Advertisement

ಹಳೆವಿದ್ಯಾರ್ಥಿಗಳ ಸಮ್ಮಿಲನ, ಗುರುವಂದನೆ

01:40 AM Dec 24, 2018 | Karthik A |

ಶಿರ್ವ: ಸಂತ ಮೇರಿ ಅಲುಮ್ನಿ ಎಸೋಸಿಯೇಶನ್‌ನ ಪಿ.ಯು. ಮತ್ತು ಹೈಸ್ಕೂಲ್‌ ವಿಭಾಗದ ವತಿಯಿಂದ ಹಳೆವಿದ್ಯಾರ್ಥಿಗಳ ಸಮ್ಮಿಲನ ಮತ್ತು ಗುರುವಂದನಾ ಕಾರ್ಯಕ್ರಮವು ಡಿ.22 ರಂದು ಶಿರ್ವಸಂತ ಮೇರಿ ಮತ್ತು ಡೊನ್‌ ಬೊಸ್ಕೊ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ರೆ|ಫಾ| ಡೆನ್ನಿಸ್‌ ಡೇಸಾ ಅವರ ಅಧ್ಯಕ್ಷತೆಯಲ್ಲಿ ಕಾಲೇಜಿನ ಮೈದಾನದಲ್ಲಿ ನಡೆಯಿತು.

Advertisement

ಸಂಸ್ಥೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ 22ಮಂದಿ ನಿವೃತ್ತ ಶಿಕ್ಷಕರನ್ನು ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ಸಮ್ಮಾನಿಸಿ ಗುರುವಂದನೆ ಸಲ್ಲಿಸಲಾಯಿತು. ಇದರೊಂದಿಗೆ ಸೇವೆ ಸಲ್ಲಿಸಿ ನಿಧನರಾದ ಗುರುಗಳ ಆತ್ಮಕ್ಕೆ ಒಂದು ನಿಮಿಷದ ಮೌನ ಪ್ರಾರ್ಥನೆ ಸಲ್ಲಿಸಲಾಯಿತು. ಸಮ್ಮಾನಿತರ ಪರವಾಗಿ ನಿವೃತ್ತ ಪ್ರಾಂಶುಪಾಲ ಆಲ್ಬನ್‌ ರೊಡ್ರಿಗಸ್‌ ಮಾತನಾಡಿ ಗುರುವಂದನೆಯೊಂದಿಗೆ ಗತಕಾಲದ ಸಹೋದ್ಯೋಗಿಗಳೊಂದಿಗೆ ಮತ್ತೂಮ್ಮೆ ಒಂದುಗೂಡುವ ಅವಕಾಶ ಕಲ್ಪಿಸಿದ ಹಳೆವಿದ್ಯಾರ್ಥಿಗಳಿಗೆ ಕೃತಜ್ಞತೆ ಸಲ್ಲಿಸಿದರು.


ಮುಖ್ಯ ಅತಿಥಿಗಳಾಗಿ ಆಗಮಿಸಿದ ಸಂಸ್ಥೆಯ ಹಳೆವಿದ್ಯಾರ್ಥಿ ಮಂಗಳೂರು ಸಂತ ಎಲೋಶಿಯಸ್‌ ಕಾಲೇಜಿನ ನಿವೃತ್ತ ಪ್ರಾಂಶುಪಾಲ ರೆ|ಫಾ|ಜೂಲಿಯಾನ್‌ ಫೆರ್ನಾಂಡಿಸ್‌ಎಸ್‌.ಜೆ. ಮಾತನಾಡಿ ಜಾತಿ ಮತ ಭೇದವಿಲ್ಲದೆ ಸಂಸ್ಥೆಯು ಬೆಳೆದಿದ್ದು ದೇಶ ವಿದೇಶಗಳಲ್ಲಿ ಉನ್ನತ ಸ್ಥಾನ ಅಲಂಕರಿಸಿದ‌ ವಿದ್ಯಾರ್ಥಿಗಳಿಂದಾಗಿ ಸ್ಥಾಪಕ ದಿ| ಹಿಲಾರಿ ಗೋನ್ಸಾಲ್ವೀಸ್‌ ಅವರ ಕನಸು ನನಸಾಗಿದೆ.ಹಳೆವಿದ್ಯಾರ್ಥಿಗಳ ಪಾಲಿಗೆ ವಿದ್ಯೆ ಕಲಿಸಿದ ಗುರುಗಳ ಜೀವನವೇ ಆದರ್ಶಪ್ರಾಯವಾಗಿದೆ ಎಂದು ಹೇಳಿದರು.

