Advertisement

ಶರ್ಟ್‌ ಆ್ಯಂಡ್‌ ಸ್ವೀಟ್‌ 

02:28 PM Sep 20, 2017 | |

ಅತ್ತ ಫ್ರಾಕ್‌ ಅಲ್ಲದ, ಇತ್ತ ಅಂಗಿಯೂ ಆಗಿಲ್ಲದ ಹೊಸ ಡ್ರೆಸ್‌ನ ಹೆಸರೇ ಶರ್ಟ್‌ ಡ್ರೆಸ್‌! ಪಾರ್ಟಿ ಹಾಗೂ ಪಿಕ್ನಿಕ್‌ಗೆ ಹೋಗುವಾಗಷ್ಟೇ ಈ ಡ್ರೆಸ್‌ ತೊಡಬಹುದು. ದಸರಾ ರಜೆಗೆ ನೀವೇನಾದರೂ ಬೀಚ್‌ಗೆ ಹೋದರೆ, ಶರ್ಟ್‌ ಡ್ರೆಸ್‌ ತೊಟ್ಟು ನೋಡಿ…

Advertisement

ಮಹಿಳೆಯರು ಶರ್ಟ್‌- ಪ್ಯಾಂಟ್‌ ತೊಡುವುದು ಹೊಸ ವಿಷಯವೇನಲ್ಲ. ಆದರೆ, ಬರೀ ಶರ್ಟನ್ನೇ ತೊಟ್ಟು, ಅದೇ ಒಂದು ಹೊಸ ಡ್ರೆಸ್‌ನಂತಾಗಿರುವುದು ಈಗ ಹೊಸ ಸುದ್ದಿಯೇ. ಆದರೆ, ಇದು ನಿನ್ನೆ ಮೊನ್ನೆ ಕಂಡು ಹಿಡಿಯಲ್ಪಟ್ಟ ಸ್ಟೈಲ್‌ ಅಲ್ಲ. 1950ರಲ್ಲೇ ಫ್ಯಾಷನ್‌ ಲೋಕಕ್ಕೆ ಕಾಲಿಟ್ಟ ಉಡುಪು- ಶರ್ಟ್‌ ಡ್ರೆಸ್‌. ಆ ದಿನಗಳಲ್ಲಿ ಇದನ್ನು ಶರ್ಟ್‌ ವೇಸ್ಟ್ ಡ್ರೆಸ್ಸಸ್‌ ಎಂದೂ ಕರೆಯಲಾಗುತ್ತಿತ್ತು. ಎರಡನೇ ಮಹಾಯುದ್ಧದ ನಂತರ ಆ ಕಾಲದ ಹೆಸರಾಂತ ವಸ್ತ್ರ ವಿನ್ಯಾಸಕರಾದ ಕ್ರಿಸ್ಟಿಯಾನ್‌ ಡಿಯೋರ್‌ ಪರಿಚಯಿಸಿದ ನ್ಯೂ ಲುಕ್‌ ಕೊಚೊರ್‌ ಡಿಸೈನ್‌ನಲ್ಲಿ ಈ ಉಡುಪು ಫ್ಯಾಷನ್‌ ಲೋಕಕ್ಕೆ ಪದಾರ್ಪಣೆ ಮಾಡಿತು. 

ಏನಿದು ಶರ್ಟ್‌ ಡ್ರೆಸ್‌?
ಇದು ಫ್ರಾಕ್‌ನಂತೆ ಕಾಣುವ ಡ್ರೆಸ್‌. ನೋಡಲು ಉದ್ದನೆಯ ಅಂಗಿಯಂತೆ ಇರುತ್ತದೆ. ಜೊತೆಗೆ ಕಾಲರ್‌, ಬಟನ್‌ (ಗುಂಡಿ) ಮತ್ತು ಕಫ್ ಸ್ಲಿàವ್‌ (ಅಂಗಿಯ ತೋಳಿನ ತುದಿಯಲ್ಲಿ ಇರುವ ಪಟ್ಟಿ) ಮತ್ತು ಸೊಂಟಕ್ಕೆ ಬೆಲ್ಟ್ ಇರುತ್ತದೆ. ಹಾಂ, ಥೇಟ್‌ ಅಂಗಿಯಂತೆ ಇದಕ್ಕೆ ಜೇಬು ಕೂಡ ಇರುತ್ತದೆ.

