ಅದು ಮಡಿಕೇರಿಯ ದಟ್ಟ ಕಾನನದಲ್ಲಿರುವ ರಣಗಿರಿ ಊರು. ಅಲ್ಲಿರುವ ರೆಸಾರ್ಟ್‌ಗೆ ಬರುವ ರಾಜ್ಯದ ಪ್ರಭಾವಿ ಮಂತ್ರಿಯೊಬ್ಬನ ಮಗ, ಅಲ್ಲೇ ನಿಗೂಢವಾಗಿ ಸಾವನ್ನಪ್ಪುತ್ತಾನೆ. ಈ ಸಾವು ಕೊಲೆಯೋ ಅಥವಾ ಆತ್ಮಹತ್ಯೆಯೋ ಅನ್ನೋದನ್ನ ತನಿಖೆ ಮಾಡಲು ಪೊಲೀಸ್ ಇಲಾಖೆಯಲ್ಲಿ ಶರ್ಲಾಕ್ ಹೋಮ್ಸ್ ಎಂದೇ ಪ್ರಖ್ಯಾತಿ ಪಡೆದಿರುವ ಅಧಿಕಾರಿ ಬರುತ್ತಾನೆ. ಅವನೇ ಶಿವಾಜಿ ಸುರತ್ಕಲ್ ಹೀಗೆ ಒಂದು ಸಾವಿನ ನಿಗೂಢತೆ ಭೇದಿಸುತ್ತ ಶುರುವಾಗುವ ಸಿನಿಮಾದ ಕಥೆಯಲ್ಲಿ, ತಣ್ಣಗೆ ಮತ್ತೂಂದು, ಮಗದೊಂದು ಅಂಥ ಒಂದೊಂದೆ ಕೊಲೆಯ ಎಳೆಗಳು ಬಿಚ್ಚಿಕೊಳ್ಳಲು ಶುರುವಾಗುತ್ತದೆ.
ಸಾಮಾನ್ಯವಾಗಿ ಎಲ್ಲ ಸಸ್ಪೆನ್ಸ್ ಕಂ ಕ್ರೈಂ ಥ್ರಿಲ್ಲರ್ ಸಿನಿಮಾಗಳಲ್ಲೂ ಕಥೆ ಹೀಗೆ ಇರುತ್ತದೆ ಅಂದುಕೊಳ್ಳುತ್ತಿರುವಾಗಲೇ, ಅಲ್ಲಿ ಕಥೆ ಮತ್ತೇನೊ ತಿರುವು ಪಡೆದುಕೊಳ್ಳುತ್ತದೆ. ಇದು ಈ ವಾರ ತೆರೆಗೆ ಬಂದಿರುವ “ಶಿವಾಜಿ ಸುರತ್ಕಲ್’ ಸಿನಿಮಾದ ಕಥಾ ಹಂದರ. “ಶಿವಾಜಿ ಸುರತ್ಕಲ್’ ಎನ್ನುವ ಪತ್ತೇಧಾರಿಯ ಹುಡುಕಾಟದಲ್ಲಿ ಒಂದಷ್ಟು ಟರ್ನ್, ಟ್ವಿಸ್ಟ್ ಇದೆ. ಸಸ್ಪೆನ್ಸ್ ಬೆನ್ನತ್ತಿ ಓಡುವ ಶಿವಾಜಿ ನೋಡುಗರಿಗೂ ಅದೇ ಥ್ರಿಲ್ಲಿಂಗ್ ಅನುಭವ ಕೊಡುತ್ತಾನೆ. ಕೆಲವು ಕಡೆ ಎಮೋಶನಲ್ ಆಗಿ ಹಿಡಿದು ಕೂರಿಸುತ್ತಾನೆ. ಕೆಲವು ಕಡೆ ಹಾರರ್ ಟಚ್ ಕೊಟ್ಟು ಮತ್ತೇನೊ ಹೊಸ ಎಳೆ ಬಿಚ್ಚಿಡುತ್ತಾನೆ.
