Advertisement

ಸಿಎಎ ಭಿನ್ನಮತ : ದೆಹಲಿ ಚುನಾವಣೆಯಲ್ಲಿ ಸ್ಪರ್ಧಿಸದಿರಲು ಅಕಾಲಿದಳ ನಿರ್ಧಾರ

09:48 AM Jan 21, 2020 | Hari Prasad |

ನವದೆಹಲಿ: ತನ್ನ ಮಿತ್ರಪಕ್ಷ ಭಾರತೀಯ ಜನತಾ ಪಕ್ಷದೊಂದಿಗೆ ಪೌರತ್ವ ತಿದ್ದುಪಡಿ ಕಾಯ್ದೆಯಲ್ಲಿನ ಕೆಲವೊಂದು ಅಂಶಗಳ ಕುರಿತಾಗಿರುವ ಭಿನ್ನಮತದ ಕಾರಣದಿಂದ ಮುಂಬರುವ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸದೇ ಇರಲು ಶಿರೋಮಣಿ ಅಕಾಲಿ ದಳ ನಿರ್ಧರಿಸಿದೆ.

Advertisement

ಅರವಿಂದ ಕೇಜ್ರಿಮಾಲ್ ಅವರನ್ನು ಅಧಿಕಾರದಿಂದ ಕೆಳಗಿಳಿಸಿ ದೆಹಲಿ ಗದ್ದುಗೆಯನ್ನು ಏರುವ ಕನಸು ಕಾಣುತ್ತಿರುವ ಬಿಜೆಪಿಗೆ ಇದೊಂದು ಹಿನ್ನಡೆ ಎಂದು ವಿಶ್ಲೇಷಿಸಲಾಗುತ್ತಿದೆ. ದೆಹಲಿಯಲ್ಲಿ ಕನಿಷ್ಟ ನಾಲ್ಕು ಸ್ಥಾನಗಳಲ್ಲಿ ಅಕಾಲಿದಳ ಪಕ್ಷದ ಜೊತೆಗೆ ಹೊಂದಾಣಿಕೆ ಮಾಡಿಕೊಳ್ಳಲು ಬಿಜೆಪಿ ನಿರ್ಧರಿಸಿತ್ತು.

ಕಳೆದ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ನಾಲ್ಕು ಸ್ಥಾನಗಳನ್ನು ಬಿಜೆಪಿ ಶಿರೋಮಣಿ ಅಕಾಲಿ ದಳಕ್ಕೆ ಬಿಟ್ಟುಕೊಟ್ಟಿತ್ತು ಹಾಗೂ ಒಬ್ಬ ಅಕಾಲಿ ದಳ ಅಭ್ಯರ್ಥಿ ಬಿಜೆಪಿ ಪಕ್ಷದ ಚಿಹ್ನೆಯ ಅಡಿಯಲ್ಲಿ ಸ್ಪರ್ಧಿಸಿದ್ದರು. ಇದು ಆ ಎರಡು ಪಕ್ಷಗಳ ನಡುವೆ ನಡೆದಿದ್ದ ಚುನಾವಣಾ ಪೂರ್ವ ಒಪ್ಪಂದವಾಗಿತ್ತು. ಅಕಾಲಿದಳ ನಾಯಕ ಮಂಜಿಂದರ್ ಸಿಂಗ್ ಸಿರ್ಸಾ ಅವರು ಬಿಜೆಪಿ ಚಿಹ್ನೆಯಡಿಯಲ್ಲಿ ರಜೌರಿ ಗಾರ್ಡನ್ ಕ್ಷೇತ್ರದಿಂದ ಸ್ಪರ್ಧಿಸಿದ್ದರು.

ಪೌರತ್ವ ತಿದ್ದುಪಡಿ ಕಾಯ್ದೆಯಲ್ಲಿ ಒಂದು ಸಮುದಾಯವನ್ನು ಹೊರಗಿಟ್ಟಿರುವುದರ ಕುರಿತಾಗಿ ಅಕಾಲಿದಳದ ಮುಖ್ಯಸ್ಥ ಸುಖ್ಬೀರ್ ಬಾದಲ್ ತನ್ನ ಅಸಮಧಾನವನ್ನು ವ್ಯಕ್ತಪಡಿಸಿದ್ದರು ಮಾತ್ರವಲ್ಲದೇ ಈ ಅಂಶವನ್ನು ಪುನರ್ ಪರಿಶೀಲಿಸುವಂತೆ ಅವರು ತಮ್ಮ ದೀರ್ಘಕಾಲದ ಮಿತ್ರ ಬಿಜೆಪಿಗೆ ಸೂಚಿಸಿದ್ದರು.

ಆದರೆ ಬಿಜೆಪಿ ನಾಯಕರು ಸುಖ್ಬೀರ್ ಅವರ ಈ ಕೋರಿಕೆಯನ್ನು ಪುನರ್ ಪರಿಶೀಲಿಸುವಂತೆ ಮನವಿ ಮಾಡಿಕೊಂಡಿದ್ದರು. ಆದರೆ ತಮ್ಮ ಈ ನಿಲುವಿನಲ್ಲಿ ಯಾವುದೇ ಬದಲಾವಣೆ ಮಾಡಿಕೊಳ್ಳದೇ ಇರಲು ನಿರ್ಧರಿಸಿರುವ ಅಕಾಲಿದಳ ಮುಖಂಡರು ಬದಲಾಗಿ ದೆಹಲಿ ಚುನಾವಣೆಯಲ್ಲಿ ತಮ್ಮ ಮೈತ್ರಿ ಪಕ್ಷದ ಜೊತೆ ಹೊಂದಾಣಿಕೆ ಮಾಡಿಕೊಳ್ಳದೇ ಇರಲು ನಿರ್ಧರಿಸಿದ್ದಾರೆ.

Advertisement

ಈ ಬಾರಿಯ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷವು ನಿತೀಶ್ ಕುಮಾರ್ ನೇತೃತ್ವದ ಜೆಡಿ(ಯು) ಮತ್ತು ರಾಮ್ ವಿಲಾಸ್ ಪಾಸ್ವಾನ್ ನಾಯಕತ್ವದ ಎಲ್.ಜೆ.ಪಿ. ಜೊತೆ ಸೀಟು ಹಂಚಿಕೊಳ್ಳಲು ನಿರ್ಧರಿಸಿದೆ. ಜೆಡಿಯುಗೆ ಎರಡು ಮತ್ತು ಎಲ್.ಜೆ.ಪಿ.ಗೆ ಒಂದು ಸ್ಥಾನವನ್ನು ಬಿಜೆಪಿ ಈ ಬಾರಿ ಬಿಟ್ಟುಕೊಡಲಿದೆ.

Advertisement

Udayavani is now on Telegram. Click here to join our channel and stay updated with the latest news.

Next