ಶಿವಮೊಗ್ಗ: ಜಿಲ್ಲೆಯಾದ್ಯಂತ ಸೋಮವಾರದಿಂದ ಕಟ್ಟುನಿಟ್ಟಿನಿಂದ ಕೊರೊನಾ ಕರ್ಫ್ಯೂ ಜಾರಿಯಾಗಲಿದ್ದು, ಜನರು ಅಗತ್ಯ ವಸ್ತುಗಳನ್ನು ಸ್ಥಳೀಯವಾಗಿ ನಡೆದುಕೊಂಡು ಹೋಗಿ ಖರೀದಿಸಲು ಮಾತ್ರ ಅವಕಾಶವಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ ತಿಳಿಸಿದರು.
ಅವರು ಭಾನುವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಹಿರಿಯ ಅಧಿಕಾರಿಗಳು ಹಾಗೂ ಸಂಘಸಂಸ್ಥೆಗಳ ಪ್ರತಿನಿಧಿಗಳ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಆಸ್ಪತ್ರೆಗೆ ತೆರಳುವಂತಹ ಅಗತ್ಯ ಸಂದರ್ಭದಲ್ಲಿ ಮಾತ್ರ ವಾಹನ ಬಳಸಬಹುದಾಗಿದೆ. ಸ್ಥಳೀಯವಾಗಿ ಇರುವ ಮೆಡಿಕಲ್ ಶಾಪ್‌ಗ್ಳಿಗೂ ನಡೆದುಕೊಂಡೇ ಹೋಗಬೇಕು.
ಇತರ ಕಾರಣಗಳಿಗೆ ರಸ್ತೆಗೆ ಬರುವ ವಾಹನವನ್ನು ಲಾಕ್‌ಡೌನ್ ಮುಗಿಯುವ ತನಕ ಜಪ್ತಿ ಮಾಡಿ ಕಾನೂನು ಕ್ರಮ ಜರುಗಿಸಲಾಗುವುದು. ಸ್ಥಳೀಯವಾಗಿ ಗುರುತಿಸಲಾಗಿರುವ ಝೋನ್ ವ್ಯಾಪ್ತಿಯಲ್ಲಿ ಮಾತ್ರ ಅಗತ್ಯ ವಸ್ತುಗಳ ಖರೀದಿಗೆ ಅವಕಾಶವಿದೆ. ಪ್ರತಿ ಝೋನ್‌ನಲ್ಲಿ ಚೆಕ್‌ಪೋಸ್ಟ್ ಸ್ಥಾಪಿಸಿ ಸಂಚಾರ ನಿಬಂìಧಿ ಸಲಾಗುವುದು.
ಲಾಕ್‌ಡೌನ್ ಬಿಗಿಯಾಗಿ ಜಾರಿಗೊಳಿಸಲು ಪೊಲೀಸರಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು. ನಗರದ ಎಲ್ಲಾ ವಾರ್ಡ್‌ಗಳಲ್ಲಿ ತರಕಾರಿ ಹಣ್ಣುಗಳನ್ನು ಮಾರಾಟ ಮಾಡಲು ಹಾಪ್ಸ್‌ಕಾಮ್ಸ್‌ಗೆ 70 ವಾಹನಗಳನ್ನು ಒದಗಿಸಲಾಗಿದೆ. ಈ ಎಲ್ಲಾ ವಾಹನಗಳು ಬೆಳಗ್ಗೆ 6ರಿಂದ 12ರವರೆಗೆ ವಾಹನ ಸಂಚರಿಸಿ ತರಕಾರಿ ಮಾರಾಟ ಮಾಡಲಿದೆ. ಎಪಿಎಂಸಿಯಲ್ಲಿ ಸಗಟು ಮಾರಾಟಕ್ಕೆ ಮಾತ್ರ ಅವಕಾಶವಿದೆ. ಎಪಿಎಂಸಿ ಹೊರಗೆ ಪ್ರಸ್ತುತ ನಡೆಯುತ್ತಿರುವ ಚಿಲ್ಲರೆ ಮಾರಾಟವನ್ನು ನಿಷೇಧಿಸಲಾಗಿದೆ. ತಳ್ಳುಗಾಡಿ ಮಾರಾಟಕ್ಕೆ ಸಹ ಬೆಳಿಗ್ಗೆ 6ರಿಂದ 12ರವರೆಗೆ ಅವಕಾಶ ನೀಡಲಾಗುವುದು. ಗ್ರಾಮೀಣ ಭಾಗದಲ್ಲಿ ವಾರದಲ್ಲಿ ಎರಡು ದಿನ ವಾಹನಗಳ ಮೂಲಕ ತರಕಾರಿ ಮಾರಾಟಕ್ಕೆ ವ್ಯವಸ್ಥೆ ಮಾಡಲಾಗುವುದು ಎಂದರು.
