Advertisement

ಸೊರಗಿದ ಕೈ ಪಡೆಯಿಂದ ಮತದಾರರ ಸೆಳೆಯಲು ಮಿಷನ್‌ ಕಾಂಗ್ರೆಸ್‌

07:55 PM Dec 02, 2019 | Naveen |

„ರಾಘವೇಂದ್ರ ಬೆಟ್ಟಕೊಪ್ಪ
ಶಿರಸಿ:
ಕಾಂಗ್ರೆಸ್‌ ಮತದಾರರನ್ನು ಸೆಳೆಯಲು ಯಲ್ಲಾಪುರ ವಿಧಾನಸಭೆಯ ಬನವಾಸಿ ಹೋಬಳಿಯಲ್ಲಿ “ಮಿಷನ್‌ ಕಾಂಗ್ರೆಸ್‌’ ಅನುಷ್ಠಾನ ಮಾಡಲಾಗುತ್ತಿದ್ದು, ರಾಜ್ಯದಲ್ಲೇ ಮಾದರಿ ಪ್ರಯೋಗ ಇದಾಗಿದೆ. ಕಳೆದ ಒಂದು ವಾರದಿಂದ ಇದು ಸದ್ದಿಲ್ಲದೇ ನಡೆದಿದ್ದು, ಹಿರಿಯ ನಾಯಕರು ನೇತೃತ್ವ ವಹಿಸಿದ್ದಾರೆ. ಬನವಾಸಿ ಹೋಬಳಿಯ ಹತ್ತೂ ಗ್ರಾಪಂಗಳಲ್ಲಿ ಏಕಕಾಲಕ್ಕೆ ಕಾರ್ಯಕರ್ತರ ಪಡೆ ಕೆಲಸ ಮಾಡುತ್ತಿದೆ.

Advertisement

ಇದೇ ಪ್ರಥಮ: ಕಳೆದ ಅನೇಕ ವಿಧಾನಸಭೆ, ಲೋಕಸಭೆ ಚುನಾವಣೆಗಳಲ್ಲಿ ಹಿನ್ನಡೆ ಅನುಭವಿಸಿದ್ದ ಕಾಂಗ್ರೆಸ್‌ ಮತದಾರರನ್ನು ಮನವೊಲಿಸಲು ಹೊಸ ನಡೆಗೆ ಮುಂದಾಗಿದೆ. ಕಳೆದ ಚುನಾವಣೆಗಳಿಗಿಂತ ಹೆಚ್ಚು ಆಸಕ್ತಿ ವಹಿಸಿರುವ ಪಕ್ಷ ಮಾಜಿ ಸಚಿವರು, ಸಂಸದರಿಗೆ, ವಿವಿಧ ಹಂತದ ಜನಪ್ರತಿನಿಧಿಗಳಿಗೆ ನಿರ್ದಿಷ್ಟವಾದ ಜವಾಬ್ದಾರಿ ಹೊರಿಸಿದೆ. “ಮಿಷನ್‌ ಕಾಂಗ್ರೆಸ್‌’ ವಾಟ್ಸ್‌ ಆ್ಯಪ್‌ ಗ್ರೂಪ್‌ ಸೃಷ್ಟಿಸಿಕೊಂಡು ಕ್ಷಣ ಕ್ಷಣದ ಮಾಹಿತಿ ಪಡೆಯಲಾಗುತ್ತಿದೆ. ಮಾಜಿ ಸಚಿವ ವಿನಯಕುಮಾರ ಸೊರಕೆ, ಪಿ.ಬಿ. ಮೋಹನ್‌ ನೇತೃತ್ವದಲ್ಲಿ ಜವಾಬ್ದಾರಿ ವಹಿಸಲಾಗಿದೆ.

ಎಬಿಸಿ ಸೂತ್ರ: ಮಿಷನ್‌ ಕಾಂಗ್ರೆಸ್‌ಗೆ ಪ್ರಮುಖ ಮಾನದಂಡ ಎ, ಬಿ, ಸಿ ಸೂತ್ರ. ಎ ಎಂದರೆ ಪಕ್ಕಾ ಕಾಂಗ್ರೆಸ್‌ಗೆ ಚಲಾವಣೆ ಆಗದ ಮತಗಳು, ಬಿ ಎಂದರೆ ಶೇ.50 ಆ ಕಡೆ, ಈ ಕಡೆಯ ಮತಗಳು, ಸಿ ಎಂದರೆ ಪಕ್ಕಾ ಕಾಂಗ್ರೆಸ್‌ ಪರವಾಗಿರುವ ಮತಗಳು. ಹತ್ತು ಮನೆಗಳಿಗೆ ಒಬ್ಬ ಪ್ರಮುಖ ಕಾರ್ಯಕರ್ತರನ್ನು ನಿಯೋಜಿಸಿ ಅವರಿಗೆ ಮನವರಿಕೆ ಮಾಡಿಸಿ, ಮತಗಳು ಚಲಾವಣೆ ಆಗುವ ತನಕ ಜವಾಬ್ದಾರಿ ನಿರ್ವಹಿಸಬೇಕು. ಇದರಲ್ಲಿ ಮೂರೂ ವಿಭಾಗದ ಮತದಾರರನ್ನು ಕನಿಷ್ಠ ಒಮ್ಮೆಯಾದರೂ ಸಂಪರ್ಕಿಸಬೇಕು.