ಅದೂ ಅಲ್ಲ, ಇದೂ ಅಲ್ಲ
ಅತ್ತ ಫ್ರಾಕ್‌ ಅಲ್ಲದ, ಇತ್ತ ಅಂಗಿಯೂ ಅಲ್ಲದ ಈ ಶರ್ಟ್‌ ಡ್ರೆಸ್‌ ಇದೀಗ ಮೇಕ್‌ ಓವರ್‌ ಪಡೆದಿದೆ. ಕೇವಲ ಒಂದೇ ಬಣ್ಣ ಅಥವಾ ಚೆಕÕ… ಡಿಸೈನ್‌ ಅಷ್ಟೇ ಅಲ್ಲದೆ ಫ್ಲವರ್‌ ಪ್ರಿಂಟ್‌ ಅಂದರೆ ಹೂವಿನ ವಿನ್ಯಾಸ ಮತ್ತು ಚಿತ್ರಗಳೂ ಶರ್ಟ್‌ ಡ್ರೆಸ್‌ಗಳಲ್ಲಿ ಮೂಡಿ ಬಂದಿವೆ. ಹಾಗಾಗಿ ಈ ಹೂವಿನ ಅಂಗಿ ಮಹಿಳೆಯರಿಗೆ ಅಚ್ಚುಮೆಚ್ಚಿನದ್ದಾಗಿದೆ.  ಕೇವಲ ಅಂಗಿ ತೊಟ್ಟು ಪ್ಯಾಂಟ್‌ ಅಥವಾ ಸ್ಕರ್ಟ್‌ ಹಾಕದಿದ್ದಾಗ ಸ್ವಲ್ಪ ವಿಚಿತ್ರ ಅನಿಸಿದರೂ, ಈ ಟ್ರೆಂಡ್‌ ಅನ್ನು ಇಷ್ಟಪಡುವವರ ಸಂಖ್ಯೆಯೇನೂ ಕಡಿಮೆಯಿಲ್ಲ. ಶರ್ಟ್‌ ಡ್ರೆಸ್‌ ಜೊತೆ ಶಾರ್ಟ್ಸ್ ಅಂದರೆ ಹಾಟ್‌ ಪ್ಯಾಂಟ್‌ ಕೂಡ ತೊಡಬಹುದು. ಶರ್ಟ್‌ ಡ್ರೆಸ್‌ ಉದ್ದ ಇರುವ ಕಾರಣ, ತೊಟ್ಟ ಶಾರ್ಟ್ಸ್ ಕಾಣಿಸುವುದಿಲ್ಲ.

ಬಣ್ಣ ಬಣ್ಣದ ಅಂಗಿ
ಚರ್ಮ, ಡೆನಿಮ… (ನ್ಸ್), ವೆಲ್ವೇಟ್‌ (ಮಕ್ಮಲ್), ಫ‌ರ್‌ (ತುಪ್ಪುಳು ಚರ್ಮ ಅಥವಾ ಮೃದು ರೋಮದಿಂದ ಮಾಡಿದ ಬಟ್ಟೆ), ಉಣ್ಣೆ… ಹೀಗೆ ವಿಧ ವಿಧದ ಮೆಟೀರಿಯಲ್‌ಗ‌ಳಲ್ಲಿ ಈ ಡ್ರೆಸ್‌ ಲಭ್ಯ. ಚಿತ್ರ, ವಿನ್ಯಾಸದಲ್ಲೂ ವೆರೈಟಿಯಿದೆ. ಕ್ಲಾಸಿಕ್‌ ಕಪ್ಪು ಬಣ್ಣ, ಇಂಡಿಯನ್‌ ಪ್ರಿಂಟ್‌, ಕ್ಯಾಮಫ್ಲಾಜ್‌ ಅಂದರೆ ಮಿಲಿಟರಿಯಲ್ಲಿ ತಮ್ಮನ್ನು ಮರೆಮಾಚಲು ಸೈನಿಕರು ಬಳಸುವ ಉಡುಪಿನ ಮಾದರಿಯ ಬಟ್ಟೆಯ ವಿನ್ಯಾಸ, ಲೇಸ್‌, ಫ್ಲವರ್‌ಪ್ರಿಂಟ್‌, ಹೀಗೆ ಮಾನಿನಿಯರ ಮನಕ್ಕೆ ಒಪ್ಪುವ ಹಲವಾರು ಮಾದರಿಗಳು ಮಾರ್ಕೆಟ್‌ನಲ್ಲಿವೆ.

