Advertisement

Shiroor Hill Colapse: ಎಂಟು ಬಾರಿ ಮುಳುಗಿದರೂ ಸಿಗದ ವಸ್ತುಗಳ ಕುರುಹು!

01:14 AM Jul 28, 2024 | Team Udayavani |

ಅಂಕೋಲಾ/ಉಡುಪಿ: ಉತ್ತರಕನ್ನಡ ಜಿಲ್ಲೆಯ ಶಿರೂರು ಗುಡ್ಡ ಕುಸಿತ ಪ್ರದೇಶದಲ್ಲಿ ಪಕ್ಕದಲ್ಲೇ ಹರಿಯುತ್ತಿರುವ ಗಂಗಾವಳಿ ನದಿಯಲ್ಲಿ ಮುಳುಗು ತಜ್ಞ ಈಶ್ವರ ಮಲ್ಪೆ ತಂಡ ಎಂಟು ಬಾರಿ ನೀರಿನಲ್ಲಿ ಮುಳುಗಿ ಕಾರ್ಯಾಚರಣೆ ನಡೆಸಿದರೂ ಯಾವುದೇ ವಸ್ತುಗಳು ಪತ್ತೆಯಾಗಿಲ್ಲ.

Advertisement

ಶನಿವಾರ ಸ್ಥಳಕ್ಕಾಗಮಿಸಿದ ಈ ತಂಡ ನೌಕಾಪಡೆ-ಭೂಸೇನಾ ಅಧಿಕಾರಿಗಳು, ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಬಳಿ ಸಂಪೂರ್ಣ ಮಾಹಿತಿ ಪಡೆದುಕೊಂಡು ಹಾಗೂ ಡ್ರೋನ್‌ ಕಾರ್ಯಾಚರಣೆ ವರದಿ ಪಡೆದುಕೊಂಡು ಸ್ಥಳೀಯ ಮೀನುಗಾರರ ಸಹಾಯ ಪಡೆದು ಕಾರ್ಯಾಚರಣೆ ನಡೆಸಿತು. ತಮ್ಮದೇ ಆದ ಶೈಲಿಯಲ್ಲಿ ಸ್ಕೆಚ್‌ ರೂಪಿಸಿಕೊಂಡು ಸುಮಾರು 8 ಬಾರಿ ನೀರಿಗೆ ಧುಮುಕಿದರು.

ದಿಲ್ಲಿಯ ನಿವೃತ್ತ ಮೇಜರ್‌ ಇಂದ್ರಬಾಲನ್‌ ನೇತೃತ್ವದ ತಂಡ ಸುಧಾರಿತ ಡ್ರೋನ್‌ ಬಳಸಿ ನೀರಿನಾಳದಲ್ಲಿ ನಾಲ್ಕು ಕಡೆ ಲೋಹದ ವಸ್ತುಗಳನ್ನು ಪತ್ತೆಹಚ್ಚಿದ್ದರೂ ಆ ಕುರಿತ ಯಾವುದೇ ಕುರುಹು ಈ ತಂಡದ ಸದಸ್ಯರಿಗೆ ಪತ್ತೆಯಾಗಲಿಲ್ಲ. ಆದರೆ ನೀರಿನೊಳಗೆ ಬೃಹತ್‌ ಆಲದ ಮರ ಹಾಗೂ ಭಾರೀ ಗಾತ್ರದ ಮರದ ದಿಮ್ಮಿಗಳು ಇರುವುದು ತಿಳಿದುಬಂದಿದೆ.

ನೀರಿನಾಳದಲ್ಲಿ ಭಾರೀ ಪ್ರಮಾಣದಲ್ಲಿ ಮಣ್ಣು ಕಲ್ಲುಗಳೇ ಕಾಣುತ್ತಿವೆ. ಜತೆಗೆ ನೀರಿನ ಹರಿವು ಹೆಚ್ಚಿದ್ದು ಮಣ್ಣು ಮಿಶ್ರಿತವಾಗಿ ಬಣ್ಣ ಕೆಂಪಾಗಿರುವುದೂ ಕಾರ್ಯಾಚರಣೆಗೆ ತೊಡಕಾಗಿದೆ. ರವಿವಾರವೂ ಕಾರ್ಯಾಚರಣೆ ಮುಂದುವರಿಯಲಿದೆ ಎಂದು ಮೂಲಗಳು ತಿಳಿಸಿವೆ.

