ಶಿರ್ವ: ಬಂಟಕಲ್ ಗ್ರಾಮೀಣ ಪರಿಸರದಲ್ಲಿ 2010ರಲ್ಲಿ ಉಡುಪಿಯ ಸೋದೆ ಶ್ರೀ ವಾದಿರಾಜ ಮಠಾಧೀಶ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರು ಸ್ಥಾಪಿಸಿದ ಶ್ರೀ ಮಧ್ವ ವಾದಿರಾಜ ತಾಂತ್ರಿಕ ವಿದ್ಯಾಲಯವು ವಿದ್ಯಾರ್ಥಿಗಳಿಗೆ ಮೌಲ್ಯಾಧಾರಿತ ತಾಂತ್ರಿಕ ಹಾಗೂ ಮ್ಯಾನೇಜ್‌ಮೆಂಟ್ ಶಿಕ್ಷಣ ನೀಡುತ್ತಿದ್ದು 14 ವರ್ಷಗಳಲ್ಲಿ ಹಲವು ಸಾಧನೆಗಳ ಮೂಲಕ ಪ್ರಸಿದ್ಧಿ ಪಡೆದಿದೆ.
ವಿದ್ಯಾಸಂಸ್ಥೆಯು ವಿದ್ಯಾರ್ಜನೆಗೆ ನೀಡುತ್ತಿರುವ ಆದ್ಯತೆ, ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ, ವಿದ್ಯಾರ್ಥಿಗಳಿಗೆ ದೊರೆತ ಉದ್ಯೋಗಾವಕಾಶ ಮತ್ತು ವಿದ್ಯಾಸಂಸ್ಥೆಯ ಸಾಧನೆಗಳನ್ನು ಗುರುತಿಸಿ ರಾಷ್ಟ್ರೀಯ ಮೌಲ್ಯಾಂಕನ ಮಂಡಳಿ (NBA) 2027ರ ವರೆಗೆ ಪದವಿ ಕೋರ್ಸ್‌ಗಳಿಗೆ ಮಾನ್ಯತೆ ನೀಡಿದೆ. ಜತೆಗೆ ನ್ಯಾಕ್ (NAAC)ಕೂಡ ವಿದ್ಯಾಸಂಸ್ಥೆಗೆ ಎ ಶ್ರೇಣಿಯ ಮಾನ್ಯತೆ ನೀಡಿದೆ. ರಾಷ್ಟ್ರೀಯ ಮಟ್ಟದ ಎನ್‌ಐಆರ್‌ಎಫ್ 2023ರ ಆವಿಷ್ಕಾರ ಮತ್ತು ಉದ್ಯಮಶೀಲತೆಯಲ್ಲಿ ರಾಷ್ಟ್ರಮಟ್ಟದ ಉನ್ನತ 150-300 ಶ್ರೇಣಿಯಲ್ಲಿ ವಿದ್ಯಾಸಂಸ್ಥೆಯು ಒಳಗೊಂಡಿದೆ.
ವಿಶ್ವವಿದ್ಯಾನಿಲಯದ ರ್‍ಯಾಂಕ್, ವಿದ್ಯಾರ್ಥಿಗಳ ಹಾಗೂ ಶಿಕ್ಷಕರ ಆವಿಷ್ಕಾರಗಳಿಗೆ ಸರಕಾರದ ಹಾಗೂ ಪ್ರತಿಷ್ಠಿತ ಕಂಪೆನಿಗಳಿಂದ ದೊರೆತ ಆರ್ಥಿಕ ಸಹಾಯಗಳು ವಿದ್ಯಾಸಂಸ್ಥೆಯ ಪ್ರಗತಿಗೆ ಪೂರಕವಾಗಿವೆ.