Advertisement

ಸಿನಿಮಾ ನಟಿಯರೂ ಈ ಟ್ರೆಂಡ್‌ಗೆ ಮಾರು ಹೋಗಿದ್ದಾರೆ. ಏರ್‌ಪೋರ್ಟ್‌ನಿಂದ ಹೊರಬರುವಾಗ ಶರ್ಟ್‌ ಡ್ರೆಸ್‌ನಲ್ಲಿ ಕಾಣಿಸಿಕೊಳ್ಳುವುದು ನಟಿಯರ ಹೊಸ ಫ್ಯಾಶನ್‌ ಆಗಿದೆ. ಅವರನ್ನು ಅನುಕರಣೆ ಮಾಡುವ ಹುಡುಗಿಯರ ಸಂಖ್ಯೆಯೂ ಹೆಚ್ಚುತ್ತಿದೆ.

ಟ್ರೆಂಡಿ, ಆದರೆ ಎಥಿಕ್‌ ಅಲ್ಲ!
ಇವುಗಳನ್ನು ಕೇವಲ ಕ್ಯಾಶುಯಲ… ಬಟ್ಟೆಯಂತೆ ಉಡಬಹುದೇ ಹೊರತು ಹಬ್ಬ, ಹರಿದಿನ, ಪೂಜೆ, ಮದುವೆಯಂಥ ದೊಡ್ಡ ಸಮಾರಂಭಗಳಿಗೆ ಈ ಡ್ರೆಸ್‌ ಸರಿ ಹೊಂದುವುದಿಲ್ಲ. ಹಾಗಾಗಿ, ಪಾರ್ಟಿ, ಪಿಕ್ನಿಕ್‌, ಸಿನಿಮಾ ಮತ್ತು ಶಾಪಿಂಗ್‌ಗೆ ಮಾತ್ರ ಈ ಡ್ರೆಸ್‌ ಸೂಕ್ತ. ಬಹುತೇಕ ಕಾಲೇಜುಗಳಲ್ಲಿ ಡ್ರೆಸ್‌ ಕೋಡ್‌ ಇರುವ ಕಾರಣ ಈ ಶರ್ಟ್‌ ಡ್ರೆಸ್‌ ಅನ್ನು ಕಾಲೇಜಿಗೆ ಹೋಗುವಾಗಲೂ ತೊಡುವ ಹಾಗಿಲ್ಲ. ಈ ಉಡುಪಿನ ಜೊತೆ ಚಪ್ಪಲಿ, ಗ್ಲಾಡಿಯೇಟರ್ಸ್‌ ಮತ್ತು ಹೈ ಹೀಲ್ಡ… ಪಾದರಕ್ಷೆಗಳನ್ನು ಹಾಕಬಹುದು. ಆದರೆ ಶರ್ಟ್‌ ಡ್ರೆಸ್‌ಗೆ ಹೇಳಿ ಮಾಡಿಸಿದಂತೆ ಒಪ್ಪುವ ಪಾದರಕ್ಷೆಯೆಂದರೆ ಸ್ನೀಕರ್ಸ್‌ ಅಥವಾ ಶೂಸ್‌. ಈ ಬಾರಿಯ ದಸರಾ ರಜೆಗೆ ನೀವು ಬೀಚ್‌ಗೆ ಹೋಗುವುದಾದರೆ ಶರ್ಟ್‌ ಡ್ರೆಸ್‌ ತೊಟ್ಟು ನೋಡಿ!

ಅದಿತಿಮಾನಸ ಟಿ.ಎಸ್‌.

Advertisement

Udayavani is now on Telegram. Click here to join our channel and stay updated with the latest news.

Next