Advertisement
ಪಿಲಾರು ಗ್ರಾಮದ ಕುಂಜಿಗುಡ್ಡೆ ನಿವಾಸಿ ನಳಿನಿ (31) ಮತ್ತವರ ಮನೆಯವರು ಡಿ. 4ರ ರಾತ್ರಿ 11 ಗಂಟೆಗೆ ಊಟ ಮಾಡಿ ಮಲಗಿದ್ದರು. ಮಧ್ಯರಾತ್ರಿ ಮನೆಯ ಹಿಂಬದಿ ರಸ್ತೆಯಲ್ಲಿ ಗಲಾಟೆ ಕೇಳಿ ಬಂದಿದ್ದು, ಹಿಂಬದಿ ಕಿಟಿಕಿಯಲ್ಲಿ ನೋಡಿದಾಗ ಪರಿಚಯದ ಪಲಿಮಾರಿನ ಮಯ್ಯದ್ದಿ ಮತ್ತು ಇಬ್ಬರು ಯವಕರು ನಳಿನಿಯವರ ಅಣ್ಣ ಸುರೇಶ್ ಅವರಿಗೆ ಜಾತಿ ನಿಂದನೆಗೈದು ಅವಾಚ್ಯ ಶಬ್ದಗಳಿಂದ ಬೈದು ನಿನಗೆ ದಮ್ ಇದ್ದರೆ ಮನೆಯಿಂದ ಹೊರಗೆ ಬಾ ಎಂದು ಬೊಬ್ಬೆ ಹಾಕಿದ್ದಾರೆ. ಮಯ್ಯದ್ದಿ ತಾನು ಲವೀನಾಳನ್ನು ಪ್ರೀತಿಸುತ್ತಿದ್ದು, ನೀವೆಲ್ಲರೂ ಸೇರಿ ಆಕೆಯನ್ನು ಹೊರದೇಶಕ್ಕೆ ಕಳುಹಿಸಿ ನನ್ನಿಂದ ದೂರ ಮಾಡಿದ್ದೀರಿ. ಇದಕ್ಕೆಲ್ಲಾ ನೀವೇ ಕಾರಣ ಎಂದು ಮನೆಯ ಹಿಂಬದಿಯ ಕಿಟಿಕಿಯ ಗ್ಲಾಸ್ ಒಡೆದು ಹೆಂಚನ್ನು ಪುಡಿ ಮಾಡಿದ್ದಾರೆ. ಬಳಿಕ ಮನೆಯಂಗಳಕ್ಕೆ ಅಕ್ರಮ ಪ್ರವೇಶ ಮಾಡಿ ಮನೆ ಬಾಗಿಲಿಗೆ ತುಳಿದು ಮನೆಯೊಳಗೆ ಬರಲು ಪ್ರಯತ್ನಿಸಿದ್ದಾರೆ. ಈ ಘಟನೆ ನೋಡಿದ ಮನೆಮಂದಿ ಬೊಬ್ಬೆ ಹಾಕಿದ್ದು, ಅಕ್ಕ ಪಕ್ಕದ ಮನೆಯವರು ಬಂದಾಗ ಮನೆಯವರು ಹೊರಗೆ ಬಂದಿದ್ದಾರೆ. ಆಗ ಮಯ್ಯದ್ದಿ ನಳಿನಿಯವರ ಮೈಗೆ ಕೈ ಹಾಕಿ ದೂಡಿದ್ದು, ಅಣ್ಣ ಸುರೇಶನಿಗೆ 3 ಜನರು ಕೈಯಿಂದ ಹೊಡೆದು ಕಾಲಿನಿಂದ ತುಳಿದಿದ್ದಾರೆ. ಅಲ್ಲಿಗೆ ಬಂದಿದ್ದ ಅಕ್ಕಪಕ್ಕದವರು ಸುರೇಶನನ್ನು ರಕ್ಷಿಸಿದ್ದು, ಆರೋಪಿತ ಮೂವರು ತಾವು ಬಂದ ಬೈಕ್‌ನಲ್ಲಿ ತೆರಳಿದ್ದಾರೆ ಎಂದು ದೂರಿನಲ್ಲಿ ನಳಿನಿ ಅವರು ಉಲ್ಲೇಖಿಸಿದ್ದಾರೆ.
