ಶಿರ್ವ: ಕಾಪು ಬ್ಲಾಕ್ ಕಾಂಗ್ರೆಸ್ ಸಮಿತಿಯ ಆಶ್ರಯದಲ್ಲಿ ಪಡುಬೆಳ್ಳೆ ಮಾನಸ ವಿಶೇಷ ಚೇತನ ಮಕ್ಕಳ ಶಾಲೆಯಲ್ಲಿ ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಅವರು ತನ್ನ 69ನೇ ಹುಟ್ಟುಹಬ್ಬವನ್ನು ವಿಶೇಷ ಮಕ್ಕಳ ಜತೆ ಕೇಕ್ ಕತ್ತರಿಸಿ ಮಕ್ಕಳಿಗೆ ತಿನ್ನಿಸುವ ಮೂಲಕ ವಿಶೇಷ ರೀತಿಯಲ್ಲಿ ಆಚರಿಸಿಕೊಂಡರು.
ಬಳಿಕ ಮಾತನಾಡಿ ಜೀವನದಲ್ಲಿ ಹುಟ್ಟುಹಬ್ಬ ಆಚರಿಸುವ ಪದ್ಧತಿ ಇಲ್ಲ. ಮಾನವೀಯತೆಯ ಗುಣಗಳಿಂದ ಮಾನವ ನಾಗಲು ಸಾಧ್ಯವಿದ್ದು, ಮಾನಸ ಸಂಸ್ಥೆ ವಿಶೇಷ ಚೇತನ ಮಕ್ಕಳನ್ನು ಪ್ರೀತಿ,ಕರುಣೆ, ಆತ್ಮೀಯತೆ ತೋರಿಸಿ ವಿದ್ಯಾವಂತರನ್ನಾಗಿ ಮಾಡಿ ಸಮಾಜಕ್ಕೆ ನೀಡುವ ಮೂಲಕ ಪುಣ್ಯದ ಕೆಲಸ ಮಾಡುತ್ತಿದೆ.ವಿಶೇಷ ಚೇತನ ಮಕ್ಕಳು ದೇವರ ಮಕ್ಕಳು ಆಗಿದ್ದು, ಅವರೊಂದಿಗೆ ಹುಟ್ಟುಹಬ್ಬ ಆಚರಿಸಲು ಅವಕಾಶ ದೊರೆತಿದ್ದು ಸಂತೋಷದ ವಿಷಯವಾಗಿದೆ ಎಂದು ಹೇಳಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಮಾತನಾಡಿ ಸುದೀರ್ಘ ಜನಸೇವೆ ಮಾಡುವ ವಿನಯ ಕುಮಾರ್ ಸೊರಕೆಯವರು ಸಾಮಾಜಿಕ ಕಳಕಳಿಯೊಂದಿಗೆ ವಿಶೇಷ ಮಕ್ಕಳೊಂದಿಗೆ ಜನ್ಮದಿನ ಆಚರಿಸುತ್ತಿರುವುದು ಸಂತೋಷದ ವಿಷಯವಾಗಿದೆ. ಮಕ್ಕಳ ಜತೆಗೆ ವಿಶೇಷ ಮಕ್ಕಳನ್ನು ಮುತುವರ್ಜಿಯಿಂದ ಲಾಲನೆ ಪಾಲನೆ ಮಾಡುವ ಶಿಕ್ಷಕಿಯರಿಗೂ ಉತ್ತಮ ತರಬೇತಿ ನೀಡುವ ಕಾರ್ಯಕ್ರಮ ನಡೆಸಬೇಕಿದೆ ಎಂದರು.
ಜನ್ಮದಿನ ಆಚರಣೆಯ ಪ್ರಯುಕ್ತ ಮಾನಸ ವಿಶೇಷ ಶಾಲೆಯ ಮಕ್ಕಳಿಗೆ ನಡೆದ ಆಟೋಟ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ವಿನಯ ಕುಮಾರ್ ಸೊರಕೆ ಬಹುಮಾನ ವಿತರಿಸಿದರು. ಶಾಲೆಯ ಪ್ರಾಂಶುಪಾಲೆ ಸಿ| ಆನ್ಸಿಲ್ಲಾ ಫೆರ್ನಾಂಡಿಸ್ ಬಹುಮಾನ ವಿಜೇತರ ಪಟ್ಟಿ ವಾಚಿಸಿದರು.
ಮಾನಸ ಪುನರ್ವಸತಿ ಮತ್ತು ತರಬೇತಿ ಕೇಂದ್ರದ ಅಧ್ಯಕ್ಷ ಹೆನ್ರಿ ಮೆನೇಜಸ್ ಮತ್ತು ಸ್ಥಾಪಕ ಅಧ್ಯಕ್ಷ ಎಡ್ವರ್ಡ್ ಲೋಬೋ ಮಾತನಾಡಿದರು. ರಾಜ್ಯ ಹಿಂದುಳಿದ ವರ್ಗಗಳ ರಾಜ್ಯ ಕಾರ್ಯದರ್ಶಿ ಬೆಳ್ಳೆ ಶಿವಾಜಿ ಎಸ್. ಸುವರ್ಣ ಮತ್ತು ಕಾಪು ಮಹಿಳಾ ವಿಭಾಗದ ಅಧ್ಯಕ್ಷೆ ಶಾಂತಲತಾ ಶೆಟ್ಟಿ ವೇದಿಕೆಯಲ್ಲಿದ್ದರು.
ಕಾಪು ಬ್ಲಾಕ್ ಕಾಂಗ್ರೆಸ್‌ನ ವಿವಿಧ ವಿಭಾಗಗಳ ಪದಾಧಿಕಾರಿಗಳು,ಮುಖಂಡರು, ವಿವಿದ ಗ್ರಾ.ಪಂ.ಗಳ ಅಧ್ಯಕ್ಷರು, ಸದಸ್ಯರು,ಕಾರ್ಯಕರ್ತರು, ಮಾನಸ ಸಂಸ್ಥೆಯ ಶಿಕ್ಷಕವೃಂದ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ದೀಪಕ್ ಕುಮಾರ್ ಎರ್ಮಾಳ್ ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರು. ಆಮೀರ್ ಮಹಮ್ಮದ್ ಕಾಪು ಕಾರ್ಯಕ್ರಮ ನಿರೂಪಿಸಿ, ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನವೀನ್‌ಚಂದ್ರ ಸುವರ್ಣ ವಂದಿಸಿದರು.