ಬೈಂದೂರು: ಸರಕಾರಿ ಶಾಲೆಗಳ ಪ್ರಗತಿಯಾಗಬೇಕೆಂದು ಸರಕಾರ ಪ್ರತೀ ವರ್ಷ ಹತ್ತಾರು ಹೊಸ ಯೋಜನೆಗಳ ಜತೆಗೆ ನೂರಾರು ಕೋಟಿ ರೂ. ಅನುದಾನಗಳನ್ನು ಮಂಜೂರು ಮಾಡುತ್ತದೆ. ಆದರೆ ಇಲಾಖೆಯ ನಿಷ್ಕಾಳಜಿ. ಜವಾಬ್ದಾರಿಯುತ ಅಧಿಕಾರಿಗಳ ನಿರ್ವಹಣೆ ಲೋಪದಿಂದ ಗ್ರಾಮೀಣ ಭಾಗದ ಹಲವು ಪ್ರೌಢಶಾಲೆ, ಪದವಿಪೂರ್ವ ಕಾಲೇಜುಗಳ ವಿದ್ಯಾರ್ಥಿಗಳ ನಿತ್ಯ ಯಾತನೆ ಪಡುವಂತಾಗಿದೆ.
ಇದಕ್ಕೆ ಉದಾಹರಣೆಯಾಗಿ ಶಿರೂರು ಸರಕಾರಿ ಪದವಿಪೂರ್ವ ಕಾಲೇಜಿನ ಸಭಾಭವನದ ಮೇಲ್ಛಾವಣಿ ಕುಸಿದು ತಿಂಗಳು ಸಮೀಪಿಸಿದರೂ ಸಹ ಯಾವುದೇ ಕ್ರಮಕೈಗೊಂಡಿಲ್ಲ. ಮಳೆಗಾಲ ಸನ್ನಿಹಿತವಾದ ಕಾರಣ ದುರಸ್ತಿಯಾಗದಿದ್ದರೆ ಕಟ್ಟಡ ಕುಸಿಯುವ ಭೀತಿ ಇದೆ.
1973ರಲ್ಲಿ ನಿರ್ಮಾಣಗೊಂಡಿರುವ ಈ ಕಟ್ಟಡವನ್ನು ಈ ಹಿಂದೆ ಎರಡು ಬಾರಿ ದುರಸ್ತಿ ಮಾಡಲಾಗಿತ್ತು. ಪ್ರೌಢಶಾಲೆಯಲ್ಲಿ ಸುಮಾರು 185 ವಿದ್ಯಾರ್ಥಿಗಳು ಹಾಗೂ ಕಾಲೇಜಿನಲ್ಲಿ 104 ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಶಾಲೆಯ ಸಾಂಸ್ಕೃತಿಕ ಸೇರಿದಂತೆ ಸಭಾ ಕಾರ್ಯಕ್ರಮಗಳಿಗೆ ಈ ಕೊಠಡಿಗಳನ್ನು ಬಳಸಲಾಗುತ್ತಿದೆ.
ಅಧಿಕಾರಿಗಳಿಗೆ ಪತ್ರ ಬರೆದರೂ ಪ್ರಯೋಜನವಾಗಿಲ್ಲ
ಸಭಾ ಭವನದ ಮೇಲ್ಛಾವಣಿಯು ನಾಲ್ಕೈದು ತಿಂಗಳ ಹಿಂದೆ ಕುಸಿಯುವ ಭೀತಿಯಲ್ಲಿತ್ತು. ಶಾಲಾ ಪ್ರಾಂಶುಪಾಲರು ಇದರ ದುರಸ್ತಿಯಾಗದಿದ್ದರೆ ಅಪಾಯ ವಾಗಬಹುವುದೆನ್ನುವ ಉದ್ದೇಶದಿಂದ ತತ್ ಕ್ಷಣ ದುರಸ್ತಿಗಾಗಿ ಜಿಲ್ಲಾಧಿಕಾರಿ ಹಾಗೂ ಅಧಿಕಾರಿಗಳಿಗೆ ಪತ್ರ ಬರೆದಿದ್ದರು. ಆದರೆ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸದ ಕಾರಣ ಮೇಲ್ಛಾವಣಿ ಕುಸಿದು ಬಿದ್ದಿದೆ. ಶಿಕ್ಷಣ ಸಂಸ್ಥೆ ಆಗಿರುವ ಕಾರಣ ಜನಪ್ರತಿನಿಧಿಗಳು ಮತ್ತು ಇಲಾಖೆ ತುರ್ತು ಪರಿಹಾರದಲ್ಲಿ ಅನುದಾನ ನೀಡಿ ದುರಸ್ತಿ ಮಾಡಬೇಕಿದೆ. ಆದರೆ ತಿಂಗಳುಗಳು ಕಳೆದರೂ ಕೂಡ ದುರಸ್ತಿ ಬಗ್ಗೆ ಗಮನಹರಿಸಿಲ್ಲ. ಹೀಗಾಗಿ ಶಿರೂರಿನ ಪ್ರಮುಖ ಕಾಲೇಜಿನ ಅವ್ಯವಸ್ಥೆ ನೋಡಿ ಮರುಕ ಪಡುವಂತಾಗಿದೆ. ಇಲಾಖೆ ಈ ಬಗ್ಗೆ ಗಮನಹರಿಸಿ ತುರ್ತು ದುರಸ್ತಿಮೂಲಕ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಸಂಸ್ಥೆಗೆ ಅನುಕೂಲ ಮಾಡಿಕೊಡಬೇಕು ಎನ್ನುವುದು ಶಿಕ್ಷಣಾಭಿಮಾನಿಗಳ ಅಭಿಪ್ರಾಯವಾಗಿದೆ.
ಮೇಲ್ಛಾವಣಿ ಶೀಘ್ರ ದುರಸ್ತಿಗೆ ಕ್ರಮ
ಕಾಲೇಜಿನ ಮೇಲ್ಛಾವಣಿ ಕುಸಿದಿರುವ ಕುರಿತು ಶಾಸಕರ ಗಮನಕ್ಕೆ ತರಲಾಗಿದೆ. ಶಾಸಕರ ನಿಧಿಯಿಂದ ಎರಡು ಲ.ರೂ. ಅನುದಾನ ನೀಡುವ ಭರವಸೆ ನೀಡಿದ್ದಾರೆ. ಸಂಬಂಧಪಟ್ಟ ಎಂಜಿನಿಯರ್‌ಗಳಿಗೆ ಅಂದಾಜು ಪಟ್ಟಿ ತಯಾರಿಸಲು ತಿಳಿಸಿದ್ದು ಶೀಘ್ರ ದುರಸ್ತಿ ಮಾಡಲಾಗುವುದು
. -ತುಳಸೀದಾಸ ಮೊಗೇರ, ಕಾರ್ಯಾಧ್ಯಕ್ಷ ಶಾಲಾಭಿವೃದ್ಧಿ ಸಮಿತಿ