Advertisement

ರಾಜ್ಯ ಹಾಕಿ ಸಂಸ್ಥೆಯಿಂದಲೇ ಕಿರಿಯರಿಗೆ ಕತ್ತರಿ?

11:24 AM Dec 06, 2017 | Team Udayavani |

ಬೆಂಗಳೂರು: ಕರ್ನಾಟಕದಲ್ಲಿ ಹಾಕಿ ಕುಸಿತಕ್ಕೆ ಕಾರಣಗಳೇನು? ಉತ್ತರ ಹುಡುಕುತ್ತ ಹೋದರೆ ಹಲವಾರು ಕಾರಣ ತೆರೆದುಕೊಳ್ಳುತ್ತದೆ. ತುಸು ಆತಂಕಕ್ಕೂ ಎಡೆ ಮಾಡಿಕೊಡುತ್ತದೆ.

Advertisement

ಸ್ವತಃ ರಾಜ್ಯ ಹಾಕಿ ಸಂಸ್ಥೆ ಬೇಜವಾಬ್ದಾರಿ ತನ, ಕೋಚ್‌ಗಳ ನಿರ್ಲಕ್ಷ್ಯದಿಂದ ರಾಜ್ಯ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕುಗ್ಗಿದೆ. ಹೀಗೊಂದು ಸ್ಫೋಟಕ ಸುದ್ದಿಯನ್ನು ಹಾಕಿ  ಕರ್ನಾಟಕದ ಹೆಸರು ಹೇಳಲಿಚ್ಛಿಸದ ವ್ಯಕ್ತಿಯೊಬ್ಬರು ಉದಯವಾಣಿಗೆ ತಿಳಿಸಿದ್ದಾರೆ. ಆದರೆ ಹಾಕಿ ಕರ್ನಾಟಕ ಪ್ರಧಾನ ಕಾರ್ಯದರ್ಶಿ ಎ.ಬಿ. ಸುಬ್ಬಯ್ಯ ಈ ಆರೋಪವನ್ನು ತಳ್ಳಿ ಹಾಕಿದ್ದಾರೆ.

ಹಾಕಿ ಕರ್ನಾಟಕ ನಿರ್ಲಕ್ಷ್ಯವೇ?
ಕಳೆದ 5-6 ವರ್ಷದಲ್ಲಿ ಹಾಕಿ ಕರ್ನಾಟಕ ಕಿರಿಯರಿಗಾಗಿ ಕೂಟವನ್ನು ಸರಿಯಾಗಿ ಆಯೋ ಜಿಸುತ್ತಿಲ್ಲ. ಇದರಿಂದ ಹಾಕಿ ಕರ್ನಾಟಕದ ಹುಡುಗರು ದೊಡ್ಡ ಮಟ್ಟದಲ್ಲಿ ಅವಕಾಶ ಕಳೆದುಕೊಳ್ಳುತ್ತಿದ್ದಾರೆ. ಸದ್ಯ ರಾಜ್ಯದಲ್ಲಿ ವರ್ಷಕ್ಕೆ 2 ಪ್ರಮುಖ ಕೂಟ ಆಯೋಜಿಸಿದರೆ ಅದೇ ದೊಡ್ಡದು. ಹೆಚ್ಚು ಕೂಟವನ್ನು ಆಡಿ, ಸಾಮರ್ಥ್ಯ, ಕೌಶಲ ಹೆಚ್ಚಿಸಿಕೊಳ್ಳಬೇಕಾಗಿದ್ದು ಅಗತ್ಯ. ಆದರೆ ಕಿರಿಯ ಆಟಗಾರರನ್ನು ಸಂಪೂರ್ಣ ನಿರ್ಲಕ್ಷಿಸಲಾಗಿದೆ. ಇದರಿಂದ ರಾಷ್ಟ್ರೀಯ ಕಿರಿಯರ ತಂಡದಲ್ಲಿ ರಾಜ್ಯ ಆಟಗಾರರಿಗೆ ಸ್ಥಾನ ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಹಾಕಿ ಕರ್ನಾಟಕದ ಅಧಿಕಾರಿಯೊಬ್ಬರು ಬೇಸರ ವ್ಯಕ್ತಪಡಿಸಿದ್ದಾರೆ.

