ಶಿರಸಿ: ಭಕ್ತರ ಜಯಘೋಷ, ಮಾರಿಕಾಂಬಾ ಮಾತಾಕಿ ಜೈ, ಮಾರಮ್ಮ ಉಧೋ ಉಧೋ ಘೋಷಗಳ ಮಧ್ಯೆ, ವಾದ್ಯ, ಡೊಳ್ಳು ಕುಣಿತಗಳ ನಡುವೆ ಮಾರಿಕಾಂಬಾ ದೇವಿಯ ಶೋಭಾಯಾತ್ರೆ ಬುಧವಾರ ವಿಜೃಂಭಣೆಯಿಂದ ನಡೆಯಿತು.
ದೇವಾಲಯದ ಸಭಾ ಮಂಟಪದಲ್ಲಿ ವಿರಾಜಮಾನಳಾದ ಅಮ್ಮ ಬುಧವಾರ ಬೆಳಗ್ಗೆ 7:06ರ ಬಳಿಕ ಅಲ್ಲಿಂದ ಎದ್ದು 7:10ರ ಸುಮಾರಿಗೆ ದೇವಾಲಯದಿಂದ ಹೊರ ಬಂದಳು. ಅಮ್ಮನ ದರ್ಶನ ಹೊರಗೆ ಆಗುತ್ತಿದ್ದಂತೆ ಭಕ್ತರ ಜಯಘೋಷ ಮುಗಿಲು ಮುಟ್ಟಿತು.
ನೂರಾರು ಬಾಬುದಾರರ, ಅರ್ಚಕರ, ಧರ್ಮದರ್ಶಿಗಳ ಸಹಕಾರದಿಂದ, ಪೊಲೀಸರ ಬಿಗಿ ಬಂದೋಬಸ್ತ್ ನಲ್ಲಿ ಸರ್ವಾಲಂಕಾರ ಭೂಷಿತ ದೇವಿ 7.21 ನಿಮಿಷಕ್ಕೆ ರಥ ಏರಿದಳು. ರಥಾರೂಢ ದೇವಿಯನ್ನು ಕೆಲವು ಸಂಪ್ರದಾಯ ಪೂರ್ಣಗೊಳಿಸಿದ ಬಳಿಕ 8:36ಕ್ಕೆ ರಥೋತ್ಸವ ಆರಂಭಗೊಂಡಿತು. ಮಾರಿಕಾಂಬೆ ದರ್ಶನಕ್ಕೆ ಕರಾವಳಿ, ಮಲೆನಾಡು, ಬಯಲು ಸೀಮೆಯವರಷ್ಟೇ ಅಲ್ಲ ಮುಂಬಯಿ, ತಮಿಳುನಾಡು, ಆಂದ್ರ ಪ್ರದೇಶದಿಂದಲೂ ಆಗಮಿಸಿದ್ದಾರೆ. ಸುಮಾರು ನಲ್ವತ್ತು ಸಾವಿರಕ್ಕೂ ಅಧಿಕ ಭಜಕರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.
ಭಕ್ತರ ಹರ್ಷ ಉದ್ಘಾರ: ಭಗವಾಧ್ವಜ ಹೊತ್ತ ಗಗ್ಗರ, ಮಾರಿಕಾಂಬಾ ದೇವಿ ಜಾತ್ರಾ ಮಹೋತ್ಸವ ಪತಾಕೆ ಹಿಡಿದು ರಥೋತ್ಸವ ನಡೆಸಿದರು. ರಾಜ ಗಾಂಭೀರ್ಯದಲ್ಲಿ ಮಧುವಣಗಿತ್ತಿಯ ಸಿಂಗಾರದ ನವ ವಧು ಮಾರಿಕಾಂಬೆ ಒಂದು ಕಿಮೀ ದೂರ ರಥದಲ್ಲಿ ಬಂದಳು. ರಸ್ತೆಯ ಇಕ್ಕೆಲದಲ್ಲಿ ಭಕ್ತರು ಹಾರುಗೋಳಿ, ಬಾಳೆಹಣ್ಣು, ಕಡಲೆ, ಉತ್ತತ್ತಿ, ಹಣ ರಥಕ್ಕೆ ಎಸೆದು ಹರಕೆ ಸಲ್ಲಿಸಿದರು.
ಎಲ್ಲವೂ ಅಮ್ಮನಿಗಾಗಿ: ಸಿಂಗಾರಗೊಂಡ ರಥದಲ್ಲಿ ದೇವಿ ಕಣ್ತುಂಬಿಕೊಳ್ಳಲು ಭಕ್ತರು ಕಾತರದಿಂದ ಕಾದರು. ಮನೆಯ ಮಹಡಿ ಏರಿ ಕೂತಿದ್ದರು. ದೇವಿಯ ದರ್ಶನ ಕಾಣುತ್ತಿದ್ದಂತೆ ಉಧೋ ಉಧೋ ಎನ್ನುವ ಸವದತ್ತಿ ಎಲ್ಲಮನ ಭಕ್ತರು, ಗಾಳಿಮಾರ್ಯ ಕುಟುಂಬದವರು ಚಾಟಿ ಬೀಸಿಕೊಂಡು ಗಮನ ಸೆಳೆದರು. ಡೊಳ್ಳು, ಪಂಚವಾದ್ಯ ಮೊಳಗಿದವು.
ಮೇಟಿ ದೀಪಕ್ಕೆ ಕಾದ ದೇವಿ: 11:30ರ ವೇಳೆಗೆ ಭಕ್ತರ ಪ್ರೀತಿಗೆ ಸರಸರನೆ ಜಾತ್ರಾ ಗದ್ದುಗೆ ಬಳಿ ಬಂದ ದೇವಿ ಹೊತ್ತ ರಥ ತಾಸು ಚಪ್ಪರ ಸಮೀಪವೇ ನಿಂತುಕೊಳ್ಳುವಂತೆ ಆಯಿತು. ರಥದಿಂದ ಅಮ್ಮನನ್ನು ಇಳಿಸಿ ಗದ್ದುಗೆಗೆ ಕರೆತರಲು ಮೇಟಿ ದೀಪ ತರಬೇಕು. ಅದನ್ನು ಯುಗಾದಿ ತನಕ ರಕ್ಷಿಸುವ ಜವಾಬ್ದಾರಿ ಹೊತ್ತವರು ದೇವಸ್ಥಾನ ಸನಿಹ ಹೋಗಿ ತಂದರು. ಅಮ್ಮನ ಶಕ್ತಿ ದೀಪದಲ್ಲಿ ಇರುತ್ತದೆ ಎಂಬ ನಂಬಿಕೆ ಇದೆ. ದೀಪ ಗದ್ದುಗೆ ಬಳಿ ಬರುತ್ತಿದ್ದಂತೆ ರಥದಿಂದ ಮಾರಿಕಾಂಬೆಯನ್ನೂ ಇಳಿಸಿ ಹಾಕಲಾದ ದೇವಿಯ ಮಾರ್ಗದ ಬಿಳೆ ಬಟ್ಟೆ ಮೇಲೆ ಅಮ್ಮನನ್ನು ಕರೆತಂದು 12:53ರ ಸುಮಾರಿಗೆ ಪ್ರತಿಷ್ಠಾಪಿಸಲಾಯಿತು.