ತುಳುನಾಡಿನ ಧಾರ್ಮಿಕ ಆಚರಣೆಗಳ ಐತಿಹಾಸಿಕ ಹಿನ್ನೆಲೆಯಿರುವ ಶಿರ್ವ ನಡಿಬೆಟ್ಟು ಚಾವಡಿ ಮನೆಯು ಸುಮಾರು 500-600 ವರ್ಷಗಳ ಇತಿಹಾಸವನ್ನು ಹೊಂದಿದೆ. ಚಾವಡಿಯ ಮರದ ಕಂಬಗಳಲ್ಲಿ ಮತ್ತು ಮೇಲ್ಛಾವಣಿಯಲ್ಲಿ ಕಲಾತ್ಮಕ ಶೈಲಿಯ ಕೆತ್ತನೆಯ ಕುಸುರಿಗಳನ್ನು ಹೊಂದಿದೆ. ಕರ್ನಾಟಕ ರಾಜ್ಯದ ಲಾಂಛನ ಗಂಡಬೇರುಂಡ ಶತಮಾನಗಳ ಹಿಂದೆಯೇ ಚಾವಡಿಯ ಕಂಬದಲ್ಲಿ ಕೆತ್ತಲ್ಪಟ್ಟಿದ್ದು, ತುಳುನಾಡಿನ ಐತಿಹಾಸಿಕ ಪರಂಪರೆಯನ್ನು ಬಿಂಬಿಸುವ ಗತ ವೈಭವವನ್ನು ಸಾರುತ್ತಿದೆ.
ಮನೆಯ ಚಾವಡಿ ಹತ್ತಲು 9 ಮೆಟ್ಟಿಲುಗಳಿದ್ದು, ಮೊದಲ ಮೆಟ್ಟಿಲು ಹಾಸುಗಲ್ಲು ಆಗಿದೆ. ಪಾಪನಾಶಿನಿ ನದಿಯ ನೆರೆ ನೀರು ಚಾವಡಿಯ ಮೊದಲ ಮೆಟ್ಟಿಲು ಹಾಸುಗಲ್ಲು ಸ್ಪರ್ಶಿಸಿದ ಕೂಡಲೇ ಮನೆಯ ಮುತ್ತೈದೆ ಗಂಗಾ ಮಾತೆಗೆ ಬಾಗಿನ ಸಮರ್ಪಿಸುವುದು ಮನೆತನದ ಸಂಪ್ರದಾಯ. ಮೆಟ್ಟಿಲಿನ ಇಕ್ಕೆಲದಲ್ಲಿ ನ್ಯಾಯ ತೀರ್ಮಾನದ ಕಟ್ಟೆ ಇದ್ದು, ಚಾವಡಿಯಲ್ಲಿ ಪಟ್ಟದ ಮಂಚವಿದೆ. ಇದು ಯಜಮಾನರ ಆಳ್ವಿಕೆಯ ಆಸ್ಮಿತೆಯ ಕುರುಹಾಗಿದೆ. ಮನೆಯ ಇತಿಹಾಸದ ಬಗ್ಗೆ ಇತಿಹಾಸ ತಜ್ಞ ದಿ|ಡಾ|ಪಾದೂರು ಗುರುರಾಜ ಭಟ್ ತನ್ನ ತುಳುನಾಡಿನ ಇತಿಹಾಸ ಪುಸ್ತಕದಲ್ಲಿ ಉಲ್ಲೇಖೀಸಿದ್ದಾರೆ. ಜೀರ್ಣಾವಸ್ಥೆಯಲ್ಲಿದ್ದ ಮನೆಯು 2003ರಲ್ಲಿ ಶಿರ್ವ ನಡಿಬೆಟ್ಟು ನಿತ್ಯಾನಂದ ಹೆಗ್ಡೆಯವರ ನೇತೃತ್ವದಲ್ಲಿ ನ್ಯಾಯ ತೀರ್ಮಾನ ಕಟ್ಟೆಗೆ ಧಕ್ಕೆಯಾಗದಂತೆ ಮೂಲಸ್ವರೂಪದೊಂದಿಗೆ ನವೀಕರಣಗೊಂಡಿತ್ತು.
ಪೌರಾಣಿಕ ಹಿನ್ನೆಲೆ
ನಡಿಬೆಟ್ಟು ಚಾವಡಿಯಲ್ಲಿ ಕಾಂತೇರಿ ಜುಮಾದಿ ದೈವವು ತನ್ನ ಪರಿವಾರ ದೈವಗಳೊಂದಿಗೆ ಆರೂಢನಾಗಿದ್ದು ಹಿರಿಯರ ಮಾಹಿತಿಯ ಪ್ರಕಾರ ಶಿರ್ವ ನಡಿಬೆಟ್ಟು ಮನೆ ತುಳುನಾಡಿನ 1001 ದೈವಗಳ ನೆಲೆವೀಡಾಗಿದೆ. ಚಾವಡಿ ಮನೆಯಲ್ಲಿ ಕಾಲಕಾಲಕ್ಕೆ ಪಂಚಪರ್ವ ಸೇವೆ ನಡೆಯುತ್ತಿದ್ದು, ಚಾವಡಿಯ ದೈವಗಳಿಗೆ ರಕ್ತಹಾರವಿಲ್ಲ ಅಲ್ಲದೆ ವಾರ್ಷಿಕ ತಂಬಿಲ ಸೇವೆಯೂ ನಡೆಯುವುದಿಲ್ಲ.
