ರಬಕವಿ-ಬನಹಟ್ಟಿ: ಕನ್ನಡ ನಾಡು, ನುಡಿ, ಭಾಷೆ, ಜಲದ ಬಗ್ಗೆ ನಾವೆಲ್ಲರೂ ಅಭಿಮಾನ ಪಡಬೇಕು. ನಾವೆಲ್ಲರೂ ಅವಕಾಶ ದೊರೆತಾಗ ಕನ್ನಡಕ್ಕಾಗಿ ನಮ್ಮದೆ ಆದ ಸೇವೆ ಸಲ್ಲಿಸಬೇಕು. ಕನ್ನಡದ ಸಲುವಾಗಿ ನಾವೆಲ್ಲರೂ ನಮ್ಮ ಮನಸ್ಸುಗಳನ್ನು ದೊಡ್ಡದಾಗಿ ಮಾಡಿಕೊಂಡು ಸೇವೆಗೆ ಮುಂದಾಗಬೇಕು ಎಂದು ಶಾಸಕ ಸಿದ್ದು ಸವದಿ ತಿಳಿಸಿದರು.
ಅವರು ಆ.1ರ ಮಂಗಳವಾರ ಇಲ್ಲಿನ ತಹಶೀಲ್ದಾರ್ ಕಾರ್ಯಾಲಯದಲ್ಲಿ 87ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಸಂಚರಿಸುತ್ತಿರುವ ರಥಯಾತ್ರೆಯ ಕುರಿತು ಹಮ್ಮಿಕೊಂಡ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ರಥಯಾತ್ರೆಯಲ್ಲಿ ತಾಲೂಕಿನ ಎಲ್ಲ ಅಧಿಕಾರಿಗಳು, ಶಾಲಾ ಕಾಲೇಜುಗಳ ಸಿಬ್ಬಂದಿ ವರ್ಗದವರು, ವಿದ್ಯಾರ್ಥಿಗಳು, ಸಾಹಿತಿಗಳು ಸೇರಿದಂತೆ ಕನ್ನಡದ ಎಲ್ಲಅಭಿಮಾನಿಗಳು ಸ್ವಯಃ ಪ್ರೇರಿತರಾಗಿ ಭಾಗವಹಿಸಬೇಕು ಎಂದು ಶಾಸಕ ಸವದಿ ತಿಳಿಸಿದರು.
ತಹಶೀಲ್ದಾರ್ ಗಿರೀಶ ಸ್ವಾದಿ ಮಾತನಾಡಿ, ತಾಲೂಕಿನ ಹನಗಂಡಿ ಮಾರ್ಗವಾಗಿ ಬರುವ ರಥವನ್ನು ಸ್ವಾಗತಿಸಲಾಗುವುದು ಮತ್ತು ಬಂಡಿಗಣಿ ಮೂಲಕ ಬೀಳ್ಕೊಡಲಾಗುವುದು ಎಂದರು.
ಸಭೆಯಲ್ಲಿ ಸಾಹಿತಿ ಸಿದ್ಧರಾಜ ಪೂಜಾರಿ, ಕಸಾಪ ಅಧ್ಯಕ್ಷ ಮ.ಕೃ. ಮೇಗಾಡಿ, ತಾಲೂಕು ಪಂಚಾಯತ್ ಕಾರ್ಯ ನಿರ್ವಾಹಕ ಅಧಿಕಾರಿ ಸಿದ್ದಪ್ಪ ಪಟ್ಟಿಹಾಳ ಮಾತನಾಡಿದರು.
ರಬಕವಿ ಬನಹಟ್ಟಿ ನಗರಸಭೆಯ ಅಧ್ಯಕ್ಷೆ ವಿದ್ಯಾ ಧಬಾಡಿ, ಪೌರಾಯುಕ್ತ ಜಗದೀಶ ಈಟಿ, ತೇರದಾಳ ಪ್ರಭಾರ ತಹಶೀಲ್ದಾರ್ ಎಸ್.ಬಿ.ಕಾಂಬಳೆ, ಶ್ರೀಕಾಂತ ಮಾಯನ್ನವರ, ಮುಖ್ಯಾಧಿಕಾರಿಗಳಾದ ಆನಂದ ಕೆಸರಗೊಪ್ಪ, ಈರಣ್ಣ ದಡ್ಡಿ, ಶ್ರೀಶೈಲ ಬುರ್ಲಿ, ಬಿ.ಎಂ. ಹಳೆಮನಿ, ಪ್ರಶಾಂತ ಹೊಸಮನಿ, ಸಿದ್ದನಗೌಡ ಪಾಟೀಲ, ಗಂಗಾಧರ ಮೋಪಗಾರ, ಪ್ರಾಚಾರ್ಯರಾದ ಚಂದ್ರಪ್ರಭಾ ಬಾಗಲಕೋಟ, ಶರತ್ಚಂದ್ರ ಜಂಬಗಿ, ಯಶವಂತ ವಾಜಂತ್ರಿ, ಚಿದಾನಂದ ಸೊಲ್ಲಾಪುರ ಸೇರಿದಂತೆ ಅನೇಕರು ಇದ್ದರು.