ಶಿರ್ವ: ಗುರುವಾರ ತಡರಾತ್ರಿ ಮಳೆಯೊಂದಿಗೆ ಸುಂಟರ ಗಾಳಿ ಬೀಸಿದ ಪರಿಣಾಮ ಶಿರ್ವ ಗ್ರಾ.ಪಂ. ವ್ಯಾಪ್ತಿಯ ಪದವು, ಹಳೆಹಿತ್ಲು ಮತ್ತು ಮಸೀದಿ ಬಳಿ ಹಲವು ಮನೆಗಳ ಹೆಂಚು, ತಗಡು ಶೀಟುಗಳು ಹಾರಿ ಹೋಗಿ, ಮನೆಗಳ ಮೇಲೆ ಮರ ಬಿದ್ದು ಲಕ್ಷಾಂತರ ರೂ. ಹಾನಿ ಸಂಭವಿಸಿದೆ.
ಭಾರೀ ಗಾಳಿಗೆ ಶಿರ್ವ, ತೋಪನಂಗಡಿ, ಮೊಹಮ್ಮದ್ ಬಿಎಂ ಅಬ್ದುಲ್ಲಾ ಮನೆ ಬಳಿ ಮತ್ತು ಕುತ್ಯಾರು ಭಾಗದಲ್ಲಿ ಕಂಬಗಳು ಧರೆಗುಳಿದಿದ್ದು ವಿದ್ಯುತ್ ವ್ಯತ್ಯಯ ಉಂಟಾಗಿದೆ. ಮಸೀದಿ ಬಳಿಯ ಮೊಹಮ್ಮದ್ ಬಿಎಂ ಅಬ್ದುಲ್ಲಾ ಅವರ ಮನೆಯ ಬಳಿ ಮತ್ತು ಕುತ್ಯಾರು ಕೇಂಜ ಬಳಿ ವಿದ್ಯುತ್ ಕಂಬ ನೆಲಕ್ಕುರುಳಿದ್ದು ಮೆಸ್ಕಾಂಗೂ ಅಪಾರ ಹಾನಿ ಉಂಟಾಗಿದೆ.
ಹಳೆಹಿತ್ಲುವಿನ ಗ್ರೇಸಿ ಅಲ್ಫನ್ಸೋ ಅವರ ಮನೆಗೆ ತೆಂಗು ಮತ್ತು ಅಡಿಕೆ ಮರಗಳು ತುಂಡಾಗಿ ಬಿದ್ದು ಅಪಾರ ಹಾನಿ ಸಂಭವಿಸಿದೆ. ತೋಟದಲ್ಲಿದ್ದ ಬಾಳೆ ಗಿಡ ಮತ್ತಿತರ ಕೃಷಿ ಬೆಳೆಗಳು ಗಾಳಿಗೆ ತುಂಡಾಗಿ ಬಿದ್ದಿವೆ. ಪದವು ಬಳಿ ಗುಬ್ಬಿ, ಲಕ್ಷ್ಮೀ ಮತ್ತು ನರ್ಸಿ ಅವರ ಮನೆಗೆ ಹಾನಿ ಸಂಭವಿಸಿದೆ. ಗಾಳಿ ಮಳೆಗೆ ಏಕಾಂಗಿಯಾಗಿ ವಾಸವಾಗಿದ್ದ ಶಿರ್ವ ಮೇಲ್ ಬೆಳಂಜಾಲೆ ಪದ್ಮ ಮೂಲ್ಯೆದಿ ಅವರ ಮನೆಯ ಗೋಡೆ ಕುಸಿದು ಬಿದ್ದು ಅಪಾರ ಹಾನಿ ಸಂಭವಿಸಿದೆ.
ಶಿರ್ವ ಸುನ್ನಿ ಜಾಮೀಯಾ ಮಸೀದಿಯ ಕಟ್ಟಡದ ಕೈತೊಳೆಯುವ ಸ್ಥಳದ ತಗಡು ಶೀಟುಗಳು ಧರಾ ಶಾಯಿಯಾಗಿದೆ. ಮಸೀದಿಯ ಧರ್ಮಗುರುಗಳ ಮನೆಯ ಹೆಂಚು ಹಾರಿಹೋಗಿ ತಗಡು ಶೀಟುಗಳು ಪುಡಿಯಾಗಿವೆ. ಶ್ರೀ ಸಿದ್ಧಿವಿನಾಯಕ ದೇವಸ್ಥಾನದ ನಾಮ ಫಲಕ ಧರೆಗುರುಳಿದೆ. ಖಾಲಿದ್ ಅವರ ಗೂಡಂಗಡಿಯ ತಗಡು ಶೀಟು ಹಾರಿಹೋಗಿದೆ.
