗ್ರಾಮಾಂತರ ಠಾಣೆಯ ವೃತ್ತ ನಿರೀಕ್ಷಕ, ಗಿರೀಶ್, ಭರತ್ ಕುಮಾರ, ಸುಜಾತ, ಸಿಬ್ಬಂದಿ ಫೈರೋಜ್ ಮುಂತಾದವರಿದ್ದರು.
ಇಂದಿನಿಂದ ಝಿರೋ ಟ್ರಾಫಿಕ್: ಸರ್ಕಾರ ಕಟ್ಟು ನಿಟ್ಟಿನ ಆದೇಶ ನೀಡಿದ ಹಿನ್ನೆಲೆಯಲ್ಲಿ ಮೇ 10ರಿಂದ ವಾಹನ ಸಂಚಾರ ನಿಷೇ ಧಿಸಲಾಗಿದೆ. ಬೀದಿ ಬದಿಯಲ್ಲಿ ತರಕಾರಿ ಅಂಗಡಿಗಳಿಗೆ ಅವಕಾಶ ನೀಡುವಂತಿಲ್ಲ. ನಗರ ವ್ಯಾಪ್ತಿ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿದ್ದು ಝೀರೋ ಟ್ರಾಫಿಕ್ ವಾತಾವರಣವನ್ನುಸೃಷ್ಟಿಸಬೇಕು.
ಅಗತ್ಯ ವಸ್ತು ತೆಗೆದುಕೊಳ್ಳುವವರು ನಡೆದು ಬರಬೇಕೇ ವಿನಃ ವಾಹನ ತಂದರೆ ಮುಟ್ಟುಗೋಲು ಹಾಕಿಕೊಳ್ಳಲಾಗುವುದು. ಪೊಲೀಸ್ ಸಿಬ್ಬಂದಿ ಕಟ್ಟುನಿಟ್ಟಿನ ಕ್ರಮ ಪಾಲಿಸಬೇಕು ಎಂದು ಭಾನುವಾರ ನಗರ ಠಾಣೆಯ ವೃತ್ತ ನಿರೀಕ್ಷಕ ಅಶೋಕ್ ಕುಮಾರ್ ಅವರು ತಮ್ಮ ಇಲಾಖೆಯವರಿಗೆ ಸೂಚನೆ ನೀಡಿದ್ದಾರೆ.