Advertisement

ಅಪಾಯದ ಅಂಚಿನಲ್ಲಿ ಶಿರ್ವ ಸೊರ್ಕಳ ಕಿರು ಸೇತುವೆ

07:45 PM Jun 10, 2019 | Sriram |

ಶಿರ್ವ: ಹಲವು ದಶಕಗಳ ಹಿಂದೆ ನಿರ್ಮಾಣಗೊಂಡಿದ್ದ ಶಿರ್ವ, ಕುತ್ಯಾರು ಮತ್ತು ಪಿಲಾರು ಗ್ರಾಮಗಳ ಜನರ ದೈನಂದಿನ ಚಟುವಟಿಕೆಗಳ ಕೊಂಡಿಯಾದ‌ ಶಿರ್ವ ಸೊರ್ಕಳ ಸಂಪರ್ಕ ಸೇತುವೆ ಅಪಾಯದ ಅಂಚಿನಲ್ಲಿದ್ದು ಕುಸಿಯುವ ಭೀತಿಯಲ್ಲಿದೆ.


Advertisement

ನಾಗರಿಕರು ಮತ್ತು ಶಾಲಾ ಕಾಲೇಜು ವಿದ್ಯಾರ್ಥಿಗಳು ಹಾಗೂ 3 ಗ್ರಾಮಗಳ ಕೃಷಿಕರಿಗೆ ಈ ಸಂಪರ್ಕ ಸೇತುವೆ ಉಪಯೋಗಿಸುವ ಅನಿವಾರ್ಯತೆಯಿದ್ದು ಶಿಥಿಲಗೊಂಡಿರುವ ಸೇತುವೆಯ ದುರಸ್ತಿ ಕಾರ್ಯ ನಡೆಯಬೇಕಾಗಿದೆ.

ಪಾದೆಹಿತ್ಲು, ಖಾದ್ರಿಹಿತ್ಲು, ಪಿಲಾರು, ಕುತ್ಯಾರು ಭಾಗದಲ್ಲಿ ಸುಮಾರು 150ಕ್ಕೂ ಹೆಚ್ಚು ಮನೆಗಳಿವೆೆ. ಇಲ್ಲಿನ ಜನರಿಗೆ ಶಿರ್ವಕ್ಕೆ ತೆರಳಲು 5-6 ಕಿ.ಮೀ. ಉಳಿತಾಯ ಮಾಡುವ ಈ ಸಂಪರ್ಕ ಸೇತುವೆಯು ಶಿಥಿಲಾವಸ್ಥೆಯಲ್ಲಿದೆ. ಮಳೆಗಾಲದಲ್ಲಿ ಇದು ಕುಸಿಯುವ ಭೀತಿ ಇದೆ.

ಸಂಚರಿಸುವುದು ಅಪಾಯ
ಸೇತುವೆಯ ತಳಪಾಯದ ಕಲ್ಲು ಮತ್ತು ತಡೆಗೋಡೆ ಕೂಡ ಬಿರುಕು ಬಿಟ್ಟಿದೆ. ಸೇತುವೆಯ ಒಂದು ಭಾಗದ ತಡೆಗೋಡೆಯ ಕಬ್ಬಿಣದ ರಾಡ್‌ ಕಿತ್ತುಹೋಗಿದ್ದು ಮಳೆಗಾಲದಲ್ಲಿ ಸಂಚರಿಸುವ ಶಾಲಾ ಕಾಲೇಜು ವಿದ್ಯಾರ್ಥಿಗಳು ಮತ್ತು ನಾಗರಿಕರಿಗೆ ಅಪಾಯದ ಕರೆಗಂಟೆಯಾಗಿದೆ. ಮಳೆಗಾಲದಲ್ಲಿ ಸೊರ್ಕಳ ಕೆರೆಯ ನೀರು ರಭಸದಿಂದ ಹರಿಯುತ್ತಿದ್ದು , ತಡೆಗೋಡೆಯೂ ಮುರಿದಿರುವುದರಿಂದ ಅಪಾಯ ಕಟ್ಟಿಟ್ಟ ಬುತ್ತಿ. ತಳಪಾಯದ ಕಲ್ಲು ಬಿರುಕು ಬಿಟ್ಟಿರುವುದರಿಂದ ವಾಹನಗಳು ಚಲಿಸಲೂ ಕಷ್ಟಸಾಧ್ಯವಾಗಿದೆ. ಸೇತುವೆಯ ಸಂಪರ್ಕ ಕಡಿತಗೊಂಡಲ್ಲಿ ನಿತ್ಯ ಸಂಚರಿಸುವ ವಾಹನ ಸವಾರರು, ಪಾದಾಚಾ ರಿಗಳು 5-6 ಕಿ.ಮೀ ಸುತ್ತು ಬಳಸಿ ದೂರದ ಪಿಲಾರು ಜಾಲಮೇಲು ಅಥವಾ ಕುತ್ಯಾರು ಮಾಗಂದಡಿಗಾಗಿ ಬರುವ ಮಾರ್ಗಗಳನ್ನೇ ಅವಲಂಬಿಸಬೇಕಾಗಿದೆ.

