ಮುಂಬೈ:ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಗೆ ತನ್ನ ಬೆಂಬಲ ಎಂದು ಘೋಷಿಸಿರುವ ಅಮರಾವತಿ ಜಿಲ್ಲೆಯ ಬಾಡ್ನೇರಾ ಕ್ಷೇತ್ರದ ಪಕ್ಷೇತರ ಶಾಸಕ ರವಿ ರಾಣಾ, ಒಂದು ವೇಳೆ ಶಿವಸೇನಾ ಬಿಜೆಪಿ ಜತೆ ಕೈಜೋಡಿಸದಿದ್ದರೆ ಆ ಪಕ್ಷ ಇಬ್ಭಾಗವಾಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ.
ಶಿವಸೇನಾ ಹಿರಿಯ ಮುಖಂಡ, ಸಾಮ್ನಾದ ಕಾರ್ಯಕಾರಿ ಸಂಪಾದಕ ಸಂಜಯ್ ರಾವತ್ ಅವರೊಬ್ಬ ಪಕ್ಷದ ಗಿಣಿ ಎಂದಿರುವ ರಾಣಾ, ದೇವೇಂದ್ರ ಫಡ್ನವೀಸ್ ಅವರು ಮತ್ತೊಮ್ಮೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ ಎಂದರು.
ಶಿವಸೇನಾ ಕೇವಲ 56 ಸ್ಥಾನಗಳಲ್ಲಷ್ಟೇ ಜಯ ಸಾಧಿಸಿದೆ, ಅದಕ್ಕೆ ಕಾರಣ ಬಿಜೆಪಿ ಜತೆ ಮೈತ್ರಿ ಮಾಡಿಕೊಂಡಿರುವುದು. ಇಲ್ಲದಿದ್ದರೆ ಶಿವಸೇನಾ ಕೇವಲ 25 ಸ್ಥಾನಗಳಲ್ಲಿ ಮಾತ್ರ ಗೆಲುವು ಸಾಧಿಸುತ್ತಿತ್ತು ಎಂದು ಹೇಳಿದರು.
ಶಿವಸೇನಾದ 25 ಮಂದಿ ಶಾಸಕರು ಸಿಎಂ ಫಡ್ನವೀಸ್ ಮತ್ತು ನನ್ನ ಸಂಪರ್ಕದಲ್ಲಿದ್ದಾರೆ. ಅವರೆಲ್ಲ ಫಡ್ನವೀಸ್ ನೇತೃತ್ವದ ಸರ್ಕಾರ ರಚನೆಗೆ ಕೈಜೋಡಿಸಲಿದ್ದಾರೆ ಎಂದು ರಾಣಾ ಈ ಸಂದರ್ಭದಲ್ಲಿ ತಿಳಿಸಿದ್ದಾರೆ.
ಶಿವಸೇನಾ ಅನಾವಶ್ಯಕವಾಗಿ ಬಿಕ್ಕಟ್ಟನ್ನು ಸೃಷ್ಟಿಸುತ್ತಿದೆ. ಇದು ಮಹಾರಾಷ್ಟ್ರ ಜನತೆಗೆ ಅವಮಾನಿಸಿದಂತೆ. ಒಂದು ಬಾರಿ ಸಿಎಂ ಫಡ್ನವೀಸ್ ಅವರು ಸಿಎಂ ಗದ್ದುಗೆ ಏರಿದ ಮೇಲೆ ಎರಡು ತಿಂಗಳೊಳಗೆ 20-25 ಮಂದಿ ಶಿವಸೇನಾ ಶಾಸಕರು ಬಿಜೆಪಿ ಜತೆ ಸೇರಲಿದ್ದಾರೆ ಎಂದು ರಾಣಾ ಬಾಂಬ್ ಸಿಡಿಸಿದ್ದಾರೆ.