ಫಯಾಜ್ ಆಲಿ, ಮೊಹಮ್ಮದ್ ಬಿಎಂ ಅಬ್ದುಲ್ಲಾ ಮತ್ತು ಫಾತಿಮಾ ಬೀವಿಯವರ ಮನೆಯ ಮಾಡಿನ ಹೆಂಚು ಪುಡಿಯಾಗಿದೆ. ಫಾತಿಮಾ ಬೀವಿಯವರ ಮನೆಯ ಹಿಂಬದಿಯ ಬಾಡಿಗೆ ಮನೆಗೆ ಮರ ಬಿದ್ದು ಹಾನಿ ಸಂಭವಿಸಿದೆ. ಮಹಮ್ಮದ್ ಹುಸೇನ್ ಅವರ ಮನೆಯ ಮೇಲೆ ತೆಂಗಿನ ಮರ ಬಿದ್ದಿದೆ. ಮಹಮ್ಮದ್ ಹನೀಫ್ ಅವರ ಮನೆಯ ತೆಂಗಿನ ಮರ ತುಂಡಾಗಿ ನಜೀರ್ ಅಹಮದ್ ಅವರ ಮನೆಗೆ ಬಿದ್ದಿದೆ.
ಮುಮ್ತಾಜ್ ಬೇಗಂ ಅವರ ಮನೆಯ ಆಡು ಕುರಿಗಳ ಶೆಡ್‌ನ ತಗಡು ಶೀಟು ಹಾರಿಹೋಗಿ ದೂರ ಬಿದ್ದಿದೆ. ಸಬ್ದರ್ ಆಲಿ ಅವರ ಮನೆಯ ಹೆಂಚು ಹಾರಿ ಹೋಗಿದ್ದು, ತೋಟದಲ್ಲಿದ ತೆಂಗಿನಮರ, ಬಾಳೆಗಿಡಗಳು ತುಂಡಾಗಿ ಬಿದ್ದಿದೆ. ಉಸ್ಮಾನ್ ಅಬ್ದುಲ್ಲಾ ಅವರ ಮನೆಯ ಮಹಡಿ ಮೇಲಿನ ತಗಡುಶೀಟುಗಳು, ಕಬ್ಬಿಣದ ಆ್ಯಂಗುಲರ್‌ಗಳು ಹಾರಿ ಹೋಗಿ ದೂರ ಬಿದ್ದಿವೆ.
ಕಾಪು ತಹಶೀಲ್ದಾರ್ ಡಾ| ಪ್ರತಿಭಾ ಆರ್ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸಂತ್ರಸ್ತರಿಗೆ ಪರಿಹಾರದ ಭರವಸೆ ನೀಡಿದ್ದಾರೆ. ಶಿರ್ವ ಗಾ.ಪಂ. ಅಧ್ಯಕ್ಷೆ ಸವಿತಾ ಪೂಜಾರಿ, ಪಿಡಿಒ ಅನಂತ ಪದ್ಮನಾಭ ನಾಯಕ್, ಗ್ರಾಮ ಆಡಳಿತಾಧಿಕಾರಿ ಶ್ವೇತಾ ಸುವರ್ಣ, ಮಾಜಿ ಗ್ರಾ.ಪಂ. ಅಧ್ಯಕ್ಷರಾದ ಹಸನಬ್ಬ ಶೇಖ್, ಕೆ.ಆರ್.ಪಾಟ್ಕರ್, ಗ್ರಾ.ಪಂ. ಸದಸ್ಯರಾದ ಪ್ರವೀಣ್ ಸಾಲಿಯಾನ್, ಶಾಕಿರಾ ಬಾನು, ಮಸೀದಿಯ ಆಡಳಿತ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು. ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಹಾನಿಗೊಳಗಾದ ಪ್ರದೇಶಕ್ಕೆ ತೆರಳಿ ಪರಿಶೀಲನೆ ನಡೆಸಿ ಪರಿಹಾರದ ಭರವಸೆ ನೀಡಿದ್ದಾರೆ.