ರಾಜ್ಯ ಆಟಗಾರರಿಗೆ ಭಾರತ ತಂಡದಲ್ಲಿ ಸ್ಥಾನ ಸಿಗದಿರಲು ಹಾಕಿ ಕರ್ನಾಟಕವೇ ಕಾರಣ ಅನ್ನುವ ಆರೋಪವನ್ನು ಹಾಕಿ ಕರ್ನಾಟಕ ಪ್ರಧಾನ ಕಾರ್ಯದರ್ಶಿ ಎ.ಬಿ. ಸುಬ್ಬಯ್ಯ ತಳ್ಳಿ ಹಾಕಿದ್ದಾರೆ. ಕಿರಿಯರ ಹಾಗೂ ಹಿರಿಯರ ಕೂಟ ಹೆಚ್ಚು ಆಯೋಜಿಸಲು ಆಗುವುದಿಲ್ಲ. ಹಾಗಂತ ಆಯೋಜಿಸಿಯೇ ಇಲ್ಲ ಎಂದು ಆರೋಪಿ ಸುತ್ತಿರುವುದು ಸತ್ಯಕ್ಕೆ ದೂರವಾದ ಮಾತು. ಅಖೀಲ ಭಾರತ ಮಟ್ಟದ ಒಂದು ಕೂಟವನ್ನು ಆಯೋಜಿಸಲು 60 ಲಕ್ಷ ರೂ. ಬೇಕು. ಅಷ್ಟೊಂದು ಹಣವನ್ನು ಖರ್ಚು ಮಾಡುವುದು ಭಾರೀ ಕಷ್ಟದ ವಿಚಾರ. ನಮ್ಮಲ್ಲೂ ಕೆಲವೊಂದು ಸಮಸ್ಯೆಗಳಿವೆ ಅನ್ನು ವುದನ್ನು ಯಾರೂ ಮರೆಯಬಾರದು ಎಂದರು.

ತರಬೇತುದಾರರ ಬೇಜವಾಬ್ದಾರಿ?
ಭಾರತೀಯ ಕ್ರೀಡಾ ಪ್ರಾಧಿಕಾರ (ಸಾಯ್‌)ದಲ್ಲಿ ರಾಜ್ಯದ 70ಕ್ಕೂ ಹೆಚ್ಚು ಹಾಕಿಪಟುಗಳು ತರಬೇತಿ ಪಡೆಯುತ್ತಿದ್ದಾರೆ. ಇವರೆಲ್ಲರೂ ಹಾಕಿ ಕರ್ನಾಟಕದಿಂದ ಮಾನ್ಯತೆ ಹೊಂದಿದವರು. ಆದರೆ ಅವರಿಗೆ ಕೋಚ್‌ಗಳಿಂದ ಪರಿಣಾಮ ಕಾರಿಯಾಗಿ ತರಬೇತಿ ಸಿಗುತ್ತಿಲ್ಲ ಎಂದು ಹಾಕಿ ಕೂರ್ಗ್‌ ಅಧ್ಯಕ್ಷ ಪಿ.ಇ. ಕಾಳಯ್ಯ ಅವರು ತಿಳಿಸಿದ್ದಾರೆ. 4 ವರ್ಷದ ಹಿಂದೆ ಬೆಂಗಳೂರಿನ ಸಾಯ್‌ನಿಂದ ನಿಕಿನ್‌ ತಿಮ್ಮಯ್ಯ ಮಾತ್ರ ಭಾರತೀಯ ತಂಡಕ್ಕೆ ಆಯ್ಕೆಯಾಗಿದ್ದರು. ಅವರ ಬಳಿಕ ಸಾಯ್‌ನಿಂದ ಒಬ್ಬ ಆಟಗಾರನೂ ಭಾರತ ತಂಡಕ್ಕೆ ಆಯ್ಕೆಯಾಗಿಲ್ಲ. ಇದು ತೀವ್ರ ಬೇಸರದ ಸಂಗತಿ ಎಂದು ಕಾಳಯ್ಯ ವಿವರಿಸಿದರು.