ತೆಂಕಣ ರಾಜ್ಯದಿಂದ ಶಿರ್ವ ಜತ್ರೊಟ್ಟು ಬರ್ಕೆಗೆ ಬಂದ ಜಾರಂದಾಯ ದೈವವು ಅಟ್ಟಿಂಜೆ ಗೋಳಿಯಲ್ಲಿ ಮರವೇರಿ ಸುತ್ತ ಮುತ್ತ ನೋಡಿದಾಗ ಪ್ರಕಾಶಮಾನವಾಗಿ ಕಂಗೊಳಿಸುತ್ತಿರುವ ನಡಿಬೆಟ್ಟು ಚಾವಡಿ ಕಾಣಿಸಿಕೊಳ್ಳುತ್ತದೆ. ರಾಜನ್ ದೈವವಾದ ಜಾರಂದಾಯ ದೈವವು ತನಗೆ ನೆಲೆಯೂರಲು ಸತ್ಯ ಧರ್ಮದ ನೆಲೆವೀಡಾಗಿದ್ದ ಶಿರ್ವ ನಡಿಬೆಟ್ಟು ಚಾವಡಿಯೇ ಸೂಕ್ತ ಸ್ಥಳವೆಂದು ನಿರ್ಧರಿಸಿ ನಡಿಬೆಟ್ಟು ಚಾವಡಿಗೆ ಬರುತ್ತದೆ. ಆಗ ಅಲ್ಲಿ ವಿರಾಜಮಾನನಾಗಿದ್ದ ಚಾವಡಿಯ ರಾಜನ್ ದೈವ ಶ್ರೀ ಜುಮಾದಿಯ ಆಶಯದಂತೆ ಶ್ರೀ ವಿಷ್ಣುಮೂರ್ತಿ ದೇವರ ಬಳಿ ತೆರಳಿದ ಜಾರಂದಾಯ ದೈವವು ದೇವರ ಕೃಪಾಕಟಾಕ್ಷದಿಂದ ನಾರಿಕೇಳ ಫಲದ ಮೂಲಕ ನಾಗ ಸಾನಿಧ್ಯವಿರುವ ನ್ಯಾರ್ಮ ಉರಿಉಂಡಾಲ ಪಾದೆಯಲ್ಲಿ ನೆಲೆಗೊಂಡು ನ್ಯಾರ್ಮ ಶ್ರೀ ಧರ್ಮಜಾರಂದಾಯ ದೈವವಾಗಿ ಗ್ರಾಮದ ರಕ್ಷಣೆಯನ್ನು ಮಾಡುತ್ತಿದೆ. ಶ್ರೀ ಧರ್ಮ ಜಾರಂದಾಯ ದೈವವು ಶಿರ್ವ ನಡಿಬೆಟ್ಟು ಚಾವಡಿಗೆ ಭೇಟಿ ನೀಡಿದ ಕುರುಹಾಗಿ ಚಾವಡಿಯ ದೈವ ಶ್ರೀ ಜುಮಾದಿಯ ಆಶಯದಂತೆ ನ್ಯಾರ್ಮ ಶ್ರೀ ಧರ್ಮ ಜಾರಂದಾಯ ದೈವಸ್ಥಾನದಲ್ಲಿ ಹರಕೆಯ ನೇಮ ಜರಗುವಾಗ ಶಿರ್ವ ನಡಿಬೆಟ್ಟು ಚಾವಡಿಯ ದೈವ ಜುಮಾದಿಯ ಭಂಡಾರ ಬರುವುದು ಇಂದಿಗೂ ವಾಡಿಕೆಯಾಗಿದೆ. ಪುರಾತನ ಸಂಪ್ರದಾಯದಂತೆ ಶಿರ್ವ ನಡಿಬೆಟ್ಟಿನ ನೇಮದಂದು ನಡಿಬೆಟ್ಟು ಚಾವಡಿಯಿಂದ ದೈವದ ವಡ್ಯಾಣವನ್ನು ಅಲಂಕಾರದೊಂದಿಗೆ ದೈವದ ಸಾನಿಧ್ಯಕ್ಕೆ ತರಲಾಗುತ್ತದೆ.
