ನವದೆಹಲಿ:ಜಮ್ಮು ಕಾಶ್ಮೀರದ ಹಂದ್ವಾರಾದಲ್ಲಿ ಉಗ್ರರ ಎನ್ ಕೌಂಟರ್ ನಲ್ಲಿ ಐವರು ಯೋಧರು ಹುತಾತ್ಮರಾಗಿದ್ದು, ಈ ಘಟನೆ ಬಗ್ಗೆ ಶಿವಸೇನಾದ ಮುಖವಾಣಿ ಸಾಮ್ನಾದ ಸಂಪಾದಕೀಯದಲ್ಲಿ ಪಾಕ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಗಿದೆ ಎಂದು ವರದಿ ತಿಳಿಸಿದೆ.
ಬಲಿಷ್ಠ ಮತ್ತು ದೇಶಭಕ್ತ ಸರ್ಕಾರ ಅಧಿಕಾರದಲ್ಲಿ ಇರುವಾಗಲೇ ಈ ಘಟನೆ ನಡೆದಿದೆ. ದೇಶದಲ್ಲಿ ಕೋವಿಡ್ 19 ಪರಿಸ್ಥಿತಿಯಿಂದಾಗಿ ಭಾರತ ಕಾಶ್ಮೀರದ ಬಗ್ಗೆ ಮರೆತೇ ಬಿಟ್ಟಿದೆ. ಆದರೆ ಪಾಕಿಸ್ತಾನ ಮಾತ್ರ ಅದೇ ಕಳ್ಳಾಟ ಮುಂದುವರಿಸಿದೆ ಎಂದು ಕಿಡಿಕಾರಿದೆ.
ಕೋವಿಡ್ 19 ವಿರುದ್ಧ ಹೋರಾಡುತ್ತಿರುವ ವೈದ್ಯರು, ಆರೋಗ್ಯ ಸಿಬ್ಬಂದಿಗಳು ಹಾಗೂ ನರ್ಸ್ ಗಳ ಸೇವೆಯನ್ನು ಗುರುತಿಸಿ ಆಸ್ಪತ್ರೆಯ ಮೇಲೆ ಸೇನೆಯ ವಿಮಾನದ ಮೂಲಕ ಪುಷ್ಪದ ಮಳೆಗರೆಯುವ ಮೂಲಕ ಅಭಿನಂದಿಸಿರುವುದು ಶ್ಲಾಘನೀಯ ಕೆಲಸ, ಆದರೆ ಕಾಶ್ಮೀರವನ್ನು ನಿರ್ಲಕ್ಷಿಸಬೇಡಿ ಎಂದು ಸಾಮ್ನಾದಲ್ಲಿ ಸಲಹೆ ನೀಡಿದೆ.
ಐವರು ಯೋಧರು ಹುತಾತ್ಮರಾದ ಘಟನೆ ಸರ್ಜಿಕಲ್ ದಾಳಿ ನಡೆಸುವ ಮೂಲಕ ಪ್ರತೀಕಾರ ತೀರಿಸಿಕೊಳ್ಳಬೇಕು ಎಂದು ಶಿವಸೇನಾ ಕರೆ ಕೊಟ್ಟಿದೆ. ಒಂದೇ ಬಾರಿಗೆ ನಮ್ಮ ಐವರು ಯೋಧರನ್ನು ಹತ್ಯೆಗೈಯುವುದು ಒಳ್ಳೆಯ ಬೆಳವಣಿಗೆ ಅಲ್ಲ ಎಂದು ಸಂಪಾದಕೀಯದಲ್ಲಿ ಹೇಳಿದೆ.
2016ರಲ್ಲಿ ಉರಿಯ ಸೇನಾ ಶಿಬಿರದ ಮೇಲೆ ಉಗ್ರರು ದಾಳಿ ನಡೆಸಿದ್ದಕ್ಕೆ ಪ್ರತೀಕಾರವಾಗಿ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಒಳನುಸುಳಲು ಸಿದ್ಧತೆ ನಡೆಸುತ್ತಿದ್ದ ಉಗ್ರರನ್ನು ಗುರಿಯಾಗಿರಿಸಿಕೊಂಡು ಭಾರತ ಸರ್ಜಿಕಲ್ ದಾಳಿ ನಡೆಸುವ ಮೂಲಕ ಎಲ್ ಒಸಿಯಲ್ಲಿರುವ ಏಳು ಉಗ್ರರ ಅಡಗುತಾಣಗಳನ್ನು ಧ್ವಂಸಗೊಳಿಸಿತ್ತು. ಸರ್ಜಿಕಲ್ ದಾಳಿಯನ್ನು ಬಿಜೆಪಿ ರಾಜಕೀಯ ಲಾಭಕ್ಕೆ ಬಳಸಿಕೊಳ್ಳುತ್ತಿದೆ ಎಂದು ಕಾಂಗ್ರೆಸ್ ಸೇರಿದಂತೆ ಹಲವು ವಿರೋಧ ಪಕ್ಷಗಳು ಟೀಕಿಸಿದ್ದವು.