ಚಿತ್ರದುರ್ಗ: ಮಾದರಿ ಜೀವನ ಮಾಡಲುದಾರಿ ತೋರಿಸುವಂತಹ ತತ್ವಪದ ಮತ್ತು ಜಾನಪದ ಗೀತೆಗಳ ಮೂಲಕ ಸಂತ ಶಿಶುನಾಳ ಷರೀಫರು ಹಿಂದೂ-ಮುಸ್ಲಿಂ ಸಮುದಾಯದಲ್ಲಿ ಸಾಮರಸ್ಯ ಬಿತ್ತುವ ಕೆಲಸ ಮಾಡಿದರು ಎಂದು ವೆಂಕಟೇಶ್ವರ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಹಾಗೂ ಸಾಹಿತಿ ಟಿ. ಬಸವರಾಜ ಬೆಳಗಟ್ಟ ಹೇಳಿದರು.
ಇಲ್ಲಿನ ಮಠದಕುರುಬರಹಟ್ಟಿಯ ಬಸವೇಶ್ವರ ವಿದ್ಯಾಸಂಸ್ಥೆ, ಗಾಂಧಿ ಮತ್ತು ಅಂಬೇಡ್ಕರ್ ಅನಾಥ ಮಕ್ಕಳ ಕುಟೀರದಲ್ಲಿ ಗಾನಯಾನ ಜಾನಪದ ಮತ್ತು ಸಾಂಸ್ಕೃತಿಕ ಕಲಾ ಸಂಸ್ಥೆ ಅಮಕುಂದಿ ಹಾಗೂ ಹಂಸಗಾನ ಕಲಾ ಸಂಘ ಇವುಗಳ ಸಂಯುಕ್ತಾಶ್ರಯದಲ್ಲಿ ಸಂತ ಶಿಶುನಾಳ ಷರೀಫ್ ಮತ್ತು ಗಾನಯೋಗಿ ಡಾ| ಪಂಡಿತ್ ಪುಟ್ಟರಾಜ ಗವಾಯಿಗಳ ಜನ್ಮದಿನದ ಅಂಗವಾಗಿ ಹಮ್ಮಿಕೊಂಡಿದ್ದ ಗಾನ ನಮನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
1819, ಮಾ.7 ರಂದು ಜನಿಸಿದ ಶಿಶುನಾಳ ಷರೀಫರು ಶಿಕ್ಷಕ ವೃತ್ತಿಯನ್ನು ತ್ಯಜಿಸಿ ಆಧ್ಯಾತ್ಮಿಕ ಜೀವನದ ಜೊತೆ ತತ್ವ ಪದ ಹಾಗೂ ಜಾನಪದ ಗೀತೆಗಳ ಮೂಲಕ ಮನುಕುಲಕ್ಕೆ ಉಪಯುಕ್ತವಾಗುವ ಸಂದೇಶಗಳನ್ನು ನೀಡಿದ್ದಾರೆ.
ಗುರುವಿಗಿರುವ ಸ್ಥಾನ ಬೇರೆ ಯಾವುದಕ್ಕೂ ಇಲ್ಲ. ಸಂತ ಶಿಶುನಾಳ ಷರೀಫರ ಹಾಗೂ ಅವರ ಗುರುಗಳ ಸಂಬಂಧ ಅನ್ಯೋನ್ಯವಾಗಿತ್ತು. ಜ್ಞಾನ ವಿವೇಕವನ್ನು ಪ್ರತಿಯೊಬ್ಬರು ಕಲಿಯಬೇಕಾದರೆ ಗುರುಗಳ ಅನುಗ್ರಹವಿರಬೇಕು. ಕನ್ನಡ ಉರ್ದು ಭಾಷೆಯಲ್ಲಿ ಸೊಗಸಾಗಿ ಹಾಡುತ್ತಿದ್ದರು. ಪುಟ್ಟರಾಜ ಗವಾಯಿಗಳು ಹಿಂದುಸ್ಥಾನಿ ಮತ್ತು ಕರ್ನಾಟಕ ಶಾಸ್ತೀಯ ಸಂಗೀತವನ್ನು ಸುಲಲಿತವಾಗಿ ಹಾಡುತ್ತಿದ್ದರು ಈ ಇಬ್ಬರು ಪುಣ್ಯಪುರುಷರನ್ನು ಸ್ಮರಣೆ ಮಾಡಿಕೊಳ್ಳುವುದೇ ಒಂದು ಪುಣ್ಯದ ಕೆಲಸ ಎಂದು ಸ್ಮರಿಸಿದರು. ಪಿಎನ್‌ಸಿ ವ್ಯವಸ್ಥಾಪಕ ನಿರ್ದೇಶಕ ಜೈಪಾಲ್‌ಸಿಂಗ್, ಬಸವೇಶ್ವರ ವಿದ್ಯಾಸಂಸ್ಥೆ ಕಾರ್ಯದರ್ಶಿ ವಿ.ಕೆ. ಶಂಕರಪ್ಪ, ಸಾಹಿತಿ ಆನಂದಕುಮಾರ್, ಸಂಗೀತ ಶಿಕ್ಷಕ ಕೆ.ಒ. ಶಿವಣ್ಣ, ಕಲಾವಿದ ಶ್ರೀನಿವಾಸ್ ಮಳಲಿ, ಜಾನಪದ ಮತ್ತು ಸುಗಮ ಸಂಗೀತ ಗಾಯಕ ಕೆ. ಗಂಗಾಧರ, ಪ್ರಭಾವತಿ ಶಂಕರಪ್ಪ, ಹಾಸ್ಯ ಕವಿ ಜಗದೀಶ್ ಇದ್ದರು.
ಸಿದ್ದಯ್ಯನಕೋಟೆಯ ಎಂ.ನುಂಕೇಶ್, ಓಬಣ್ಣನಹಳ್ಳಿಯ ಹಿಮಂತರಾಜ್, ಕುಮಾರ್ ಮತ್ತು ಸಂಗಡಿಗರು ಜಾನಪದ ಗೀತೆಗಳನ್ನು ಹಾಡಿ ರಂಜಿಸಿದರು.