ನ್ಯಾಯ ತೀರ್ಮಾನ
ಪುರಾತನ ಕಾಲದ ತುಳುನಾಡಿನ ಜನರಲ್ಲಿ ಯಾವುದೇ ದೂರು ದುಮ್ಮಾನಗಳು ಇದ್ದಲ್ಲಿ ಶಿರ್ವ ನಡಿಬೆಟ್ಟು ಯಜಮಾನರ ಸಮ್ಮುಖದಲ್ಲಿ ಚಾವಡಿಯಲ್ಲಿರುವ ನ್ಯಾಯ ತೀರ್ಮಾನ ಕಟ್ಟೆಯಲ್ಲಿ ಪಂಚಾಯತಿಕೆ ನಡೆದು ನ್ಯಾಯ ತೀರ್ಮಾನವಾಗುತ್ತಿತ್ತು. ಇದು ಒಂದು ಅರ್ಥದಲ್ಲಿ ಸತ್ಯ ಧರ್ಮದ ನ್ಯಾಯ ತೀರ್ಮಾನದ ತಾಣ ತುಳುನಾಡಿನ ನ್ಯಾಯಾಲಯವೇ ಆಗಿತ್ತು. ಅಲ್ಲದೆ ಹಿಂದೆ ತುಳುನಾಡಿನ ಕೆಲವು ಸಮಾಜದಲ್ಲಿ ಜನರು ತಪ್ಪು ಮಾಡಿದಲ್ಲಿ ಜಾತಿ ಭ್ರಷ್ಟರನ್ನಾಗಿ ಮಾಡುವ ಪದ್ಧತಿಯಿತ್ತು. ಆ ಸಮಯದಲ್ಲಿ ಶಿರ್ವ ನಡಿಬೆಟ್ಟು ಮನೆಗೆ ಬಂದು ದೈವ ಜುಮಾದಿಯಲ್ಲಿ ಅರಿಕೆ ಮಾಡಿ ತಪ್ಪು ಕಾಣಿಕೆ ಹಾಕಿ ಬಾವಿಯ ನೀರು ಕುಡಿದಲ್ಲಿ ಜಾತಿ ಬರುತ್ತದೆ ಎಂಬ ನಂಬಿಕೆಯಿತ್ತು.
ವಿಶಿಷ್ಟ ಸಂಪ್ರದಾಯ
ಶ್ರಾವಣ ಮಾಸದಲ್ಲಿ ಮನೆಗೆ ಹೊಸತು ತುಂಬುವ ದಿನ ಶಿರ್ವ ಶ್ರೀವಿಷ್ಣುಮೂರ್ತಿ ದೇವಸ್ಥಾನದಿಂದ ವಾದ್ಯ ಘೋಷದೊಂದಿಗೆ ಕದಿರು (ತೆನೆ) ತಂದು ಚಾವಡಿಯ ಉಯ್ನಾಲೆಯಲ್ಲಿರಿಸಿ ದೈವ ಜುಮಾದಿಯ ಪೂಜೆ ಪುರಸ್ಕಾರದೊಂದಿಗೆ ಮನೆ ತುಂಬಿಸುವುದು ವಾಡಿಕೆಯಾಗಿದ್ದು, ಅನೂಚಾನವಾಗಿ ನಡೆದುಕೊಂಡು ಬರುತ್ತಿದೆ. ತುಳುನಾಡಿನ ಬಂಟಸಮಾಜದ ಸಂಪ್ರದಾಯದಂತೆ ಮನೆಯ ಸದಸ್ಯರು ಗತಿಸಿದಲ್ಲಿ ಉತ್ತರಕ್ರಿಯೆಯ ಸಂದರ್ಭ ಕಾಗೆಗೆ ಪಿಂಡ ಪ್ರದಾನ ಮಾಡುವ ಪದ್ಧತಿ ನಡಿಬೆಟ್ಟು ಮನೆತನದಲ್ಲಿ ಇಂದಿಗೂ ಇಲ್ಲ. ಅಲ್ಲದೆ ಯಾವುದೋ ಕಾರಣದಿಂದ ಮನೆಯ ಗರ್ಭಿಣಿ ಮಹಿಳೆಯರಿಗೆ ಸೀಮಂತ ಹಾಕುವ ಕ್ರಮವೂ ಇಲ್ಲ. ಮನೆತನದ ಹಿರಿಯ ವ್ಯಕ್ತಿ ಮನೆಯ ಯಜಮಾನನಾಗಿ ಕರ್ತವ್ಯ ನಿರ್ವಹಿಸಬೇಕಾಗಿದ್ದು, ಪ್ರಸ್ತುತ ಶಿರ್ವ ನಡಿಬೆಟ್ಟು ಮನೆತನದ ಯಜಮಾನರಾಗಿ ದಾಮೋದರ ಚೌಟ ಕಾರ್ಯನಿರ್ವಹಿಸುತ್ತಿದ್ದಾರೆ.
