ಶಿರ್ವ: ಶಿರ್ವ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಟ್ಟಾರು ಕಡಂಬು ಬಳಿಯಿರುವ ಕೆಳಗಿನ ಮನೆ ಕೆರೆ ದುರಸ್ತಿ ಕಾಮಗಾರಿಗೆ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ ಶುಕ್ರವಾರ ಚಾಲನೆ ನೀಡಲಾಯಿತು.
ಸರಕಾರ ಉದ್ಯೋಗ ಖಾತರಿ ಯೋಜನೆಯಡಿ ಕೂಲಿ ಹಣ ನೀಡಲು ಸಿದ್ಧವಿದ್ದರೂ ಜನರು ಕೆರೆ,ಬಾವಿ,ತೋಡುಗಳ ಹೂಳೆತ್ತಲು ತಯಾರಿರುವುದಿಲ್ಲ. ಕೋವಿಡ್ ಲಾಕ್‌ಡೌನ್ ಸಂದರ್ಭದಲ್ಲಿ ಉದ್ಯೋಗವಿಲ್ಲದೆ ಮನೆಯಲ್ಲಿರುವ ಯುವಕರ ಮನವೊಲಿಸಿ ಉದ್ಯೋಗ ಖಾತರಿ ಯೋಜನೆಯಡಿ ಉದ್ಯೋಗ ನೀಡುವ ಮೂಲಕ ಕೃಷಿಗೆ ಬೇಕಾಗಿರುವ
ನೀರು ಮತ್ತು ಅಂತರ್ಜಲ ಮಟ್ಟ ವೃದ್ಧಿಗಾಗಿ ಸಾಮೂಹಿಕವಾಗಿ ಕೆಲಸ ಮಾಡಲು ನಿರ್ಧರಿಸಲಾಗಿದೆ ಎಂದು ಗ್ರಾ.ಪಂ. ಪಿಡಿಒ ಅನಂತಪದ್ಮನಾಭ ನಾಯಕ್ ತಿಳಿಸಿದ್ದಾರೆ.
ಶಿರ್ವ ಗ್ರಾಮ ಪಂಚಾಯತ್ ಅಧ್ಯಕ್ಷೆ ವಾರಿಜಾ ಪೂಜಾರ್ತಿ ಮತ್ತು ಪಿಡಿಒ ಅನಂತ ಪದ್ಮನಾಭ ನಾಯಕ್ ನೇತೃತ್ವದಲ್ಲಿ ಕೆರೆ ದುರಸ್ತಿ ಕಾರ್ಯಕ್ಕೆ ಚಾಲನೆ ನೀಡಿ, ಸಾಮಾಜಿಕ ಅಂತರ ಕಾಪಾಡಿ ಕೆಲಸ ಮಾಡುವುದು, ಜ್ವರ ಕೆಮ್ಮು ಇರುವವರು ಗ್ರಾ.ಪಂ.ಗೆ ತಿಳಿಸಿ,ಆರೋಗ್ಯವಂತರು ಮಾತ್ರ ಕೆಲಸದಲ್ಲಿ ಪಾಲ್ಗೊಳ್ಳುವುದರ ಬಗ್ಗೆ ಪ್ರತಿಜ್ಞಾ ವಿಧಿ ಬೋಧಿಸಲಾಯಿತು.
ಕಡಂಬು ಮತ್ತು ಸುತ್ತಮುತ್ತಲಿನ ಪರಿಸರದ ಯುವಕರು ಮತ್ತು ಮಹಿಳೆಯರು, ಗ್ರಾಮಸ್ಥರು ಉತ್ಸಾಹದಿಂದ ಕೆರೆ ದುರಸ್ತಿ ಕಾರ್ಯದಲ್ಲಿ ಪಾಲ್ಗೊಂಡಿದ್ದು ,ಕಡಂಬು ನಮೋ ಫ್ರೆಂಡ್ಸ್ ಬಳಗ ಅವರೊಂದಿಗೆ ಕೈ ಜೋಡಿಸಿದೆ. ಗ್ರಾಮಸ್ಥರ ಸಮಾಜಮುಖೀ ಕಾರ್ಯಕ್ಕೆ ಭೂಮಿಯ ಒಡಲಿನಿಂದ ನೀರಿನ ಬುಗ್ಗೆಯೊಂದು ಚಿಮ್ಮಿದ್ದು ಗ್ರಾಮಸ್ಥರನ್ನು ಪುಳಕಿತರನ್ನಾಗಿಸಿದೆ.