ಸಿದ್ಧವಾಗಿದೆ ನಮೂನೆ ಪತ್ರ: ನಿರೀಕ್ಷಿತ ಮತಗಳಿಗೆ, ಜವಾಬ್ದಾರಿ ನಿರ್ವಹಣೆಗಾಗಿ ನಮೂನೆ ಪತ್ರ ಹಂಚಿದೆ. ಚುನಾವಣಾ ಬಳಿಕ ಇನ್ನೊಮ್ಮೆ ಪಕ್ಷ ಕುಳಿತು ಸಮಾಲೋಚಿಸಲಿದೆ. ಇದರ ಎಲ್ಲ ವಿವರಗಳನ್ನೂ ಕಾಲ ಕಾಲಕ್ಕೆ ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡೂರಾವ್‌ ಅವರಿಗೆ ಸಲ್ಲಿಸಲಾಗುತ್ತಿದೆ. ಇದು ಯಶಸ್ವಿಯಾದರೆ ಇದೇ ಮಾದರಿಯನ್ನು ಇಡೀ ರಾಜ್ಯಕ್ಕೂ ಮುಂದುವರಿಸಲು ಕಾಂಗ್ರೆಸ್‌ ಚಿಂತಿಸಿದೆ.

ಆಪರೇಶನ್‌ ಶನಿವಾರ
ಕೆಪಿಸಿಸಿಯು “ಆಪರೇಶನ್‌ ಶನಿವಾರ’ಕ್ಕೂ ಮುಂದಾಗಿದೆ. ಪ್ರತಿ ತಿಂಗಳ ಮೊದಲ ಶನಿವಾರ ಬೂತ್‌ ಮಟ್ಟದ ಜನಪ್ರತಿನಿಧಿಗಳ, ಅಧ್ಯಕ್ಷರ, ಕಾರ್ಯಕರ್ತರ ಸಭೆ ನಡೆಸಬೇಕು. ಪ್ರತಿ ಮಾಸದ ಮೊದಲ ಶನಿವಾರ ಸಮಸ್ಯೆ, ಆಗಬೇಕಾದ ಸಂಗತಿಗಳನ್ನು ಚರ್ಚಿಸಿ ವರದಿಯನ್ನು ಬ್ಲಾಕ್‌ಗೆ ಕಳಿಸಬೇಕು. ಬ್ಲಾಕ್‌ ಕಾಂಗ್ರೆಸ್‌ ಸಮಿತಿ ಎರಡನೇ ಶನಿವಾರ, ಜಿಲ್ಲಾ ಘಟಕವು ಮೂರನೇ ಶನಿವಾರ ಹಾಗೂ ಕೊನೆ ಶನಿವಾರ ಕೆಪಿಸಿಸಿ ಸಭೆ ನಡೆಸಲಿದೆ. ಆಯಾ ವರದಿ ಆಧರಿಸಿ ಪಕ್ಷಗಳ ಸಂಘಟನೆ ಹಾಗೂ ಮುಂದಿನ ನಡೆಗೆ ಇದು ಪೂರಕವಾಗಲಿದೆ ಎನ್ನುತ್ತಾರೆ ಪಕ್ಷದ ಹಿರಿಯರು.

Advertisement

ಕಾಂಗ್ರೆಸ್‌ ಪಕ್ಷವನ್ನು ತಳ ಹಂತದಲ್ಲಿ ಇನ್ನಷ್ಟು ಬಲವರ್ಧನೆಗೊಳಿಸಲು “ಮಿಷನ್‌ ಕಾಂಗ್ರೆಸ್‌’ ಬನವಾಸಿಯಲ್ಲಿ ಮಾದರಿ ಅನುಷ್ಠಾನ ಮಾಡುತ್ತಿದೆ. ಈ ಪ್ರಯೋಗವನ್ನು ಗಂಭೀರವಾಗಿ ಪರಿಗಣಿಸಲಾಗಿದೆ.
ವಿನಯಕುಮಾರ ಸೊರಕೆ,
ಮಾಜಿ ಸಚಿವ.

Advertisement

Udayavani is now on Telegram. Click here to join our channel and stay updated with the latest news.

Next