ಪುರಾತನ ಕಾಲದಲ್ಲಿ ಶಿರ್ವ ನಡಿಬೆಟ್ಟು ಮನೆತನದಲ್ಲಿ ಸುಮಾರು 500 ಎಕ್ರೆಗೂ ಮಿಕ್ಕಿ ಭೂಮಿಯ ಒಡೆತನ ಇದ್ದು ಕುಂಜಾರು ಶ್ರೀ ದುರ್ಗಾದೇವಿ ದೇವಸ್ಥಾನ, ಶಿರ್ವ ಮಾಣಿಬೆಟ್ಟು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಮಾಣಿಬೆಟ್ಟು ಶ್ರೀ ಬ್ರಹ್ಮ ಬೈದರ್ಕಳ ಗರಡಿ, ಶಿರ್ವ ಶ್ರೀ ವಿಷ್ಣುಮೂರ್ತಿ ದೇವಸ್ಥಾನ,ಶಿರ್ವ ಶ್ರೀ ಮಹಮ್ಮಾಯಿ ಮಾರಿಗುಡಿ, ಶಿರ್ವ ನ್ಯಾರ್ಮ ಶ್ರೀ ಧರ್ಮ ಜಾರಂದಾಯ ದೈವಸ್ಥಾನ,ಶಿರ್ವ ನಡಿಬೆಟ್ಟು ಬಬ್ಬುಸ್ವಾಮಿ ದೈವಸ್ಥಾನ, ಮಟ್ಟಾರು ಶ್ರೀ ಬಬ್ಬರ್ಯ ದೈವಸ್ಥಾನ ಮಾತ್ರವಲ್ಲದೆ ಶಿರ್ವ ಗ್ರಾಮಕ್ಕೆ ಸಂಬಂಧಪಟ್ಟ ಹಲವಾರು ದೇವಸ್ಥಾನ ದೈವಸ್ಥಾನಗಳ ಆಡಳಿತ ಶಿರ್ವ ನಡಿಬೆಟ್ಟು ಮನೆತನಕ್ಕೆ ಸೇರಿತ್ತು. ದೇವಸ್ಥಾನ ದೈವಸ್ಥಾನಗಳ ವಿನಿಯೋಗಕ್ಕೆಂದೇ ಕೆಲ ಆಸ್ತಿಯನ್ನು ಮೀಸಲಿಡಲಾಗಿತ್ತು. ಕಾಲಕ್ರಮೇಣ ಕೆಲವು ದೇವಸ್ಥಾನ, ದೈವಸ್ಥಾನ ಮತ್ತು ಗರಡಿಯ ಆಡಳಿತವು ಅನ್ಯರ ಪಾಲಾಗಿ ವಿನಿಯೋಗದ ಭೂಮಿಯೂ ಉಳುವವನ ಕೈಸೇರಿತ್ತು.
ಶ್ರೀ ವಿಷ್ಣುಮೂರ್ತಿ ದೇವಸ್ಥಾನ
ಶತಮಾನಗಳ ಹಿಂದೆ ತುಳುನಾಡಿನ ದೇವಸ್ಥಾನ, ದೈವಸ್ಥಾನಗಳ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಶಿರ್ವ ನಡಿಬೆಟ್ಟು ಮನೆತನಕ್ಕೆ ದೇವರ ಪ್ರಥಮ ಪ್ರಸಾದ ಸಲ್ಲುವುದು ವಾಡಿಕೆಯಾಗಿತ್ತು. ಒಮ್ಮೆ ಶಿರ್ವ ನಡಿಬೆಟ್ಟು ಯಜಮಾನರು ಎರ್ಮಾಳು ಶ್ರೀ ಜನಾರ್ಧನ ದೇವಸ್ಥಾನಕ್ಕೆ ತೆರಳಿದ್ದಾಗ ಅಲ್ಲಿ ದೇವರ ಪ್ರಸಾದದ ವಿಚಾರದಲ್ಲಿ ಮನಸ್ತಾಪವುಂಟಾಗಿ ಯಜಮಾನರು ಬೇಸರದಿಂದ ಹಿಂದೆ ಬಂದಿದ್ದರಂತೆ. ಆ ದಿನ ರಾತ್ರಿ ಶ್ರೀ ಜನಾರ್ಧನ ದೇವರು ಯಜಮಾನರಿಗೆ ಕನಸಿನಲ್ಲಿ ಬಂದು ಪ್ರಸಾದದ ವಿಚಾರದಲ್ಲಿ ನೀನು ಬೇಸರಿಸಬೇಡ, ನನಗಾಗಿ ನೀನೇ ಒಂದು ದೇವಸ್ಥಾನವನ್ನು ನಿರ್ಮಿಸು ಎಂದು ಶ್ರೀ ದೇವರು ನೀಡಿದ ಅಭಯದಂತೆ ಎರ್ಮಾಳು ಶ್ರೀ ಲಕ್ಷ್ಮೀ ಜನಾರ್ಧನ ದೇವರನ್ನು ಹೋಲುವ ವಿಗ್ರಹದೊಂದಿಗೆ ಶಿರ್ವ ವಿಷ್ಣುಮೂರ್ತಿ ದೇವಸ್ಥಾನ ನಿರ್ಮಾಣಗೊಂಡಿತ್ತು. ಇದಕ್ಕೆ ಪೂರಕವೆಂಬಂತೆ ಇಂದಿಗೂ ಎರ್ಮಾಳು ಶ್ರೀ ಲಕ್ಷ್ಮೀ ಜನಾರ್ಧನ ದೇವರ ಉತ್ಸವದ ದಿನ ಅಂದರೆ ಪೆರಾರ್ದೆ ಸಂಕ್ರಮಣದಂದು ಶಿರ್ವ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಧ್ವಜಾರೋಹಣ ನಡೆದು ವಾರ್ಷಿಕ ಮನ್ಮಹಾರೋತ್ಸವ ನೆರವೇರುತ್ತಿದೆ.