ಹಳೆವಿದ್ಯಾರ್ಥಿ ರಾಯಚೂರು ವಿ.ವಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರೊ|ಡಾ| ಮುಜಾಫರ್‌ ಅಸಾದಿ ಮಾತನಾಡಿ ಸಂತ ಮೇರಿ ಸಂಸ್ಥೆ ಹಳೆ ವಿದ್ಯಾರ್ಥಿಗಳ ಬಾಲ್ಯದ ಅಸ್ತಿತ್ವದ ಗುರುತಾಗಿದೆ.ಗುರುಗಳು ತಿದ್ದಿ ತೀಡಿ ನಮ್ಮನ್ನು ಬೆನ್ನು ಹತ್ತಿದ್ದರಿಂದ ಇಂದು ನಾವು ಈ ಮಟ್ಟಕ್ಕೆ ಬೆಳೆದು ಸಮಾಜದಲ್ಲಿ ಗೌರವದ ಸ್ಥಾನ ಪಡೆಯಲು ಸಾಧ್ಯವಾಗಿದೆ. ನಮ್ಮ ಬೆಳವಣಿಗೆಗೆ ಕಾರಣರಾದ ಗುರುಗಳು ಇನ್ನೂ ಆಶೀರ್ವದಿಸಬೇಕಾಗಿದ್ದು ಬೆನ್ನು ತಟ್ಟುವ ಪೆಟ್ಟುಗಳಾಗಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಸಂಚಾಲಕ ರೆ|ಫಾ| ಡೆನ್ನಿಸ್‌ ಡೇಸಾ ಮಾತನಾಡಿ ಇದೊಂದು ಭಾವನಾತ್ಮಕ ಸನ್ನಿವೇಶವಾಗಿದ್ದು ಇಂದಿನ ಶಿಕ್ಷಕರು ಆತ್ಮಾವಲೋಕನ ಮಾಡುವ ಸಮಯ ವಾಗಿದೆ. ಸಂಸ್ಥೆಯಿಂದ ಉದಯಿಸಿದ ಮಿನುಗುವ ತಾರೆಗಳು ನಡೆಸಿದ ಗುರುವಂದನಾ ಕಾರ್ಯಕ್ರಮದ ಪದಾಧಿಕಾರಿಗಳನ್ನು ಅಭಿನಂದಿಸಿದರು. ಸಂತ ಮೇರಿ ಪ.ಪೂ.ಕಾಲೇಜಿನ ಪ್ರಾಂಶುಪಾಲೆ ಐರಿನ್‌ ಮೆಂಡೋನ್ಸಾ ಮತ್ತು ಪ್ರೌಢಶಾಲಾ ವಿಭಾಗದ ಹಿರಿಯ ಶಿಕ್ಷಕ ಗಿಲ್ಬರ್ಟ್‌ ಪಿಂಟೊ ವೇದಿಕೆಯಲ್ಲಿದ್ದರು.

Advertisement

ಕಾರ್ಯಕ್ರಮದಲ್ಲಿ ಪರಿಸರದ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ವಿವಿಧ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು, ಚರ್ಚ್‌ ಪಾಲನಾ ಮಂಡಳಿಯ ಸದಸ್ಯರು, ನಿವೃತ್ತ ಉಪನ್ಯಾಸಕರು, ಶಿಕ್ಷಕರು,ಹಳೆವಿದ್ಯಾರ್ಥಿಸಂಘದ ಪದಾಧಿಕಾರಿಗಳು, ಹಳೆವಿದ್ಯಾರ್ಥಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕೆ.ಆರ್‌. ಪಾಟ್ಕರ್‌ ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರು. ನೋರ್ಬರ್ಟ್‌ ಇ.ಮಚಾದೊ ಮತ್ತು ಡಾ| ಗುರುರಾಜ್‌ ಅತಿಥಿಗಳನ್ನು ಪರಿಚಯಿಸಿ, ನಿರೂಪಿಸಿದರು. ಕಾರ್ಯದರ್ಶಿ ಡೆನ್ನಿಸ್‌ ಮಥಾಯಸ್‌ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next