ಮಲ್ಪೆ: ಬಿಜೆಪಿಯಿಂದ ಅಭ್ಯರ್ಥಿಯ ಸಮೀಕ್ಷೆ ನಡೆಯುತ್ತಿದೆ. ಆ ಪಕ್ಷದಿಂದ ಟಿಕೆಟ್ ಸಿಗುತ್ತದೆ ಎಂಬ ನಿರೀಕ್ಷೆಯಲ್ಲಿ ಇದ್ದೇನೆ. ಒಂದೊಮ್ಮೆ ಬಿಜೆಪಿ ಟಿಕೆಟ್ ಕೊಡದಿದ್ದರೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಂತೂ ನಿಶ್ಚಿತ ಎಂದು ಉಡುಪಿ ಶೀರೂರು ಮಠಾಧೀಶ ಶ್ರೀ ಲಕ್ಷ್ಮೀವರತೀರ್ಥ ಶ್ರೀಗಳು ಪುನರುಚ್ಚರಿಸಿದ್ದಾರೆ.
ಅವರು ರವಿವಾರ ಜನರಲ್ಲಿ ಮತ ಜಾಗೃತಿ ಮೂಡಿಸುವ ಕಾರ್ಯಕ್ಕೆ ಚಾಲನೆ ನೀಡುವ ಪೂರ್ವಭಾವಿಯಾಗಿ ಮಲ್ಪೆ ವಡಭಾಂಡೇಶ್ವರ ಬಲರಾಮ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು ಪೂಜೆ ಸಲ್ಲಿಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ಈ ಹಿಂದೆ ಶೇ. 60ರಿಂದ 65 ಮಾತ್ರ ಮತದಾನ ಆಗುತ್ತಿತ್ತು. ಈ ಬಾರಿ ಶೇ. 100ರಷ್ಟು ಮತದಾನ ಆಗಲೇ ಬೇಕೆಂಬ ಉದ್ದೇಶದಿಂದ ನಾನು ದೇವರಲ್ಲಿ ಬಂದು ಪ್ರಾರ್ಥನೆ ಮಾಡಿದ್ದೇನೆ. ಹಾಗಾಗಿ ಮತದಾನದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯದಲ್ಲಿ ತೊಡಗಿದ್ದೇನೆ. ಎಲ್ಲರೂ ಮತ ಚಲಾಯಿಸಬೇಕು, ಉತ್ತಮ ಅಭ್ಯರ್ಥಿಯನ್ನು ಆಯ್ಕೆ ಮಾಡುವಂತಾಗಬೇಕೆಂಬುದೇ ನಮ್ಮ ಉದ್ದೇಶ ಎಂದು ಶ್ರೀಗಳು ಹೇಳಿದರು.
ಉಡುಪಿ ಕ್ಷೇತ್ರದ ಗಾಮೀಣ ಭಾಗಗಳಲ್ಲಿ ಅಭಿವೃದ್ಧಿ ಕುಂಠಿತವಾಗಿದೆ. ಹಳ್ಳಿಯಲ್ಲಿ ಇನ್ನೂ ನೂರಾರು ಸಮಸ್ಯೆಗಳು ಇವೆ. ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ ಹಲವಾರು ಯೋಜನೆಗಳನ್ನು ಹಾಕಿಕೊಂಡಿದ್ದೇವೆ. ಅವೆಲ್ಲವನ್ನು ಮುಂದಿನ ದಿನಗಳಲ್ಲಿ ಮಾಧ್ಯಮಕ್ಕೆ ತಿಳಿಸುತ್ತೇನೆ ಎಂದರು.
ದೇವರ ಬೆಂಬಲ
ಚುನಾವಣೆಗೆ ಸ್ಪರ್ಧಿಸುವಲ್ಲಿ ಅಷ್ಟಮಠಗಳ ಇತರ ಮಠಗಳ ಬೆಂಬಲ ಇದೆಯಾ ಎಂದು ಪತ್ರಕರ್ತರು ಕೇಳಿದಾಗ ನನಗೆ ಭಗವಂತನ ಬೆಂಬಲ ಇದೆ, ಅದೇ ನನಗೆ ಸಾಕು. ಆ ಸ್ಫೂರ್ತಿಯಿಂದಲೇ ನಾನು ಮುಂದೆ ಹೋಗುತ್ತಿದ್ದೇನೆ ಎಂದವರು ಹೇಳಿದರು.
ಯಾವುದೇ ಕಾರ್ಯಕ್ಕೆ ದೇವರ ಅನುಗ್ರಹ ಮೊದಲು ಬೇಕು, ಆಮೇಲೆ ಮನುಷ್ಯ ಪ್ರಯತ್ನ, ಹಾಗಾಗಿ ಶ್ರೀಕೃಷ್ಣನ ಅಣ್ಣ ಬಲರಾಮನ ಸನ್ನಿಧಿಗೆ ಬಂದು ಪ್ರಾರ್ಥನೆ ಮಾಡಿದ್ದೇನೆ. ಚುನಾವಣಾ ಆಯೋಗದ ಒಪ್ಪಿಗೆ ಪಡೆದು ನಾಳೆಯಿಂದಲೇ ಚುನಾವಣಾ ಪ್ರಚಾರ ಕಾರ್ಯ ಕೈಗೊಳ್ಳುತ್ತೇನೆ.
– ಶೀರೂರು ಶ್ರೀ