ಧಾರ್ಮಿಕ ಹಿನ್ನೆಲೆಯ ಐತಿಹಾಸಿಕ ಕಂಬಳ
ಶತಮಾನಗಳಿಂದ ನಡೆದು ಬರುತ್ತಿರುವ ಐತಿಹಾಸಿಕ ಶಿರ್ವ ನಡಿಬೆಟ್ಟು ಕಂಬಳವು ಧಾರ್ಮಿಕ ಹಿನ್ನೆಲೆಯನ್ನು ಹೊಂದಿದೆ. ಕಂಬಳಕ್ಕೂ ಮುಂಚೆ ಕುದಿ ಕಂಬಳ ನಡೆಯುತ್ತದೆ. ಕಂಬಳದ ಮುನ್ನಾದಿನ ರಾತ್ರಿ ಕಂಬಳ ಗದ್ದೆಯ ಬಳಿ ಕೊರಗ ಜನಾಂಗದವರು ಸಾಂಪ್ರದಾಯಿಕವಾಗಿ ಡೋಲು ಬಾರಿಸಿ ಪನಿಕುಲ್ಲುನು ಎಂಬ ಆಚರಣೆ ನಡೆಸುತ್ತಾರೆ. ಮನೆತನದಿಂದ ಅಡಿಕೆ ವೀಳ್ಯದೆಲೆಯೊಂದಿಗೆ ಕಾಣಿಕೆ ಪಡೆದು ಮರುದಿನ ಕಂಬಳ ಮುಗಿಯುವವರೆಗೆ ಡೋಲು ಸೇವೆ ನಡೆಸುತ್ತಾರೆ. ಕಂಬಳದ ದಿನ ಶಿರ್ವ ಮಹತೋಭಾರ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಹೂವಿನ ಪೂಜೆ ನಡೆದು, ಗೆಜ್ಜಾಲು ಮತ್ತು ಕಂಬಳದ ಮಂಜೊಟ್ಟಿಯ ನಾಗದೇವರಿಗೆ ತನು ತಂಬಿಲ ಸಮರ್ಪಣೆಯಾದ ಬಳಿಕ ನಡಿಬೆಟ್ಟು ಚಾವಡಿಯ ದೈವ ಜುಮಾದಿಗೆ ಪೂಜೆ ಪುರಸ್ಕಾರ ನಡೆಯುತ್ತದೆ. ಬಳಿಕ ಬಂಟ ಕೋಲ ನಡೆದು ಮೆರವಣಿಗೆಯಲ್ಲಿ ಕೊಂಬು, ವಾದ್ಯಘೋಷಗಳೊಂದಿಗೆ ಮನೆಯ ಕೋಣಗಳನ್ನು ಗದ್ದೆಗಿಳಿಸಲಾಗುವುದು. ಶತಮಾನದ ಹಿಂದಿನ ರೂಢಿಯಂತೆ ಶಿರ್ವ ನಡಿಬೆಟ್ಟು ಮನೆತನದ ಕೋಣಗಳು ಕರೆಗೆ ಇಳಿದು ಅವುಗಳ ಓಟದೊಂದಿಗೆ ಕಂಬಳ ಪ್ರಾರಂಭಗೊಂಡು, ಶಿರ್ವ ನಂಗ್ಯೆಟ್ಟು ಮನೆಯ ಕೋಣಗಳ ಓಟದೊಂದಿಗೆ ಕಂಬಳ ಕೊನೆಗೊಳ್ಳುತ್ತದೆ. ಕಂಬಳ ಮುಗಿದ ಬಳಿಕ ಬಂಟ ದೈವವು ಕಂಬಳ ಕರೆಗೆ ಸುತ್ತು ಹಾಕಿ ಮನೆಗೆ ಹಿಂತಿರುಗಿ ಬಂದು ಅಗೇಲು ಸೇವೆಯೊಂದಿಗೆ ಕಂಬಳ ಪ್ರಕ್ರಿಯೆ ಸಮಾಪನಗೊಳ್ಳುತ್ತದೆ.