ಒಟ್ಟಾರೆ ಅಲ್ಲಲ್ಲಿ ಏರಿಳಿತ ಕಾಣುತ್ತ, ಮನಸ್ಸಿನಲ್ಲಿ ಒಂದು ಸಣ್ಣ ಕುತೂಹಲ ಮೂಡಿಸಿ ಕ್ಲೈಮ್ಯಾಕ್ಸ್ ವರೆಗೂ ಪ್ರೇಕ್ಷಕರನ್ನು ಕರೆದುಕೊಂಡು ಬರುತ್ತಾನೆ. ಅದೆಲ್ಲವನ್ನೂ ಅವಸರವಿಲ್ಲದೆ ಸಾವಧಾನಚಿತ್ತದಿಂದ ನೋಡುವ ಹಾಗಿದ್ದರೆ, ಶಿವಾಜಿ ಒಂದಷ್ಟು ಕುತೂಹಲಭರಿತ ಮನರಂಜನೆ ಕೊಡುತ್ತಾನೆ. ನಿಗೂಢ ಸಾವು, ಒಬ್ಬ ಚಾಣಕ್ಷ ತನಿಖಾಧಿಕಾರಿಯ ವೃತ್ತಿ ಜೀವನದ 101ನೇ ಕೇಸ್, ಇದರ ಹಿಂದೆ ಆತನ ವೈಯಕ್ತಿಕ ಕಥೆ, ಇದೆಲ್ಲವನ್ನು “ಶಿವಾಜಿ ಸುರತ್ಕಲ್’ ಎನ್ನುವ ಚಾಣಕ್ಷ ಹೇಗೆ ಅದನ್ನು ನಿಭಾಹಿಸುತ್ತಾನೆ ಎನ್ನುವ ಸಂಗತಿಗಳನ್ನು ನಿರೂಪಣೆಯಲ್ಲಿ ಚೆನ್ನಾಗಿ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ಆಕಾಶ್ ಶ್ರೀವತ್ಸ.
ಆದರೆ ಚಿತ್ರದ ಕೆಲವೆಡೆ ಬರುವ ಟರ್ನ್-ಟ್ವಿಸ್ಟ್‌ಗಳಿಗೆ ಲಾಜಿಕ್ ಹುಡುಕುವ ಮೊದಲೇ ಚಿತ್ರ ನೋಡುಗರನ್ನು ಬೇರೆಲ್ಲೂ ಕರೆದುಕೊಂಡು ಹೋಗುವುದರಿಂದ, ಕೆಲ ಗೊಂದಲಗಳು ಅಲ್ಲಲ್ಲಿ ಹಾಗೆ ಉಳಿದುಕೊಳ್ಳುತ್ತವೆ. ಚಿತ್ರಕಥೆ, ನಿರೂಪಣೆಗೆ ಕೊಂಚ ಕತ್ತರಿ ಪ್ರಯೋಗ ಮಾಡಿದ್ದರೆ, ಶಿವಾಜಿ ಇನ್ನಷ್ಟು ಶಾರ್ಪ್ ಆಗಿರುತ್ತಿದ್ದ. ಇನ್ನು ಇಲ್ಲಿಯವರೆಗೆ ನೋಡಿರದ ರಮೇಶ್ ಅರವಿಂದ್ ಅವರನ್ನು “ಶಿವಾಜಿ ಸುರತ್ಕಲ್’ನಲ್ಲಿ ನೋಡಬಹುದು. ಇಲ್ಲಿ ರಮೇಶ್ ಅರವಿಂದ್ ಅವರನ್ನು ಶಾಂತವಾಗಿರುವ, ಇದ್ದಕ್ಕಿದ್ದಂತೆ ವ್ಯಗ್ರವಾಗುವ, ಚಾಣಾಕ್ಷವಾಗಿರುವ, ತಕ್ಷಣ ಅವಸರಗೊಳ್ಳುವ ಹೀಗೆ ಹಲವು ಏರಿಳಿತ ವಿರುವ ವಿಚಿತ್ರ ಪಾತ್ರದಲ್ಲಿ ಕಾಣಬಹುದು.