Advertisement

ಉತ್ತರ ಭಾರತ ಲಾಬಿ
ಕಿರಿಯರ ರಾಷ್ಟ್ರೀಯ ಕೂಟಕ್ಕೆ ರಾಜ್ಯದ ಆಟಗಾರರು ಏಕೆ ಆಯ್ಕೆಯಾಗುತ್ತಿಲ್ಲ. ಇದಕ್ಕೆ ಉತ್ತರ ಭಾರತದಲ್ಲಿ ನಡೆಯುವ ಲಾಭಿ ಕೂಡ ಒಂದು ಕಾರಣವಂತೆ. ಹೌದು. ಸ್ವತಃ ಸಾಯ್‌ ಕೋಚ್‌ ಒಬ್ಬರು ಇದನ್ನು “ಉದಯವಾಣಿ’ಗೆ ಖಚಿತಪಡಿಸಿದ್ದಾರೆ.

ಹೇಗೆ ನಡೆಯುತ್ತೆ ಲಾಬಿ?
ಉತ್ತರ ಭಾರತದಲ್ಲಿ ಮೊದಲು ಕ್ರೀಡೆ ಬಳಿಕ ಶಿಕ್ಷಣ. ಆದರೆ ದಕ್ಷಿಣ ಭಾರತದಲ್ಲಿ ಶಿಕ್ಷಣಕ್ಕೇ ಮೊದಲ ಆಧ್ಯತೆ. ಉದಾಹರಣೆಗೆ ಹಾಕಿ ಹುಡುಗನೊಬ್ಬ ಹಂತಹಂತವಾಗಿ ಬಂದು 10ನೇ ತರಗತಿಗೆ ತಲುಪುತ್ತಾನೆ. ಆಗ ಅವನಿಗೆ  16 ವರ್ಷ ಆಗಿರುತ್ತದೆ ಎಂದಿಟ್ಟುಕೊಳ್ಳೋಣ. ಆದರೆ ಉತ್ತರ ಭಾರತದಲ್ಲಿ ಹಾಕಿ ಪಟುಗಳು ಶಾಲೆಗೆ ಹೋಗುವುದಿಲ್ಲ. 20 ವರ್ಷದವನು ಕೂಡ ನಕಲಿ ಪ್ರಮಾಣ ಪತ್ರದೊಂದಿಗೆ ನೇರವಾಗಿ 10ನೇ ತರಗತಿ ಪರೀಕ್ಷೆ ಬರೆಯುತ್ತಾನೆ. ನಮ್ಮ ಹುಡುಗನಿಗಿಂತ 4 ವರ್ಷ ದೊಡ್ಡವನು ಮುಂದೆ ಜೂನಿಯರ್‌ ಹಾಕಿ ಆಯ್ಕೆಗೆ ಬರುತ್ತಾನೆ. ಅವನಿಗೆ ಅವಕಾಶ ಸಿಗುತ್ತದೆ. ನಮ್ಮವನಿಗೆ ನಿರಾಶೆಯಾಗುತ್ತದೆ. ಇದು ದೊಡ್ಡ ಮಟ್ಟದಲ್ಲಿ ನಡೆಯುವ ಲಾಭಿ. ಕಳೆದ ವಿಶ್ವಕಪ್‌ ವಿಜೇತ ಕಿರಿಯರ ತಂಡದಲ್ಲೂ ಅನೇಕ ಆಟಗಾರರಿಗೆ ಈ ರೀತಿಯಲ್ಲಿ ನಿರಾಶೆಯಾಗಿದೆ ಎಂದು ಕೋಚ್‌ ಅಸಮಾಧಾನ ವ್ಯಕ್ತಪಡಿಸಿದರು.

ಹೇಮಂತ್‌ ಸಂಪಾಜೆ

Advertisement

Udayavani is now on Telegram. Click here to join our channel and stay updated with the latest news.

Next