ಶಿರ್ವ ನಡಿಬೆಟ್ಟು ಕಂಬಳಕ್ಕೆ ವಿಶೇಷ ಧಾರ್ಮಿಕ ಹಿನ್ನೆಲೆಯಿದೆ. ಶಿರ್ವದ ದೈವ ದೇವರುಗಳ ಉತ್ಸವಗಳಲ್ಲಿ ಒಂದಕ್ಕೊಂದು ಸಂಬಂಧವಿದ್ದು ಸಂಪ್ರದಾಯ ಬದ್ಧವಾಗಿ ಕಂಬಳ ನಡೆಯುತ್ತದೆ. ಶಿರ್ವ ನ್ಯಾರ್ಮ ಜಾರಂದಾಯ ದೈವಸ್ಥಾನದಲ್ಲಿ ಜಾರ್ದೆ ತಿಂಗಳಲ್ಲಿ ಚೌತಿ ಹಾಗೂ ದೀಪಾವಳಿ ಹಬ್ಬದ ಸೇವೆ ಆದ ಬಳಿಕ ಕಂಬಳ ನಡೆಯುವುದು ರೂಢಿ. ನಡಿಬೆಟ್ಟು ಕಂಬಳ ನಡೆಯದೆ ಶಿರ್ವ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಉತ್ಸವದ ಧ್ವಜಾರೋಹಣ ನಡೆಯುವಂತಿಲ್ಲ. ಕಂಬಳದ ಬಳಿಕ ಧ್ವಜಾರೋಹಣದೊಂದಿಗೆ ಉತ್ಸವ ನಡೆದು ಧ್ವಜಾವರೋಹಣದ ಬಳಿಕ ಬರುವ ಮಂಗಳವಾರ ಶಿರ್ವ ಮಹಮ್ಮಾಯಿ ಮಾರಿಗುಡಿಯಲ್ಲಿ ಮಾರಿಪೂಜೆಗೆ ದಿನ ನಿಗದಿಯಾಗಿ 2ನೇ ಮಂಗಳವಾರ ಮಾರಿಪೂಜೆ ನೆರವೇರುವುದು.
ಎನ್ನ ಕಂಬುಲ ಬಾಳ್‌ಂಡ್
ಶತಮಾನಗಳ ಹಿಂದೆ ಬ್ರಿಟಿಷ್ ಆಳ್ವಿಕೆಯ ಕಾಲದಲ್ಲಿ ಬ್ರಿಟಿಷರ ದಬ್ಟಾಳಿಕೆಗೆ ಸೊಪ್ಪು ಹಾಕದ ಮನೆಯ ಯಜಮಾನರು ಕಂದಾಯ ಪಾವತಿ ವಿಚಾರದಲ್ಲಿ ರಾಜಿಮಾಡಿಕೊಳ್ಳದೆ ಬಂಧಿಯಾಗಿದ್ದರಂತೆ. ಆ ಸಮಯದಲ್ಲಿ ಶ್ರೀ ವಿಷ್ಣುಮೂರ್ತಿ ದೇವರ ಉತ್ಸವದ ಮೊದಲು ಕಂಬಳ ನಡೆಯ ಬೇಕಾಗಿದ್ದುದರಿಂದ ಕಂಬಳಕ್ಕೆ ದಿನ ನಿಗದಿಯಾಗಿತ್ತು. ಕಂಬಳದ ದಿನ ಯಜಮಾನರ ಉಪಸ್ಥಿತಿಗಾಗಿ ಬ್ರಿಟಿಷ್ ಅಧಿಕಾರಿಯಲ್ಲಿ ಕುಟುಂಬದ ಸದಸ್ಯರು ಬಿನ್ನವಿಸಿದಾಗ ಆತ ಬಿಡುಗಡೆ ಮಾಡಲಿಲ್ಲ. ಸತ್ಯ ಧರ್ಮದ ಆ ಕಾಲದಲ್ಲಿ ನಿಗದಿಯಾದ ದಿನದಂದೇ ಕಾರಣಿಕದ ಕಂಬಳ ನಡೆದು ಸೆರೆಮನೆಯಲ್ಲಿ ಬಂಧಿಯಾಗಿದ್ದ ಯಜಮಾನರು ಧರಿಸಿದ ಅಂಗಿಯಲ್ಲಿ ಕಂಬಳಗದ್ದೆಯ ಕೆಸರು ನೀರು ಸಿಂಚನಗೊಂಡಿತ್ತು. ಆಗ ಯಜಮಾನರು ‘ಎನ್ನ ಕಂಬುಲ ಬಾಳ್‌ಂಡ್’ ಎಂದು ಉದ್ಘಾರ ತೆಗೆದರಂತೆ. ಇದನ್ನು ಕಂಡ ಬ್ರಿಟಿಷ್ ಅಧಿಕಾರಿ ದಿಗ್ಭ್ರಮೆಗೊಂಡು ತನ್ನ ಅಧಿಕಾರಿಗಳನ್ನು ಶಿರ್ವ ನಡಿಬೆಟ್ಟಿಗೆ ಕಳುಹಿಸಿದಾಗ ಅಲ್ಲಿ ಕಂಬಳ ನಡೆಯುತ್ತಿತ್ತು. ಸಹಚರರಿಂದ ಮಾಹಿತಿ ಪಡೆದ ಬ್ರಿಟಿಷ್ ಅಧಿಕಾರಿಯು ಕಂಬಳದ ಕಾರಣಿಕ ಅರಿತು ಯಜಮಾನರನ್ನು ರಾಜ ಮರ್ಯಾದೆಯೊಂದಿಗೆ ಶಿರ್ವ ನಡಿಬೆಟ್ಟು ಮನೆಗೆ ಕಳುಹಿಸಿಕೊಟ್ಟಿದ್ದರು ಎಂಬುದು ಹಿರಿಯರಿಂದ ತಿಳಿದು ಬಂದ ಮಾಹಿತಿ. ಬ್ರಿಟಿಷರ ದಬ್ಬಾಳಿಕೆಯ ಕಾಲದಲ್ಲಿ ಈ ಘಟನೆ ಶಿರ್ವ ಪರಿಸರದಲ್ಲಿ ಸ್ವಾಭಿಮಾನದ ಸ್ವಾತಂತ್ಯ ಹೋರಾಟಕ್ಕೆ ಮುನ್ನುಡಿ ಬರೆದಿರಲೂ ಬಹುದು.