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಪಲಿಮಾರು ನಿವಾಸಿ ಪ್ರಜ್ಞೇಶ್ (19) ಪ್ರತಿ ದೂರು ನೀಡಿದ್ದಾರೆ. ಪ್ರಜ್ಞೇಶ್ ತನ್ನ ಸ್ನೇಹಿತರಾದ ಗಿರೀಶ್ ಮತ್ತು ಮಯ್ಯದ್ದಿ ಜತೆ ಪಿಲಾರುಖಾನ ದೇವಸ್ಥಾನದಲ್ಲಿ ಕಾರ್ಯಕ್ರಮ ಮುಗಿಸಿಕೊಂಡು ಹಿಂದಿರುಗಿ ಬರುವಾಗ ಮಯ್ಯದ್ದಿ ತಾನು ಪ್ರೀತಿಸುವ ಹುಡುಗಿಯ ಮನೆ ಇದೇ ದಾರಿಯಲ್ಲಿ ಇದೆ ಎಂದಿದ್ದ. ಆಕೆ ವಿದೇಶದಲ್ಲಿದ್ದು ಊರಿಗೆ ಬಂದಾಗ ಮದುವೆ ಮಾಡಿಕೊಡಬೇಕೆಂದು ಆಕೆಯ ಅಣ್ಣ ಸುರೇಶನಲ್ಲಿ ಕೇಳುವ ಸಲುವಾಗಿ ರಾತ್ರಿ 1 ಗಂಟೆಗೆ ಪಿಲಾರು ಕುಂಜಿಗುಡ್ಡೆ ಅಂಬೇಡ್ಕರ್ ಭವನದ ಎದುರು ಮನೆ ಬಳಿ ಆತನನ್ನು ಕೂಗಿದ್ದಾರೆ. ಆಗ ನೆರೆಕರೆಯವರಾದ ಸಂಜೀವ, ಸಂದೇಶ ಮತ್ತು ಇತರ 5-6 ಮಂದಿ ಬಂದು ಪ್ರಜ್ನೆàಶ್ ಮತ್ತಿಬ್ಬರಿಗೆ ದೊಣ್ಣೆ, ಸೋಂಟೆಯಿಂದ ಹಲ್ಲೆ ನಡೆಸಿದ್ದಾರೆ. ಹಲ್ಲೆಗೊಳಗಾದವರು 108 ವಾಹನದಲ್ಲಿ ಚಿಕಿತ್ಸೆ ಬಗ್ಗೆ ಜಿಲ್ಲಾ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದು, ಪ್ರಜ್ಞೇಶ್ ಮತ್ತು ಗಿರೀಶ್ ಒಳರೋಗಿಯಾಗಿ ಮತ್ತು ಮಯ್ಯದ್ದಿ ಹೊರರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರೋಪಿಗಳಾದ ಸುರೇಶ್, ಸಂಜೀವ, ಸಂದೇಶ್ ಮತ್ತು ಇತರ 5-6 ಮಂದಿ ಸೇರಿ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ್ದಲ್ಲದೆ, ಅವರು ಬಂದ ಬೈಕನ್ನು ದೊಣ್ಣೆಯಿಂದ ಜಖಂಗೊಳಿಸಿ ಗಿರೀಶ್ ಅವರ ಮೊಬೈಲ್ ಹೊಡೆದಿದ್ದಾರೆ ಎಂದು ಪ್ರಜ್ಞೇಶ್ ನೀಡಿದ ದೂರಿನಂತೆ ಶಿರ್ವ ಠಾಣೆಯಲ್ಲಿ ಪ್ರತಿದೂರು ದಾಖಲಾಗಿದೆ.