ಶಿರೂರಿನಲ್ಲಿ ಕೇರಳ ಸಂಸದ-ಶಾಸಕರ ದಂಡು
ಅಂಕೋಲಾ: ಉತ್ತರಕನ್ನಡ ಜಿಲ್ಲೆಯ ಶಿರೂರು ಗುಡ್ಡ ಕುಸಿತ ಪ್ರದೇಶದಲ್ಲಿ ನಾಪತ್ತೆಯಾಗಿರುವ ಕೇರಳ ಮೂಲದ ಟಿಂಬರ್‌ ಲಾರಿ ಹಾಗೂ ಚಾಲಕ ಅರ್ಜುನ್‌ ಪತ್ತೆಗೆ ನಡೆಯುತ್ತಿರುವ ಕಾರ್ಯಾಚರಣೆ ವೀಕ್ಷಣೆಗೆ ಕೇರಳದ ಸಂಸದ-ಶಾಸಕರ ದಂಡೇ ನೆರೆದಿದೆ.
ಕೇರಳದ ಲೋಕೋಪಯೋಗಿ ಸಚಿವ ರಿಯಾಜ್‌ ಅಹ್ಮದ್‌, ಅರಣ್ಯ ಇಲಾಖೆ ಸಚಿವ ಎ.ಕೆ. ಶಶೀಂದ್ರ, ಕೋಝಿಕ್ಕೋಡ್‌ ಸಂಸದ ಎಂ.ಕೆ.ರಾಘವನ್‌, ತಲಶೇರಿ ಶಾಸಕ ವಿಜೀನ್‌, ಮಂಜೇಶ್ವರ ಶಾಸಕ ಆಶ್ರಫ್‌, ತ್ರಿಕರಿಪುರ ಶಾಸಕ ಎಂ.ರಾಜಗೋಪಾಲನ್‌, ಬಾಲುಸ್ಸೇರಿ ಶಾಸಕ ಸಚಿನ್‌ದೇವ, ತಿರುವಂಬಾಡಿ ಶಾಸಕ ಲಿಂಟೋ ಜೋಸೆಫ್‌ ಕಾರ್ಯಾಚರಣೆ ನಡೆಯುತ್ತಿರುವ ಸ್ಥಳಕ್ಕೆ ಆಗಮಿಸಿದ್ದು ಕ್ಷಣಕ್ಷಣಕ್ಕೂ ಜಿಲ್ಲಾಡಳಿತ ಮತ್ತು ನೌಕಾಪಡೆ ಅ ಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.

Advertisement

“ರವಿವಾರ ಬೆಳಗ್ಗೆ ಬೆಳಗ್ಗೆ ನೀರಿನ ಸೆಳೆತ ಹೇಗಿರಲಿದೆ ಎಂಬುದನ್ನು ನೋಡಿಕೊಂಡು ಯೋಜನೆ ರೂಪಿಸಿ ಮತ್ತೆ ಕಾರ್ಯಾಚರಣೆ ಆರಂಭಿಸಲಿದ್ದೇವೆ. ಜಿಲ್ಲಾಡಳಿತದಿಂದಲೂ ಎಲ್ಲ ರೀತಿಯ ಸಹಕಾರ ಸಿಕ್ಕಿದೆ. ಕಾರ್ಯಾಚರಣೆ ವೇಳೆ ಒಬ್ಬರಿಗೆ ಸ್ವಲ್ಪ ಪೆಟ್ಟಾಗಿದೆ. ನಮ್ಮಲ್ಲಿ ಮೂವರು ಮುಳುಗು ತಜ್ಞರಿದ್ದೇವೆ. ಉಳಿದಂತೆ ಬೇರೆ ಬೇರೆ ಕಾರ್ಯಾಚರಣೆ ಮಾಡಬಲ್ಲವರಿದ್ದಾರೆ. 8 ಜನ ಬಂದಿದ್ದೇವೆ. ಮುಳುಗಲು ಅನುಕೂಲವಾಗುವ ಆಕ್ಸಿಜನ್‌ ಸಿಲಿಂಡರ್‌, ಅಂಡರ್‌ವಾಟರ್‌ ಕೆಮರಾ, ಟಾರ್ಚ್‌ ಇತ್ಯಾದಿ ಉಪಕರಣಗಳು ಇವೆ. ಎಷ್ಟು ಸಾಧ್ಯವೋ ಅಷ್ಟು ಪ್ರಯತ್ನ ನಡೆಸಲಿದ್ದೇವೆ.”  – ಈಶ್ವರ ಮಲ್ಪೆ, ಮುಳುಗು ತಜ್ಞ

“ನೌಕಾಪಡೆ ಹಾಗೂ ಸೇನೆ ಸಹ ಇವತ್ತಿನ ಕಾರ್ಯಾಚರಣೆಯಲ್ಲಿತ್ತು. ಐಬೋರ್ಡ್‌ ಡ್ರೋನ್‌ ವರದಿಯಲ್ಲಿ ಅವಶೇಷಗಳು ನದಿಯ ನಾಲ್ಕು ಸ್ಥಳದಲ್ಲಿವೆ ಎಂದು ಗುರುತಿಸಿದರೂ ಈಜುಗಾರರಿಗೆ ಏನೂ ಸಿಕ್ಕಿಲ್ಲ. ನದಿಯ ಮೂರು ಸ್ಥಳಗಳಲ್ಲಿ ಅವರು ಮುಳುಗಿ ಹುಡುಕಿದ್ದಾರೆ. ಈಜುಗಾರರ ಜತೆ ಚರ್ಚಿಸಿ ಮುಂದಿನ ಕಾರ್ಯಾಚರಣೆ ಬಗ್ಗೆ ಯೋಜನೆ ರೂಪಿಸಲಾಗುವುದು. ರವಿವಾರಕ್ಕೆ ಕೋಸ್ಟ್‌ಗಾರ್ಡ್‌ ಹೆಲಿಕಾಪ್ಟರ್‌ ಸಹಾಯ ಕೋರಿದ್ದೇವೆ.”  -ಲಕ್ಷ್ಮೀಪ್ರಿಯಾ, ಉತ್ತರ ಕನ್ನಡ ಜಿಲ್ಲಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next