ಸೂರ್ಯ-ಚಂದ್ರ ಜೋಡುಕರೆ ಕಂಬಳ
ಶತಮಾನಗಳಿಂದ ನಡೆದು ಬರುತ್ತಿರುವ ಶಿರ್ವ ನಡಿಬೆಟ್ಟು ಕಂಬಳವು 1996ರಲ್ಲಿ ಶಿರ್ವ ನಡಿಬೆಟ್ಟು ರಘುರಾಮ ನಾಯ್ಕ ಅವರ ನೇತೃತ್ವದಲ್ಲಿ ಸೂರ್ಯ-ಚಂದ್ರ ಜೋಡುಕರೆ ಕಂಬಳವಾಗಿ ಪರಿವರ್ತನೆಗೊಂಡಿತು. ಬಳಿಕ ಅವಿಭಜಿತ ದ.ಕ. ಮತ್ತು ಉಡುಪಿ ಜಿಲ್ಲೆಯ ಕಂಬಳ ಸಮಿತಿಯಲ್ಲಿ ಸೇರ್ಪಡೆಗೊಂಡು ಸೂರ್ಯ-ಚಂದ್ರ ಜೋಡುಕರೆ ಕಂಬಳವು ಕೂಟದ ಪ್ರಥಮ ಜೋಡುಕರೆ ಕಂಬಳವಾಗಿ ಶಿರ್ವದಲ್ಲಿ ನಡೆಯುತ್ತಿತ್ತು. 2014ರಲ್ಲಿ ಸುಪ್ರೀಂ ಕೋರ್ಟ್‌ನ ಆದೇಶದಿಂದಾಗಿ ಕಂಬಳದ ಹಿಂದಿನ ದಿನ ರದ್ದುಗೊಂಡಿದ್ದು, ಕಟ್ಟುಕಟ್ಟಳೆ ಪ್ರಕಾರ ಕಂಬಳ ಮುಗಿಸಲಾಗಿತ್ತು. ಅನಾದಿ ಕಾಲದಿಂದಲೂ ಸಂಪ್ರದಾಯಬದ್ಧವಾಗಿ ನಡೆಯುತ್ತಿದ್ದ ಶಿರ್ವ ನಡಿಬೆಟ್ಟು ಕಂಬಳವು 1996ರಿಂದ 2014ರವರೆಗೆ ಕಂಬಳ ಸಮಿತಿಯ ಸೂರ್ಯ-ಚಂದ್ರ ಜೋಡುಕರೆ ಕಂಬಳವಾಗಿ ನಡೆದು ಪ್ರಸಿದ್ಧಿಯಾಗಿತ್ತು. 2014ರ ಬಳಿಕ ಜೋಡುಕರೆ ಕಂಬಳವು ಸುಮಾರು 45-50 ಜೋಡಿ ಕೋಣಗಳೊಂದಿಗೆ ಬೆಳಿಗ್ಗಿನಿಂದ ಸಂಜೆಯವರೆಗೆ ಹಗಲು ವೇಳೆ ಮಾತ್ರ ನಡೆದುಕೊಡು ಬರುತ್ತಿದೆ. ಪ್ರಸುತ ಶಿರ್ವ ನಡಿಬೆಟ್ಟು ಮನೆತನದ ಯಜಮಾನ ದಾಮೋದರ ಚೌಟ ಅವರ ಮುಂದಾಳುತ್ವದಲ್ಲಿ ವ್ಯವಸ್ಥಾಪಕ ಶಿರ್ವ ನಡಿಬೆಟ್ಟು ಶಶಿಧರ ಹೆಗ್ಡೆಯವರು ಊರವರ ಸಹಕಾರದೊಂದಿಗೆ ಕಂಬಳವನ್ನು ವಿಜೃಂಭಣೆಯಿಂದ ನಡೆಸಿಕೊಂಡು ಬರುತ್ತಿದ್ದಾರೆ.
