ಶಿರ್ವ : ಒಂದೇ ಕುಟುಂಬದ 15 ಮಂದಿ ಸೇರಿದಂತೆ ಶಿರ್ವ, ಕುತ್ಯಾರು ಮತ್ತು, ಕಳತ್ತೂರು ಪರಿಸರದ ಒಟ್ಟು 20 ಮಂದಿಗೆ ಶನಿವಾರ ಕೋವಿಡ್ ಸೋಂಕು ದೃಢಪಟ್ಟಿದೆ.
ಪತ್ತೆಯಾದ ಎಲ್ಲಾ ಪ್ರಕರಣಗಳು ಸ್ಥಳೀಯರಲ್ಲಿಯೇ ಕಂಡುಬಂದಿದ್ದು ನಾಗರಿಕರಲ್ಲಿ ಆತಂಕ ಮೂಡಿಸಿದೆ. ಮೂರು ಗ್ರಾಮಗಳ ಪಾಸಿಟಿವ್ ಪ್ರಕರಣಗಳ ಪ್ರದೇಶವನ್ನು ಸೀಲ್ ಡೌನ್ ಮಾಡಲಾಗಿದೆ.
ಕಾಪು – ಶಿರ್ವ ಮುಖ್ಯ ರಸ್ತೆಯ ಬಳಿಯ ನಿವಾಸಿ 45 ವರ್ಷದ ಪುರುಷ ಮತ್ತು ಶಿರ್ವದ ಸೋರ್ಪು ನಿವಾಸಿ 35 ವರ್ಷದ ವ್ಯಕ್ತಿಯಲ್ಲಿ ಸೋಂಕು ಕಂಡುಬಂದಿದೆ.
ಕೋವಿಡ್ ಸೋಂಕಿತ ಶಿರ್ವ ತೊಟ್ಲಗುರಿಯ ಮಹಿಳೆಯ 32 ವರ್ಷದ ಪತಿ ಮತ್ತು 3 ಹಾಗೂ 4 ವರ್ಷದ ಇಬ್ಬರು ಮಕ್ಕಳಿಗೆ ಸೋಂಕು ಭಾದಿಸಿದೆ. ಮಹಿಳೆಯ ಕುತ್ಯಾರಿನ ತಾಯಿ ಮನೆಯಲ್ಲಿ ತಂದೆ ತಾಯಿ ಸಹಿತ ಒಟ್ಟು 12 ಮಂದಿಯಲ್ಲಿ ಸೋಂಕು ದೃಢ ಪಟ್ಟಿದೆ. ಶೀತ ಜ್ವರದಿಂದ ಬಳಲುತ್ತಿದ್ದ ಮಹಿಳೆ ಕುತ್ಯಾರಿನ ತಾಯಿ ಮನೆಗೆ ಜು.1 ರಂದು ತೆರಳಿದ್ದರು ಮರುದಿನ ಆಕೆಯಲ್ಲಿ ಸೋಂಕು ಪತ್ತೆಯಾಗಿತ್ತು.
ಆಕೆಯ 70 ವರ್ಷದ ತಂದೆ, 62 ವರ್ಷದ ತಾಯಿ, 25 ವರ್ಷದ ಪುರುಷ, 33 ಮತ್ತು 34 ವರ್ಷ ಮಹಿಳೆ, 1 ವರ್ಷದ ಗಂಡು ಮಗು ಸಹಿತ 6, 12, 14 ವರ್ಷದ ಗಂಡು ಮಕ್ಕಳು ಹಾಗೂ 4, 8 , 13 ವರ್ಷದ ಹೆಣ್ಣು ಮಕ್ಕಳಿಗೆ ಸೋಂಕು ಭಾದಿಸಿದೆ.
ಕಳತ್ತೂರು 3 ಮಂದಿಗೆ ಸೋಂಕು
ಕಳತ್ತೂರಿನಲ್ಲೂ 3 ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದು ಕಳತ್ತೂರು ಕೊರಂತಿಕಟ್ಟದ ಯುವಕನ ತಾಯಿ, ಸಹೋದರ ಹಾಗೂ ಸಹೋದರಿಗೆ ಸೋಂಕು ದೃಢಪಟ್ಟಿದೆ.