ಇಚ್ಛಾಶಕ್ತಿ ತೋರಲಿ
ಶಿರ್ವ ಇರ್ಮಿಜ್‌ ಬಳಿಯಿಂದ ಸೇತುವೆವರೆಗಿನ ರಸ್ತೆ ಕೂಡಾ ಸಂಪೂರ್ಣ ದುಸ್ಥಿತಿಯಲ್ಲಿದ್ದು, ದ್ವಿಚಕ್ರ ವಾಹನ ಸವಾರರು ಸರ್ಕಸ್‌ ಮಾಡುವಂತಾಗಿದೆ. ಅಗಲ ಕಿರಿದಾದ ಸೇತುವೆ ಸಂಚಾರ ಸುರಕ್ಷತೆ ದೃಷ್ಟಿ ಯಿಂದಲೂ ಅನುಕೂಲಕರವಾಗಿಲ್ಲ. ನಿತ್ಯ ಸಂಚರಿಸುವ ಇಲ್ಲಿನ ಜನರ, ವಾಹನ ಸವಾರರ ಸಂಕಷ್ಟವನ್ನು ಅರಿತು ಜನಪ್ರತಿನಿಧಿಗಳು, ಜಿಲ್ಲಾಡಳಿತ ಅವಘಡ ಸಂಭವಿಸುವ ಮುನ್ನ ಹೊಸ ಸೇತುವೆ ನಿರ್ಮಿಸುವ ಇಚ್ಛಾಶಕ್ತಿ ತೋರಿದಲ್ಲಿ ಸಮಸ್ಯೆ
ಪರಿಹಾರವಾಗಬಹುದು.

Advertisement

ಅನುದಾನ ಬಿಡುಗಡೆಗೆ ಮನವಿ
ಜಿ.ಪಂ. ನಲ್ಲಿ ಸೇತುವೆಗೆ ಬೇಕಾಗುವಷ್ಟು ಅನುದಾನವಿಲ್ಲದೇ ಇರುವುದರಿಂದ ಕ್ಷೇತ್ರದ ಶಾಸಕರು ಮತ್ತು ಸಂಸದರಿಗೆ ಸೊರ್ಕಳ ಸೇತುವೆಯನ್ನು ನಿರ್ಮಿಸುವಂತೆ ಅನುದಾನ ಬಿಡುಗಡೆಗೊಳಿಸಲು ಮನವಿ ಸಲ್ಲಿಸಲಾಗುವುದು.
-ವಿಲ್ಸನ್‌ ರೊಡ್ರಿಗಸ್‌, ಶಿರ್ವ ಜಿ.ಪಂ. ಸದಸ್ಯ

ಸಂಬಂಧಪಟ್ಟವರು ಕೂಡಲೇ ಎಚ್ಚೆತ್ತುಕೊಳ್ಳಲಿ
ಸೊರ್ಕಳ ಕೆರೆಗೆ ವಿವಿಧ ಕಡೆಯಿಂದ ನೀರು ಹರಿದು ಬರುತ್ತಿರುವುದರಿಂದ ಮಳೆಗಾಲದಲ್ಲಿ ರಭಸವಾಗಿ ನೀರು ಹರಿಯುತ್ತದೆ. ತಳಪಾಯದಲ್ಲಿ ಬಿರುಕು ಬಿಟ್ಟಿರುವುದರಿಂದ ಯಾವುದೇ ಸಮಯದಲ್ಲಿ ಅನಾಹುತ ಸಂಭವಿಸಬಹುದು. ಸಂಬಂಧಪಟ್ಟವರು ಎಚ್ಚೆತ್ತುಕೊಂಡು ದುರಸ್ತಿ ಕಾರ್ಯ ನಡೆಸಬೇಕಿದೆ.
-ಜೇಮ್ಸ್‌ ಕ್ರಿಸ್ಟೋಫರ್‌, ಸ್ಥಳೀಯ ನಿವಾಸಿ

-ಸತೀಶ್ಚಂದ್ರ ಶೆಟ್ಟಿ,ಶಿರ್ವ

Advertisement

Udayavani is now on Telegram. Click here to join our channel and stay updated with the latest news.

Next