ಬಾಗಿನ ಸಮರ್ಪಣೆ
ತುಳುನಾಡಿನಲ್ಲಿ ನದಿಗೆ ಬಾಗಿನ ಸಮರ್ಪಣೆಯ ಇತಿಹಾಸವಿಲ್ಲ. ಪಾಪನಾಶಿನಿ ನದಿಯ ನೆರೆ ನೀರು ಶಿರ್ವ ನಡಿಬೆಟ್ಟು ಚಾವಡಿಯ ಮೊದಲ ಮೆಟ್ಟಿಲನ್ನು ಸ್ಪರ್ಶಿಸಿದ ಕೂಡಲೇ ಮನೆಯ ಮುತ್ತೈದೆ ಗಂಗಾ ಮಾತೆಗೆ ಬಾಗಿನ ಸಮರ್ಪಿಸುವುದು ಮನೆತನದ ಸಂಪ್ರದಾಯ. ಇತಿಹಾಸ ಪ್ರಸಿದ್ಧ ಶಿರ್ವ ನಡಿಬೆಟ್ಟು ಮನೆಗೆ 2020ರ ಸೆ. 20 ರಂದು ಪಾಪನಾಶಿನಿ ನದಿ ನೀರು ಮನೆಯ ಮೊದಲ ಮೆಟ್ಟಿಲನ್ನು ಸ್ಪರ್ಶಿಸಿದ್ದು, ಸುಮಾರು 70 ವರ್ಷಗಳ ಬಳಿಕ ಪಾಪನಾಶಿನಿಗೆ ಬಾಗಿನ ಸಮರ್ಪಿಸುವ ಮೂಲಕ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿತ್ತು. ಬಾಳೆ ಎಲೆಯಲ್ಲಿ ಬೆಳ್ತಿಗೆ ಅಕ್ಕಿ, ತೆಂಗಿನಕಾಯಿ, ಅಡಿಕೆ, ವೀಳ್ಯದೆಲೆ, ಅರಸಿನ ಕುಂಕುಮ, ಮಲ್ಲಿಗೆ, ಹಾಗೂ ಗಾಜಿನ ಬಳೆಯೊಂದಿಗೆ ದೀಪವಿರಿಸಿ ಪುಷ್ಪಾ ಹೆಗ್ಡೆಯವರು ನೆರೆ ಇಳಿಯಲೆಂದು ಪ್ರಾರ್ಥಿಸಿ ಗಂಗಾ ಮಾತೆಗೆ ಬಾಗಿನ ಸಮರ್ಪಿಸಿದ್ದು, ಆ ಕೂಡಲೇ ನೆರೆ ನೀರು ಇಳಿದ ಬಲು ಅಪರೂಪದ ಕ್ಷಣವನ್ನು ಜನರು ಕಣ್ತುಂಬಿಕೊಂಡಿದ್ದರು.
ಕಲೆ, ಸಾಂಸ್ಕೃತಿಕ, ಧಾರ್ಮಿಕ ಮತ್ತು ಶೈಕ್ಷಣಿಕ ಕ್ಷೇತ್ರಗಳ ಪೋಷಕರಾಗಿದ್ದ ನಡಿಬೆಟ್ಟು ಮನೆತನ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿತ್ತು. ಶಿಕ್ಷಣ ಪ್ರೇಮಿ ಶಿರ್ವ ನಡಿಬೆಟ್ಟು ಯಜಮಾನ ದುಗ್ಗಪ್ಪ ಹೆಗ್ಡೆಯವರ ಕಾಲದಲ್ಲಿ ಶಿರ್ವ ವಿದ್ಯಾವರ್ಧಕ ಸಂಘದ ಆಡಳಿತಕ್ಕೊಳಪಟ್ಟ ಶಿರ್ವ ಹಿಂದೂ ಪ್ರೌಢ ಶಾಲೆಗೆ ಬೆಲೆಬಾಳುವ 9.89 ಎಕ್ರೆ ಭೂಮಿಯನ್ನು ದಾನ ಮಾಡಿದ್ದರು. 1936 ರಲ್ಲಿ ಶಿರ್ವ ಗ್ರಾ.ಪಂ. ಸ್ಥಾಪನೆಗೊಂಡಾಗ ಅಂದಿನ ಅಧ್ಯಕ್ಷರಾಗಿ ಶಿರ್ವ ನಡಿಬೆಟ್ಟು ಅಣ್ಣಯ್ಯ ಹೆಗ್ಡೆಯವರು ಪ್ರಥಮ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡು ಸೇವೆ ಸಲ್ಲಿಸಿದ್ದರು. ಅನಾದಿ ಕಾಲದಿಂದಲೂ ಶಿರ್ವ ನಡಿಬೆಟ್ಟು ಮನೆತನವು ತುಳುನಾಡಿನ ಆಚಾರ-ವಿಚಾರ ಸಂಸ್ಕೃತಿಗಳನ್ನು ಪಾಲಿಸಿಕೊಂಡು ಬರುತ್ತಿದ್ದು, ತುಳುನಾಡಿನ ಐತಿಹಾಸಿಕ ಪರಂಪರೆಗೆ ಸಾಕ್ಷಿಯಾಗಿದೆ.
ಸತೀಶ್ಚಂದ್ರ ಶೆಟ್ಟಿ, ಶಿರ್ವ
ಚಿತ್ರಗಳು: ತ್ರಿಶೂಲ್, ಶಿರ್ವ