ಮುಂಬಯಿ: ಪಕ್ಷದ ಕಾರ್ಯಕರ್ತರನ್ನು ಕಾನೂನಿನ ಕುಣಿಕೆಯೊಳಗೆ ಸಿಲುಕಿಸಲು ಸಂಚು ರೂಪಿಸಲಾಗಿರುವುದರಿಂದ ತಮ್ಮ ಅಯೋಧ್ಯಾ ಭೇಟಿಯನ್ನು ಮುಂದೂಡಿರುವುದಾಗಿ ಮಹಾರಾಷ್ಟ್ರ ನವ ನಿರ್ಮಾಣ ಸೇನಾ ಮುಖ್ಯಸ್ಥ ರಾಜ್ ಠಾಕ್ರೆ ನೀಡಿರುವ ಹೇಳಿಕೆಯನ್ನು ಟೀಕಿಸಿರುವ ಶಿವಸೇನಾ ವಕ್ತಾರ ಸಂಜಯ್ ರಾವುತ್ ಅವರು ಇದೊಂದು ಹತಾಶೆಯಿಂದ ಕೂಡಿದ ಹೇಳಿಕೆ ಎಂದು ಮೂದಲಿಸಿದ್ದಾರೆ.
ರಾಜ್ ಠಾಕ್ರೆ ಹೇಳಿಕೆ ಸಂಬಂಧ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಸಂಜಯ್ ರಾವುತ್, ನಿಮ್ಮ ಅಯೋಧ್ಯಾ ಭೇಟಿಯನ್ನು ಯಾರು ತಡೆಯಲು ಸಾಧ್ಯ?, ಇದರ ಹಿಂದೆ ಇರುವ ಷಡ್ಯಂತ್ರವಾದರೂ ಏನು ಎಂದು ರಾಜ್ ಠಾಕ್ರೆ ಅವರನ್ನು ಪ್ರಶ್ನಿಸಿದರು.
ರಾಜ್ ಠಾಕ್ರೆ ಅವರದು ಅಯೋಧ್ಯಾ ಭೇಟಿ ಬಿಜೆಪಿ ಪ್ರಾಯೋಜಿತವಾಗಿದೆ. ಉತ್ತರ ಪ್ರದೇಶದಲ್ಲಿ ಬಿಜೆಪಿ ಸರಕಾರವಿದೆ. ಅಲ್ಲಿನ ಓರ್ವ ಬಿಜೆಪಿ ಸಂಸದರಿಂದ ರಾಜ್ ಠಾಕ್ರೆ ಅವರ ಭೇಟಿಗೆ ವಿರೋಧ ವ್ಯಕ್ತವಾಗಿದೆ.
ಆದರೆ ಈ ವಿರೋಧಕ್ಕೆ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲವಾಗಿದ್ದು ಅಯೋಧ್ಯೆಗೆ ಭೇಟಿ ನೀಡಿ. ಯಾರು ನಿಮ್ಮನ್ನು ತಡೆಯುತ್ತಾರೆ ಎಂದು ರಾವುತ್ ಪ್ರಶ್ನಿಸಿದರು.
ರಾಜ್ ಠಾಕ್ರೆ ಅವರ ಈ ಎಲ್ಲ ಹೇಳಿಕೆಗಳು ಕೇವಲ ಹತಾಶೆಯ ಮಾತುಗಳಾಗಿವೆ. ಇದಕ್ಕಾಗಿ ರಾಜ್ ಅವರು ಕೌನ್ಸೆಲಿಂಗ್ ಮತ್ತು ಚಿಕಿತ್ಸೆ ಪಡೆಯುವ ಅಗತ್ಯವಿದೆ ಎಂದರು.