ಮುಂಬಯಿ: ಭಾರತದ ಖ್ಯಾತ ಸಂಗೀತ ಮಾಂತ್ರಿಕ, ಸಂತೂರ್ ವಾದಕ ಪಂಡಿತ್ ಶಿವ ಕುಮಾರ್ ಶರ್ಮಾ (84ವರ್ಷ) ಮಂಗಳವಾರ (ಏ.10) ಹೃದಯಾಘಾತದಿಂದ ನಿಧನ ಹೊಂದಿರುವುದಾಗಿ ಕುಟುಂಬದ ಮೂಲಗಳು ತಿಳಿಸಿವೆ.
ಇದನ್ನೂ ಓದಿ:ಅಶ್ವತ್ಥ್ ನಾರಾಯಣ್ – ಎಂ.ಬಿ. ಪಾಟೀಲ್ ಭೇಟಿ ಈ ಬಗ್ಗೆ ಡಿಕೆಶಿ ಹೇಳಿದ್ದೇನು ?
ಭಾರತೀಯ ಶಾಸ್ತ್ರೀಯ ಸಂಗೀತದಲ್ಲಿ ಪ್ರಮುಖರಾಗಿದ್ದು, ಮುಂದಿನ ವಾರ ಭೋಪಾಲ್ ನಲ್ಲಿ ಅವರ ಸಂಗೀತ ಕಚೇರಿ ನಿಗದಿಯಾಗಿತ್ತು. ಆದರೆ ಇವರು ವಯೋ ಸಹಜ ಕಾಯಿಲೆಯಿಂದ ಚಿಕಿತ್ಸೆ ಪಡೆಯುತ್ತಿರುವುದಾಗಿ ವರದಿ ಹೇಳಿದೆ.
ಚಟುವಟಿಕೆಯಿಂದ ಇದ್ದ ಶರ್ಮಾ ಅವರಿಗೆ ಇಂದು ಬೆಳಗ್ಗೆ ಹೃದಯಾಘಾತ ಸಂಭವಿಸಿತ್ತು. ಅವರು ದಿನಂಪ್ರತಿ ಡಯಾಲಿಸೀಸ್ ಗೆ ಒಳಗಾಗುತ್ತಿದ್ದರು ಕೂಡಾ ಚಟುವಟಿಕೆಯಿಂದ ಇದ್ದಿರುವುದಾಗಿ ಕುಟುಂಬದ ಮೂಲಗಳು ಪಿಟಿಐಗೆ ವಿವರಿಸಿದೆ.
ಪದ್ಮ ವಿಭೂಷಣ ಪ್ರಶಸ್ತಿ ವಿಜೇತ ಶರ್ಮಾ ಅವರು ಜಮ್ಮುವಿನಲ್ಲಿ 1938ರಲ್ಲಿ ಜನಿಸಿದ್ದರು. ಜಮ್ಮು-ಕಾಶ್ಮೀರದ ಜಾನಪದ ವಾದ್ಯವಾದ ಸಂತೂರ್ ನಲ್ಲಿ ಭಾರತೀಯ ಶಾಸ್ತ್ರೀಯ ಸಂಗೀತ ನುಡಿಸಿದ ಮೊದಲ ಭಾರತೀಯ ಸಂಗೀತಗಾರ ಎಂಬ ಹೆಗ್ಗಳಿಕೆ ಶರ್ಮಾ ಅವರದ್ದಾಗಿದೆ.
ಶರ್ಮಾ ಅವರ ಪುತ್ರ ರಾಹುಲ್ ಶರ್ಮಾ ಕೂಡಾ ಸಂತೂರ್ ವಾದಕರಾಗಿದ್ದಾರೆ. ಪಂಡಿತ್ ಶಿವಕುಮಾರ್ ಶರ್ಮಾ ಅವರ ನಿಧನ ಸಂಗೀತ ಕ್ಷೇತ್ರಕ್ಕೆ ತುಂಬಲಾರದ ನಷ್ಟವನ್ನುಂಟು ಮಾಡಿದೆ ಎಂದು ವರದಿ ತಿಳಿಸಿದೆ.