ಒಬ್ಬ ಹೊಸ ಹೀರೋ ಲಾಂಚ್‌ನಲ್ಲಿ ಏನೇನು ಇರಬೇಕು ಹೇಳಿ… ಒಂದೊಳ್ಳೆಯ ಕಥೆ, ಆ್ಯಕ್ಷನ್, ಲವ್, ಕಲರ್‌ಫುಲ್ ಸಾಂಗ್, ನಟನೆಗೆ ಅವಕಾಶವಿರುವ ಒಂದಷ್ಟು ಸನ್ನಿವೇಶ… ಇವಿಷ್ಟನ್ನು ಒಬ್ಬ ನಿರ್ದೇಶಕ ನೀಟಾಗಿ ಜೋಡಿಸಿಕೊಟ್ಟರೆ ಒಬ್ಬ ಹೊಸ ಹೀರೋ ತೆರೆಮೇಲೆ ಆರಾಮವಾಗಿ ಉಸಿರಾಡಬಹುದು. ಆ ನಿಟ್ಟಿನಲ್ಲಿ “ಶಿವ 143′ ಎಲ್ಲಾ ಅಂಶಗಳನ್ನು ಹೊಂದಿರುವ ಒಂದು ಪ್ಯಾಕೇಜ್ ಎಂದರೆ ತಪ್ಪಲ್ಲ. ಇದು ಧೀರೇನ್ ರಾಮ್‌ಕುಮಾರ್ ಅವರ ಲಾಂಚ್ ಸಿನಿಮಾ.
ಮೊದಲ ಚಿತ್ರಕ್ಕೆ ಒಂದು ಗಂಭೀರ ಕಥೆಯನ್ನು ಆಯ್ಕೆ ಮಾಡಿಕೊಂಡು, ಅದನ್ನು ನೀಟಾಗಿ ಕಟ್ಟಿಕೊಟ್ಟಿದೆ. ಅಂದಹಾಗೆ, ಇದು ತೆಲುಗಿನ “ಆರ್‌ಎಕ್ಸ್ 100′ ಚಿತ್ರದ ರೀಮೇಕ್. ಮೂಲಕಥೆ ಯನ್ನು ಇಟ್ಟುಕೊಂಡು ಉಳಿದಂತೆ ಇಲ್ಲಿನ ನೇಟಿವಿಟಿಗೆ ತಕ್ಕಂತೆ ಸಾಕಷ್ಟು ಬದಲಾವಣೆ ಮಾಡಿಕೊಂಡು ಈ ಸಿನಿಮಾವನ್ನು ಚಿತ್ರೀಕರಿಸಲಾಗಿದೆ.
ಒಬ್ಬ “ಪ್ರಾಮಾಣಿಕ’ ಪ್ರೇಮಿಯೊಬ್ಬನ ಸುತ್ತುವ ಈ ಕಥೆಯಲ್ಲಿ ಲವ್, ಆ್ಯಕ್ಷನ್, ಸೆಂಟಿಮೆಂಟ್, ಕಾಮಿಡಿ… ಹೀಗೆ ಔಟ್ ಅಂಡ್ ಔಟ್ ಕಮರ್ಷಿಯಲ್ ಸಿನಿಮಾದಲ್ಲಿರಬೇಕಾದ ಎಲ್ಲಾ ಅಂಶಗಳು ಈ ಚಿತ್ರದಲ್ಲಿರುವುದರಿಂದ ಮಾಸ್-ಕ್ಲಾಸ್ ಆಡಿಯನ್ಸ್‌ಗೆ ಇಷ್ಟವಾಗಬಹುದು. ಮೊದಲರ್ಧ ನಾಯಕನ ವೇದನೆ, ವರ್ತನೆಯ ಸುತ್ತ ಸಾಗಿದರೆ, ಚಿತ್ರ ಗಂಭೀರವಾಗುವುದು ದ್ವಿತೀಯಾರ್ಧದಲ್ಲಿ. ಇಲ್ಲಿ ಸಿನಿಮಾದ ನಿಜವಾದ ಕಥೆ ತೆರೆದುಕೊಳ್ಳುತ್ತದೆ. ಈ ಮೂಲಕ ಸಿನಿಮಾ ಕುತೂಹಲದೊಂದಿಗೆ ಸಾಗುತ್ತದೆ. ಗಂಭೀರ ಕಥೆಯುಳ್ಳ ಚಿತ್ರವಾದರೂ, ಒಂದಷ್ಟು ಕಾಮಿಡಿ ಸನ್ನಿವೇಶಗಳನ್ನು ಜೋಡಿಸಲಾಗಿದ್ದು, ಸಾಧುಕೋಕಿಲ ಹಾಗೂ ಚಿಕ್ಕಣ್ಣ ನಗಿಸಲು ಪ್ರಯತ್ನಿಸುತ್ತಾರೆ. ಆದರೆ, ಮದುವೆ ಆಮಂತ್ರಣ ಪತ್ರಿಕೆ ಕೊಡಲು ಬಂದವನ ಎದುರು ಚಿಕ್ಕಣ್ಣ ಮಾಡುವ ಕಾಮಿಡಿ ದೃಶ್ಯಕ್ಕೆ ಕತ್ತರಿ ಹಾಕಿದ್ದರೆ ಸಿನಿಮಾದ ವೇಗ ಮತ್ತು ಪ್ರೇಕ್ಷಕನ ಖುಷಿ ಹೆಚ್ಚುತ್ತಿತ್ತು.
ಇನ್ನು, ನಾಯಕ ಧೀರೇನ್ ವಿಚಾರಕ್ಕೆ ಬರುವುದಾದರೆ ಮೊದಲ ಚಿತ್ರದಲ್ಲೇ ಗಮನ ಸೆಳೆದಿದ್ದಾರೆ. ಭಗ್ನಪ್ರೇಮಿಯಾಗಿ, ಆ್ಯಕ್ಷನ್ ಹೀರೋ ಆಗಿ ಗಮನ ಸೆಳೆಯುತ್ತಾರೆ. ಮೊದಲ ಚಿತ್ರದಲ್ಲೇ ಇಂತಹ ಕಥೆ ಹಾಗೂ ಕ್ಲೈಮ್ಯಾಕ್ಸ್ ಇರುವ ದೃಶ್ಯವನ್ನು ಒಪ್ಪಿಕೊಂಡಿರೋದು ಅವರ ಸಿನಿಮಾ ಪ್ರೀತಿಗೆ ಸಾಕ್ಷಿ. ಈ ಮೂಲಕ ಧೀರೇನ್ ಭವಿಷ್ಯದ ಭರವಸೆ ಮೂಡಿಸಿದ್ದಾರೆ.
ಇನ್ನು, ನಾಯಕಿ ಮಾನ್ವಿತಾ ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಇಂತಹ ನಟಿಯರು ಇಂತಹ ಪಾತ್ರ ಒಪ್ಪಲು “ಲೆಕ್ಕಾಚಾರ’ ಹಾಕುವ ಸಮಯದಲ್ಲಿ ಮಾನ್ವಿತಾ ಮಾತ್ರ ಧೈರ್ಯದಿಂದ ಈ ಪಾತ್ರ ಮಾಡಿ ಸೈ ಎನಿಸಿದ್ದಾರೆ. ಉಳಿದಂತೆ ಅವಿನಾಶ್, ಚರಣ್ ರಾಜ್, ಶೋಭರಾಜ್ ಸೇರಿದಂತೆ ಅನೇಕರು ನಟಿಸಿದ್ದಾರೆ.