ಮುಂಬಯಿ : ಬಿಜೆಪಿಯಿಂದ ದೂರವಾಗಿರುವ ಶಿವಸೇನೆ, ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್ ಚುನಾವಣೆಯನ್ನು ಹೊಸ ನಿಕೃಷ್ಟ ಮಟ್ಟಕ್ಕೆ ಒಯ್ಯುತ್ತಿದ್ದಾರೆ ಎಂದು ಆರೋಪಿಸಿದೆ. ಅಭಿವೃದ್ಧಿ ಸಾಧನೆಯ ವಿಷಯವನ್ನು ಬಿಟ್ಟು “ನಾನು, ನೀನು’ ಎಂದು ಗೂಬೆ ಕೂರಿಸುವಲ್ಲಿ ಮೋದಿ ಈಗ ವ್ಯಸ್ತರಾಗಿದ್ದಾರೆ ಎಂದು ಅದು ಲೇವಡಿ ಮಾಡಿದೆ.
ಗುಜರಾತ್ ಚುನಾವಣೆಯಲ್ಲಿ ನೆರೆಯ ದೇಶ ಪಾಕಿಸ್ಥಾನ ಹಸ್ತಕ್ಷೇಪ ಮಾಡುತ್ತಿದೆ ಎಂಬ ಆರೋಪದ ಬಗ್ಗೆ ಪ್ರಧಾನಿ ಮೋದಿ ಇನ್ನಷ್ಟು ವಿವರ ನೀಡಬೇಕಾಗಿದೆ ಎಂದು ಶಿವಸೇನೆ ಹೇಳಿದೆ.
ಪ್ರಧಾನಿ ಮೋದಿ ಅವರು ಗುಜರಾತ್ ಚುನಾವಣಾ ಪ್ರಚಾರಾಭಿಯಾನದಲ್ಲಿ ಮುಘಲ್ ಆಡಳಿತೆ ಕಾಲದ ಗೋರಿಗಳನ್ನು ತೆರೆದಿದ್ದಾರೆ; ವಿಕಾಸ (ಅಭಿವೃದ್ಧಿ) ಕುರಿತು ಮಾತನಾಡುವುದನ್ನು ಬಿಟ್ಟು ಕೇವಲ ಕಾಂಗ್ರೆಸ್ ಪಕ್ಷವನ್ನು ಗುರಿ ಇರಿಸಿ ಮಾತನಾಡುವುದನ್ನೇ ಮುಂದುವರಿಸಿದ್ದಾರೆ ಎಂದು ಶಿವಸೇನೆ ಟೀಕಿಸಿದೆ.
“ಗುಜರಾತ್ ಜನರು ಇದೇ ಕಾರಣಕ್ಕಾಗಿ ಕಾಂಗ್ರೆಸ್ ಪಕ್ಷವನ್ನು ಕಳೆದ22 ವರ್ಷಗಳಿಂದಲೂ ತಿರಸ್ಕರಿಸುತ್ತಾ ಬಂದಿದ್ದಾರೆ. ಈ ಸತ್ಯವನ್ನು ಪ್ರಧಾನಿ ಮೋದಿ ಕಡೆಗಣಿಸಿದ್ದಾರೆ. ಮಾತ್ರವಲ್ಲದೆ ಅಭಿವೃದ್ಧಿ ಕುರಿತು ಮಾತನಾಡುವುದನ್ನು “ನಾನು ನೀನು’ ಎಂದು ಗೂಬೆ ಕೂರಿಸುವುದರಲ್ಲೇ ವ್ಯಸ್ತರಾಗಿದ್ದಾರೆ; ಅದು ಕೂಡ ಅವರು ತಮ್ಮ ಹುಟ್ಟೂರಲ್ಲೇ ಇದನ್ನು ಮಾಡುತ್ತಿರುವುದು ದುರದೃಷ್ಟಕರ’ ಎಂದು ಶಿವಸೇನೆ ತನ್ನ ಸಾಮ್ನಾ ಮತ್ತು ದೋಪಹರ್ ಕಾ ಸಾಮ್ನಾ ದಲ್ಲಿ ಹೇಳಿದೆ.