ಶಿರ್ವ: ಆತ್ರಾಡಿ- ಶಿರ್ವ-ಬಜ್ಪೆ ರಾಜ್ಯ ಹೆದ್ದಾರಿ, ಶಂಕರಪುರ-ಬಂಟಕಲ್ಲು- ಶಿರ್ವ ಮುಖ್ಯ ರಸ್ತೆ ಮತ್ತು ಕಾಪು -ಶಿರ್ವ ರಸ್ತೆ ಬದಿಯಲ್ಲಿ ಹುಲ್ಲು, ಪೊದೆ,ಗಿಡಗಂಟಿಗಳು ಆಳೆತ್ತರಕ್ಕೆ ಬೆಳೆದು ಅಪಾಯದ ಭೀತಿ ಎದುರಾಗಿದ್ದು, ನಾಗರಿಕರು ರಸ್ತೆ ಬದಿ ಬೆಳೆದ ಹುಲ್ಲು ಕಟಾವಿಗೆ ಸಂಬಂಧಪಟ್ಟ ಇಲಾಖೆಯನ್ನು ಆಗ್ರಹಿಸಿದ್ದಾರೆ.
ರಸ್ತೆಗಳ ಇಕ್ಕೆಲದಲ್ಲಿ ಪೈರು ಬೆಳೆದು ನಿಂತಿದ್ದು, ಕೆಲವೊಂದು ತಿರುವುಗಳಲ್ಲಿ ವಾಹನ ಸವಾರರಿಗೆ ಎದುರಿನಿಂದ ಬರುವ ವಾಹನಗಳು ಕಾಣಿಸುವುದಿಲ್ಲ. ರಸ್ತೆ ಬದಿಯಲ್ಲಿ ಹುಲ್ಲು ಬೆಳೆದಿದ್ದು ಕೆಲವೆಡೆ ರಸ್ತೆಯನ್ನು ಕೂಡ ಆವರಿಸಿಕೊಂಡಿದೆ. ರಸ್ತೆ ಬದಿಯಲ್ಲಿ ಬೆಳೆದ ಪೈರಿನಿಂದಾಗಿ ಪಾದಚಾರಿಗಳು ನಡೆದಾಡಲು ಕೂಡ ಪರದಾಡುವ ಪರಿಸ್ಥಿತಿ ಎದುರಾಗಿದೆ. ಕೆಲವು ಕಡೆ ಸಂಘ ಸಂಸ್ಥೆಗಳು,ಸ್ಥಳೀಯರು ಹುಲ್ಲು ಕಟಾವು ಮಾಡಿದ್ದಾರೆ.
ಶಿರ್ವ ಅಟ್ಟಿಂಜೆ ರಸ್ತೆ, ಪೊಲೀಸ್ ಸ್ಟೇಶನ್ ಕ್ರಾಸ್‌ನಿಂದ ಸಂಗೀತಾ ಕಾಂಪ್ಲೆಕ್ಸ್‌ವರೆಗೆ, ತುಂಡುಬಲ್ಲೆಯಿಂದ ಪ್ರಿನ್ಸ್‌ಪಾಯಿಂಟ್‌ಗಾಗಿ ಪೆರ್ನಾಲ್ -ಪಿಲಾರು ಖಾನದವರೆಗೆ ರಸ್ತೆ ಬದಿ ಪೈರು ಬೆಳೆದು ನಿಂತಿದೆ. ಇದರಿಂದಾಗಿ ವಾಹನ ಸವಾರರಿಗೆ ಎದುರಿನಿಂದ ಬರುವ ವಾಹನಗಳು ಗೋಚರಿಸದೆ ಅಪಘಾತ ಸಂಭವಿಸುವ ಭೀತಿ ಇದೆ.
ಕೆಲವೆಡೆ ಅಡ್ಡರಸ್ತೆಯಿಂದ ಮುಖ್ಯರಸ್ತೆ ಪ್ರವೇಶಿಸುವಲ್ಲಿ ವಾಹನ ಸವಾರರು ಏಕಾಏಕಿ ಮುನ್ನುಗ್ಗುವುದರಿಂದ ರಸ್ತೆ ಬದಿಯ ಪೈರಿನಿಂದಾಗಿ ಮುಖ್ಯರಸ್ತೆಯಲ್ಲಿ ಹಾದುಹೊಗುವ ವಾಹನಗಳು ಕಾಣಿಸದೆ ಅಪಘಾತ ಸಂಭವಿಸುತ್ತದೆ.
ರಸ್ತೆ ಬದಿಯಲ್ಲಿ ಬೆಳೆದಿರುವ ಹುಲ್ಲು ಗಿಡಗಂಟಿಗಳನ್ನು ತೆರವುಗೊಳಿಸದೆ ಇರುವುದರಿಂದ ಅಪಘಾತಗಳು ಹೆಚ್ಚಾಗುವ ಭೀತಿಯಿದ್ದು, ಲೋಕೋಪಯೋಗಿ ಇಲಾಖೆ ಕೊನೆಯ ಹಂತದವರೆಗೆ ಕಾಯದೆ ತುರ್ತು ಕ್ರಮ ಕೈಗೊಂಡು ಪೈರು ಕಟಾವು ಮಾಡಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.