ಇದಕ್ಕೂ ಮುನ್ನ ಅಧಿಕಾರಿಗಳ ಸಭೆ ನಡೆಸಿದ ಈಶ್ವರಪ್ಪ, ಮೆಗ್ಗಾನ್ ಆಸ್ಪತ್ರೆಯ ಒಳಗೆ ಕೋವಿಡ್ ರೋಗಿಗಳ ಬಳಿ ಅವರ ಸಂಬಂ ಧಿಕರು ತೆರಳಲು ಅವಕಾಶ ನೀಡಬಾರದು. ಬೆಳಗ್ಗೆ ವಾಕಿಂಗ್ ಹೋಗಲು ಅನುಮತಿ ಇರುವುದಿಲ್ಲ. ಎಲ್ಲಾ ಉದ್ಯಾನವನ, ಸ್ಟೇಡಿಯಂ ಮುಚ್ಚಬೇಕು. ಮದುವೆಗೆ ಒಟ್ಟು 40ಮಂದಿಗೆ ಮಾತ್ರ ಅವಕಾಶವಿದ್ದು, ಅಗತ್ಯ ಪಾಸುಗಳನ್ನು ತಹಶೀಲ್ದಾರ್ ಕಚೇರಿಯಿಂದ ಪಡೆಯಬೇಕು. ಗಡಿಭಾಗದಲ್ಲಿರುವ ಜಮೀನುಗಳಿಗೆ ಕೃಷಿ ಚಟುವಟಿಕೆಗಳಿಗೆ ತೆರಳಲು ಅನುಮತಿ ನೀಡುವ ಕುರಿತು ಪರಿಶೀಲನೆ ನಡೆಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ನೀಡುವುದನ್ನು ಯಾವುದೇ ಕಾರಣಕ್ಕೂ ನಿಲ್ಲಿಸಬಾರದು. ಕಾರ್ಮಿಕರನ್ನು ಸಣ್ಣ ಗುಂಪುಗಳಲ್ಲಿ ವಿಂಗಡಿಸಿ ಸಾಮಾಜಿಕ ಅಂತರ ಪಾಲಿಸಿಕೊಂಡು ಕಾಮಗಾರಿ ಅನುಷ್ಟಾನಗೊಳಿಸಬೇಕು ಎಂದು ಅವರು ಸೂಚನೆ ನೀಡಿದರು.
ಸಂಸದ ಬಿ.ವೈ. ರಾಘವೇಂದ್ರ, ಶಾಸಕರಾದ ಹರತಾಳು ಹಾಲಪ್ಪ, ಅರಗ ಜ್ಞಾನೇಂದ್ರ, ಕುಮಾರ ಬಂಗಾರಪ್ಪ, ಆಯನೂರು ಮಂಜುನಾಥ್, ರುದ್ರೇಗೌಡ, ಪ್ರಸನ್ನ ಕುಮಾರ್, ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್, ಜಿಪಂ ಸಿಇಒ ಎಂ.ಎಲ್. ವೈಶಾಲಿ, ಅಪರ ಜಿಲ್ಲಾಧಿಕಾರಿ ಜಿ.ಅನುರಾಧಾ ಇದ್ದರು.