ಕಲಬುರಗಿ: ಟಿಕೆಟ್ ವಂಚಿತರು ಬಂಡಾಯವಾಗಿ ಸ್ಪರ್ಧಿಸುವ ಸರದಿಗೆ ಈಗ ಕಲಬುರಗಿ ಉತ್ತರ ಸೇರುತ್ತಿದೆ.
ಜೇವರ್ಗಿ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ವಂಚಿತ ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ ಜೆಡಿಎಸ್ ಸೇರಿ ಅಭ್ಯರ್ಥಿಯಾಗುವ ಮೂಲಕ ಸವಾಲೆಸೆಯುತ್ತಿರುವ ನಡುವೆ ಕಲಬುರಗಿ ಉತ್ತರ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಮುಖಂಡ ಶಿವಕಾಂತ ಮಹಾಜನ್ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಲು ಮುಂದಾಗಿದ್ದಾರೆ.
ಪಕ್ಷೇತರ ಇಲ್ಲವೇ ಇತರ ಪಕ್ಷದಿಂದ ಸ್ಪರ್ಧಿಸುವ ಬಗ್ಗೆ ಚರ್ಚಿಸಲು ಏ. 15 ರಂದು ಕಾರ್ಯಕರ್ತರ ಸಭೆ ಕರೆದಿದ್ದಾರೆ. ಈಗಾಗಲೇ ಕಾರ್ಯಕರ್ತರು ಚುನಾವಣೆ ಸಂಬಂಧ ಕಳೆದ ಆರು ತಿಂಗಳಿಂದ ಎಲ್ಲ ಬಡಾವಣೆಗಳಿಗೆ ತೆರಳಿ ಮತದಾರನ ಮನ ಸೆಳೆಯಲಾಗಿದೆ. ಅದಲ್ಲದೇ ಎಲ್ಲ ಸಮುದಾಯದ ಮತಗಳನ್ನು ಸೆಳೆಯುವ ಶಕ್ತಿ ತಮಗೊಬ್ಬರಿಗೆ ಇರೋದರಿಂದ ಸ್ಪರ್ಧಿವಂತೆ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಒತ್ತಡ ಹಾಕುತ್ತಿದ್ದಾರೆ ಎಂದು ಶಿವಕಾಂತ ಮಹಾಜನ್ ತಿಳಿಸಿದ್ದಾರೆ.
ಇದನ್ನೂ ಓದಿ:Viral Video: ಮೊಮ್ಮಗನ ಮದುವೆಯಲ್ಲಿ 96 ವರ್ಷದ ಅಜ್ಜನ ಭರ್ಜರಿ ನೃತ್ಯ: ಫಿದಾ ಆದ ನೆಟ್ಟಿಗರು
ಕುಟುಂಬಕ್ಕೊಂದು ಟಿಕೆಟ್ ಎಲ್ಲ ಕಡೆ ಅನ್ವಯವಾದರೆ ಕಲಬುರಗಿ ಉತ್ತರದಲ್ಲಿ ಆಗಿಲ್ಲ ಎಂಬುದು ಕಾರ್ಯಕರ್ತರ ವಾದವಾಗಿದೆ. ಪಕ್ಷದ ವರಿಷ್ಠರ ನಿರ್ದೇಶನ ಮೇರೆಗೆ ಕೆಲಸ ಮಾಡಲಾಗಿದೆ. ಆದರೂ ವಿಶ್ವಾಸಕ್ಕೆ ತೆಗೆದುಕೊಳ್ಳದಿರುವುದು ಆತ್ಮಾವಲೋಕನಕ್ಕೆ ಎಡೆ ಮಾಡಿಕೊಟ್ಟಿದೆ. ಹೀಗಾಗಿ ಹಿರಿಯರ ಹಾಗೂ ಹಿತೈಷಿಗಳ ಅಭಿಪ್ರಾಯ ಹಾಗೂ ಸಲಹೆ ಪಡೆದು ಸ್ಪರ್ಧಿಸುವುದು ಸೂಕ್ತ ಎಂದು ಕಾರ್ಯಕರ್ತರು ಒಕ್ಕೊರಲಿನಿಂದ ಆಗ್ರಹಿಸುತ್ತಿರುವುದರಿಂದ ಮಹಾಜನ್ ಅವರು ಸ್ಪರ್ಧೆಗೆ ಮುಂದಾಗಿದ್ದಾರೆ.
ಚುನಾವಣೆಗೆ ಮೊದಲೇ ಮಾನಸಿಕವಾಗಿ ತಯಾರಾಗಿದ್ದು, ಹಿಂದೆ ಸರಿಯುವ ಪ್ರಶ್ನೆ ಇಲ್ಲ. ಕಾರ್ಯಕರ್ತರೊಂದಿಗೆ ಚರ್ಚಿಸಿ ನಾಮಪತ್ರ ಸಲ್ಲಿಸುವ ದಿನಾಂಕ ನಿಗದಿ ಪಡಿಸಲಾಗುವುದು ಎಂದು ಮಹಾಜನ್ ತಿಳಿಸಿದ್ದಾರೆ.