ವಿದ್ಯಾರ್ಥಿಗಳಿಗೆ ಕ್ಯಾಂಪಸ್ ಪ್ಲೇಸ್‌ಮೆಂಟ್ ಪ್ರಕ್ರಿಯೆಯಲ್ಲಿ ಉತ್ತಮ ಉದ್ಯೋಗಾವಕಾಶ ಕಲ್ಪಿಸುವ ನಿಟ್ಟಿನಲ್ಲಿ ಪ್ರತಿಷ್ಠಿತ ತರಬೇತಿ ಸಂಸ್ಥೆಗಳಿಂದ ತರಬೇತಿ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಇದರ ಫಲವಾಗಿ 2023-24ನೇ ಸಾಲಿನಲ್ಲಿ ಶೇ. 83ಕ್ಕೂ ಅಧಿಕ ಅರ್ಹ ವಿದ್ಯಾರ್ಥಿಗಳು ಪ್ರತಿಷ್ಠಿತ ಕಂಪೆನಿಗಳಲ್ಲಿ ಉದ್ಯೋಗ ಪಡೆದುಕೊಂಡಿದ್ದು, ಅಮೆಜಾನ್, ಕಿಂಡ್ರಿಲೆ, ಮೈಂಡ್‌ಟ್ರೀ, ಕಾಗ್ನಿಜೆಂಟ್, ಇನ್ಫೋಸಿಸ್, ವಿಪ್ರೋ, ಟಿಸಿಎಸ್, ರೋಬೊಸಾಫ್ಟ್, ಎಚ್‌ಪಿ ಸೇರಿದಂತೆ ಬಹುರಾಷ್ಟ್ರೀಯ ಕಂಪೆನಿಗಳಲ್ಲಿ ಉದ್ಯೋಗ ಪಡೆದು ದೇಶ ವಿದೇಶಗಳಲ್ಲಿ ವೃತ್ತಿಜೀವನ ಮುಂದುವರಿಸುತ್ತಿದ್ದಾರೆ.
ಪಠ್ಯೇತರ ವಿಷಯಗಳಾದ ಕ್ರೀಡೆ, ಎನ್‌ಸಿಸಿ,ಎನ್ನೆಸ್ಸೆಸ್ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಉತ್ತಮ ಉತ್ತೇಜನ ನೀಡಲಾಗುತ್ತಿದೆ. ಸಂಸ್ಥೆಯಲ್ಲಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಆ್ಯಂಡ್ ಮೆಶಿನ್ ಲರ್ನಿಂಗ್, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಆ್ಯಂಡ್ ಡಾಟಾ ಸೈನ್ಸ್, ಕಂಪ್ಯೂಟರ್ ಸೈನ್ಸ್, ಎಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯುನಿಕೇಶನ್ ಮತ್ತು ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದಲ್ಲಿ ಬಿಇ ಕೋರ್ಸ್‌ಗಳು ಹಾಗೂ ಎಂಬಿಎ ಸ್ನಾತಕೋತ್ತರ ಕೋರ್ಸ್‌ಗಳು ಲಭ್ಯವಿರುತ್ತವೆ. ಕಾಲೇಜು ಕ್ಯಾಂಪಸ್‌ನಲ್ಲಿ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಪ್ರತ್ಯೇಕವಾದ ಸುಸಜ್ಜಿತ ಹಾಸ್ಟೆಲ್ ವ್ಯವಸ್ಥೆ, ಸುಸಜ್ಜಿತ ಗ್ರಂಥಾಲಯ, ಒಳಾಂಗಣ ಕ್ರೀಡೆ ಹಾಗೂ ಜಿಮ್ ವ್ಯವಸ್ಥೆ, ಉತ್ತಮ ರೀತಿಯ ಕೆಫೆಟೇರಿಯ ಹಾಗೂ ಉಡುಪಿ, ಕುಂದಾಪುರ, ಕಾರ್ಕಳ, ಹಿರಿಯಡ್ಕ ಆಸುಪಾಸಿನ ವಿದ್ಯಾರ್ಥಿಗಳಿಗೆ ಕಾಲೇಜು ಬಸ್ಸಿನ ವ್ಯವಸ್ಥೆಗಳಿವೆ.
ಹೆಚ್ಚಿನ ಮಾಹಿತಿಗೆ ಕಾಲೇಜಿಗೆ ಭೇಟಿ ನೀಡಬಹುದು ಎಂದು ಪ್ರಕಟನೆ ತಿಳಿಸಿದೆ.