Advertisement
ಗ್ರಾಮೀಣ ಭಾಗದ ಸರ್ವಸುಸಜ್ಜಿತ ಆಸ್ಪತ್ರೆಯಲ್ಲಿ 5 ಗ್ರಾಮ ಪಂಚಾಯತ್ ವ್ಯಾಪ್ತಿಯ ಸುಮಾರು 50 ಸಾವಿರ ಜನರಿಗೆ ಪ್ರಯೋಜನವಾಗಲಿದ್ದು, ಪರಿಸರದ ಜನರ ಬಹುಕಾಲದ ಕನಸು ನನಸಾಗುತ್ತಿದೆ.
Related Articles
Advertisement
ಶಿರ್ವ ಸಮುದಾಯ ಆರೋಗ್ಯ ಕೇಂದ್ರವು 30 ಹಾಸಿಗೆಗಳ ಆಸ್ಪತ್ರೆಯಾಗಿದ್ದು, ಹೊರರೋಗಿಗಳು ಮತ್ತು ಒಳರೋಗಿಗಳ ವಿಭಾಗ ಹೊಂದಿದೆ. ಹಿರಿಯ ನಾಗರಿಕರಿಗೆ, ಬಿ.ಪಿ.ಸಕ್ಕರೆ ಕಾಯಿಲೆ ರೋಗಿಗಳಿಗೆ ಬೇಕಾದ ಚಿಕಿತ್ಸೆಗೆ ಎನ್‌ಸಿಡಿ ವಿಭಾಗವಿದ್ದು ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ. ಹಗಲು ಕಚೇರಿ ವೇಳೆೆಯಲ್ಲಿ ಮಣಿಪಾಲದ ಕೆಎಂಸಿ ವೈದ್ಯರ ತಂಡ ಬಂದು ಜನರಲ್ ಮೆಡಿಸಿನ್ ಚಿಕಿತ್ಸೆ ನೀಡುತ್ತಿದೆ. ಸಂಜೆ 5ರ ಬಳಿಕ ವೈದ್ಯರಿಲ್ಲದೆ ರೋಗಿಗಳಿಗೆ ಚಿಕಿತ್ಸೆ ದುರ್ಲಭವಾಗಿತ್ತು. ಕಚೇರಿ ಸಮಯ ಹೊರತುಪಡಿಸಿ ರಾತ್ರಿ ಹೊತ್ತು,ರವಿವಾರ ಅಥವಾ ಅಪಘಾತ ಯಾ ತುರ್ತು ಚಿಕಿತ್ಸೆಗೆ ಆಸ್ಪತ್ರೆಗೆ ಬಂದರೆ ವೈದ್ಯರಿಲ್ಲದೆ ರೋಗಿಗಳು ಪರದಾಡುವಂತಾಗಿತ್ತು. ಇದೀಗ ತುರ್ತು ಚಿಕಿತ್ಸೆಯ ಸಮಸ್ಯೆಗೆ ಮುಕ್ತಿ ದೊರೆತಂತಾಗಿದೆ.
ತಜ್ಞ ವೈದ್ಯರ ಹುದ್ದೆ ಖಾಲಿ
ಸ್ತ್ರೀರೋಗ ತಜ್ಞರು,ಮಕ್ಕಳ ತಜ್ಞರ ಹುದ್ದೆ ಖಾಲಿಯಿದೆ. ತಜ್ಞ ವೈದ್ಯರ ಕೊರತೆಯಿಂದ ಗುಣಮಟ್ಟದ ವೈದ್ಯಕೀಯ ಚಿಕಿತ್ಸೆ ನೀಡಲು ಹಿನ್ನಡೆಯಾಗಿದೆ. ಓರ್ವ ವೈದ್ಯರು ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಆಸ್ಪತ್ರೆಗೆ ಹೆಚ್ಚುವರಿ ಕರ್ತವ್ಯಕ್ಕೆ ಉಡುಪಿಯಲ್ಲಿ ನಿಯೋಜನೆಗೊಂಡಿದ್ದು, ಅವರ ಸೇವೆ ಲಭ್ಯವಾದಲ್ಲಿ ಸಾರ್ವಜನಿಕರಿಗೆ ತುಂಬಾ ಅನುಕೂಲವಾಗಲಿದೆ. ಶಿರ್ವ ಸುತ್ತಮುತ್ತ ಖಾಸಗಿ ಮಕ್ಕಳ ತಜ್ಞರು ಇಲ್ಲ. ಆದ್ದರಿಂದ ತೀರಾ ಅಗತ್ಯವಿರುವ ಮಕ್ಕಳ ತಜ್ಞರ ಕೊರತೆ ಹಲವಾರು ವರ್ಷಗಳಿಂದ ಕೇಳಿಬರುತ್ತಿದ್ದು,ಮಕ್ಕಳ ಆರೋಗ್ಯದಲ್ಲಿ ಏರುಪೇರಾದರೆ, ಉಡುಪಿ ಯಾ ಮಣಿಪಾಲದ ಆಸ್ಪತ್ರೆಯನ್ನು ಅವಲಂಬಿಸಬೇಕಾದ ಅನಿವಾರ್ಯತೆಯಿದೆ.