ನೋಡುಗರಿಗೆ ತಕ್ಷಣ ಅರಗಿಸಿಕೊಳ್ಳು ವುದು ಕಷ್ಟವಾದರೂ, ರಮೇಶ್ ತಮ್ಮ ಪಾತ್ರವನ್ನು ಚೆನ್ನಾಗಿ ನಿರ್ವಹಿಸಿದ್ದಾರೆ. ಚಿತ್ರದ ಬಹುಭಾಗ ರಮೇಶ್ ಆವರಿಸಿಕೊಳ್ಳುವುದರಿಂದ, ಇತರ ಪಾತ್ರಗಳಿಗೆ ಪ್ರಾಮುಖ್ಯತೆ ಕಡಿಮೆ. ಉಳಿದಂತೆ ರಾಧಿಕಾ ನಾರಾಯಣ್, ಆರೋಹಿ, ರೋಹಿತ್ ಭಾನುಪ್ರಕಾಶ್, ನಮ್ರತಾ, ಸತೀಶ್ ಸೇರಿದಂತೆ ಬಹುತೇಕ ಕಲಾವಿದರು ಅಚ್ಚುಕಟ್ಟಾಗಿ ಅಭಿನಯ ನೀಡಿದ್ದಾರೆ. ಚಿತ್ರದ ಛಾಯಾಗ್ರಹಣ, ಸಂಕಲನ, ಹಿನ್ನೆಲೆ ಸಂಗೀತ ಚೆನ್ನಾಗಿ ಮೂಡಿಬಂದಿದೆ. ಹಾಡುಗಳು ಅಷ್ಟಾಗಿ ಮನಸ್ಸಿನಲ್ಲಿ ಉಳಿಯುವುದಿಲ್ಲ. ತಾಂತ್ರಿಕವಾಗಿ ಚಿತ್ರದ ಗುಣಮಟ್ಟ ಚೆನ್ನಾಗಿದೆ. ಒಟ್ಟಾರೆ ಸಸ್ಪೆನ್ಸ್, ಥ್ರಿಲ್ಲರ್, ಎಮೋಶನ್, ಹಾರರ್ ಹೀಗೆ ಎಲ್ಲವನ್ನೂ ಒಂದೇ ಚಿತ್ರದಲ್ಲಿ ಬಯಸುವ ಪ್ರೇಕ್ಷಕರಿಗೆ “ಶಿವಾಜಿ ಸುರತ್ಕಲ…’ ಗರಿಷ್ಟ ಮನರಂಜನೆ ನೀಡುವ ಚಿತ್ರ ಎನ್ನಲು ಅಡ್ಡಿಯಿಲ್ಲ.
ಚಿತ್ರ: ಶಿವಾಜಿ ಸುರತ್ಕಲ್
ನಿರ್ದೇಶನ: ಆಕಾಶ್ ಶ್ರೀವತ್ಸ
ನಿರ್ಮಾಣ: ಅನೂಪ್
ತಾರಾಗಣ: ರಮೇಶ್ ಅರವಿಂದ್, ರಾಧಿಕಾ ನಾರಾಯಣ್, ಆರೋಹಿ ನಾರಾಯಣ್, ರೋಹಿತ್ ಭಾನುಪ್ರಕಾಶ್, ರಘು ರಾಮನಕೊಪ್ಪ, ನಮ್ರತಾ, ಸತೀಶ್ ಮತ್ತಿತರರು
* ಜಿ.ಎಸ್. ಕಾರ್ತಿಕ ಸುಧನ್