Advertisement

ಇಂದಿರಾ ವಿರುದ್ಧದ ಹೇಳಿಕೆ ವಾಪಸ್‌: ರಾವತ್‌

10:05 AM Jan 17, 2020 | Hari Prasad |

ಮುಂಬಯಿ: ‘ಮಾಜಿ ಪ್ರಧಾನಿ ಇಂದಿರಾ ಗಾಂಧಿ ಭೂಗತ ಪಾತಕಿ ಕರೀಂಲಾಲಾರನ್ನು ಭೇಟಿಯಾಗಿದ್ದರು’ ಎಂಬ ವಿವಾದಾತ್ಮಕ ಹೇಳಿಕೆಯನ್ನು ಗುರುವಾರ ಶಿವಸೇನಾ ವಕ್ತಾರ ಸಂಜಯ ರಾವತ್‌ ಹಿಂಪಡೆದಿದ್ದಾರೆ. ಬುಧವಾರ ಅವರು ನೀಡಿದ್ದ ಹೇಳಿಕೆಗೆ ಮಹಾರಾಷ್ಟ್ರ ಕಾಂಗ್ರೆಸ್‌ ನಾಯಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆಗೆ ದೂರು ನೀಡಿದ್ದರು.

Advertisement

ಅದರ ಅನ್ವಯ ರಾವತ್‌ ತಮ್ಮ ಹೇಳಿಕೆ ಹಿಂಪಡೆದಿರುವುದಾಗಿ ಹೇಳಿಕೊಂಡಿದ್ದಾರೆ. ಜತೆಗೆ ಸ್ಪಷ್ಟನೆಯನ್ನೂ ನೀಡಿರುವ ರಾಜ್ಯಸಭಾ ಸದಸ್ಯ, ಮುಂಬಯಿ ನಗರದ ಇತಿಹಾಸ ಗೊತ್ತಿಲ್ಲದವರು ತಮ್ಮ ಮಾತುಗಳನ್ನು ತಿರುಚಿದ್ದಾರೆ ಎಂದಿದ್ದಾರೆ. ಹಿಂದಿನ ಹಲವು ಸಂದರ್ಭಗಳಲ್ಲಿ ಇಂದಿರಾ ಪರ ನಿಲುವುಗಳನ್ನು ಬೆಂಬಲಿಸಿದ್ದೆ. ಇದೀಗ ನನ್ನ ಮಾತುಗಳಿಂದ ನೋವಾಗಿದ್ದರೆ ಅದನ್ನು ಹಿಂಪಡೆದುಕೊಳ್ಳುತ್ತೇನೆ ಎಂದಿದ್ದಾರೆ.

ಅವಕಾಶವಾದಿ ಮೈತ್ರಿ: ಇಂದಿರಾ ವಿರುದ್ಧದ ಹೇಳಿಕೆ ಬಗ್ಗೆ ಶಿವಸೇನೆ-ಕಾಂಗ್ರೆಸ್‌ ನಡುವಿನ ವಾದ-ವಿವಾದದ ಬಗ್ಗೆ ಬಿಜೆಪಿ ಲೇವಡಿ ಮಾಡಿದೆ. ಎರಡೂ ಪಕ್ಷಗಳದ್ದು ಅವಕಾಶವಾದಿ ಮೈತ್ರಿ. ಪ್ರತಿ ದಿನವೂ ಇಂಥ ಸತ್ಯಗಳು ಹೊರಬರಲಿವೆ ಎಂದು ಕೇಂದ್ರ ಸಚಿವ ಪ್ರಕಾಶ್‌ ಜಾಬ್ಡೇಕರ್‌ ಹೇಳಿದ್ದಾರೆ.

ಮುಂದಿನ ದಿನಗಳಲ್ಲಿ ಮಹಾ ವಿಕಾಸ್‌ ಅಘಾಡಿ ಮೈತ್ರಿಕೂಟದಲ್ಲಿ ಇಂಥ ಹಲವಾರು ಸಿನಿಮೀಯ ಘಟನೆಗಳು ಅನಾವರಣಗೊಳ್ಳಲಿವೆ ಎಂದೂ ಹೇಳಿದ್ದಾರೆ. ರಾವತ್‌ ಮಾಜಿ ಪ್ರಧಾನಿ ಬಗೆಗಿನ ಪ್ರಧಾನ ಅಂಶವನ್ನು ಬಹಿರಂಗಗೊಳಿಸಿದ್ದಾರೆ. ಹಿಂದಿನ ಸಂದರ್ಭಗಳಲ್ಲಿ ಕಾಂಗ್ರೆಸ್‌ ತೋಳ್ಬಲದ ಮೂಲಕ ಚುನಾವಣೆ ಗೆದ್ದಿತ್ತೇ, ಅವರಿಗೆ ಭೂಗತ ಲೋಕದಿಂದ ದೇಣಿಗೆ ಬಂದಿತ್ತೇ ಎಂದು ಮಾಜಿ ಸಿಎಂ ಫ‌ಡ್ನವೀಸ್‌ ಪ್ರಶ್ನಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next