ಕೇಂದ್ರದಲ್ಲಿ ನೂತನವಾಗಿ ನಿರ್ಮಾಣಗೊಂಡ ಆಕ್ಸಿಜನ್ ಘಟಕ,ಸುಸಜ್ಜಿತ ಪ್ರಯೋಗಾಲಯ,ಎಕ್ಸ್‌ರೇ ವಿಭಾಗ,ದಂತ ಚಿಕಿತ್ಸಾ ವಿಭಾಗ,ಕ್ಯಾನ್ಸರ್ ವಿಭಾಗವಿದ್ದು ಟೆಕ್ನಿಶಿಯನ್‌ಗಳು ಇದ್ದಾರೆ. ದಾನಿಗಳ ಸಹಕಾರದಿಂದ 25 ಕೆವಿಎ ಜನರೇಟರ್ ಸೌಲಭ್ಯ ಕಲ್ಪಿಸಲಾಗಿದೆ. ಅಂಬುಲೆನ್ಸ್ ಸೇವೆಯೂ ಇದ್ದು ಚಾಲಕರಿದ್ದಾರೆ.
ಬೇಕಿದೆ ಶೀತಲೀಕೃತ ಶವಾಗಾರ
ಶಿರ್ವ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹೆಚ್ಚಿನವರು ವಿದೇಶಗಳಲ್ಲಿ ಇದ್ದಾರೆ.ತುರ್ತು ಸಂದರ್ಭಗಳಲ್ಲಿ ಶೀತಲೀಕೃತ ಶವಾಗಾರಕ್ಕಾಗಿ ದೂರದ ಉಡುಪಿ, ಮಣಿಪಾಲ,ಕಾರ್ಕಳದ ಶವಾಗಾರವನ್ನು ಆಶ್ರಯಿಸಬೇಕಾಗಿದೆ. ಈ ಕೊರತೆಯನ್ನು ನೀಗಿಸಲು ಸರಕಾರ, ಜನಪ್ರತಿನಿಧಿಗಳು ಮತ್ತು ಜಿಲ್ಲಾ ಆರೋಗ್ಯ ಅಧಿಕಾರಿಗಳು ಮನಸ್ಸು ಮಾಡಬೇಕಿದೆ.
ಶಿರ್ವ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮೇಲಾಧಿಕಾರಿಗಳ ಮತ್ತು ಮಣಿಪಾಲ ಕೆಎಂಸಿ ಆಸ್ಪತ್ರೆಯ ಸಹಭಾಗಿತ್ವದಲ್ಲಿ ರೋಗಿಗಳಿಗೆ ಉತ್ತಮ ವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತಿದೆ. ಖಾಲಿಯಿರುವ ತಜ್ಞ ವೈದ್ಯರು ಮತ್ತು ಸಿಬಂದಿಗಳ ನೇಮಕವಾಗಬೇಕಿದೆ. ಜನಪ್ರತಿನಿಧಿಗಳು ಮತ್ತು ಸಾರ್ವಜನಿಕರು ಉತ್ತಮ ಸಹಕಾರ ನೀಡುತ್ತಿದ್ದು, ಸ್ವಯಂ ಸೇವಾ ಸಂಸ್ಥೆಗಳು ಸಹಕರಿಸಿದಲ್ಲಿ ಇನ್ನೂ ಹೆಚ್ಚಿನ ಉತ್ತಮ ಸೇವೆ ನೀಡಬಹುದಾಗಿದೆ. –ಆಡಳಿತ ವೈದ್ಯಾಧಿಕಾರಿಗಳು, ಶಿರ್ವ ಸಮುದಾಯ ಆರೋಗ್ಯ ಕೇಂದ್ರ.
-ಸತೀಶ್ಚಂದ್ರ ಶೆಟ್ಟಿ, ಶಿರ್ವ