Advertisement
ಇತ್ತೀಚೆಗಷ್ಟೇ ಜಿಲ್ಲಾಧಿಕಾರಿ ಮುಲ್ಲೈನ್ ಮುಗಿಲನ್ ಟೆಲಿಕಾಂ ಕಂಪನಿಗಳ ಸಭೆ ನಡೆಸಿ ನೆಟ್‍ವರ್ಕ್ ಶಾಡೊ ಪ್ರದೇಶದಲ್ಲಿ ಮೊಬೈಲ್ ರಿಪೀಟರ್ ಸ್ಥಾಪಿಸಲು ಸೂಚಿಸಿದ್ದು, ಈ ಗ್ರಾಮಗಳು ಟೆಲಿಕಾಂ ಕಂಪನಿಗಳ ಗಮನಕ್ಕೆ ಇನ್ನಾದರೂ ಬಂದೀತೆ ಎಂದು ಇಲ್ಲಿಯ ಜನತೆ ಕಾಯುತ್ತಿದ್ದಾರೆ.
Related Articles
Advertisement
ಅಂಬೆಗಾರು, ಕೋಣನಮನೆಜಡ್ಡಿ, ಈಚಲಬೆಟ್ಟ ಇನ್ನಿತರ ಹಳ್ಳಿಗಳ ಜನತೆ ಮುಳುಗಡೆಯ ಭಯದಲ್ಲಿ ಕಂಗಾಲಾಗುತ್ತಾರೆ. ಕಳೆದ ಮಳೆಗಾಲದಲ್ಲಿ ಅಘನಾಶಿನಿ ನದಿ ಉಕ್ಕಿಹರಿದು ಇಲ್ಲಿಯ ಮಹಿಷಾಸುರ ಮರ್ಧಿನಿ ದೇವಾಲಯವೇ ಮುಳುಗಡೆಯಾಗಿತ್ತು. ಅರ್ಚಕರು ದೇವಾಲಯದೊಳಗೆ ಸಿಲುಕಿದಾಗ ರಕ್ಷಣಾ ಇಲಾಖೆಗಳನ್ನಾಗಲೀ ಅಥವಾ ತುರ್ತು ಪರಿಸ್ಥಿತಿ ನಿಭಾಯಿಸುವ ತಂಡವನ್ನು ಮೊಬೈಲ್ ನೆಟ್‍ವರ್ಕ್ ಕಾರಣದಿಂದ ಸಂಪರ್ಕಿಸಲು ಸಾಧ್ಯವಾಗಿರಲಿಲ್ಲ. ಸ್ಥಳೀಯರೇ ಜೀವದ ಹಂಗು ತೊರೆದು, ಯಾವುದೇ ರಕ್ಷಣಾ ಸಾಮಗ್ರಿಗಳಿಲ್ಲದೆ ಪ್ರವಾಹದಲ್ಲಿ ಈಜಿ ದೇವಾಲಯದ ಅರ್ಚಕರನ್ನು ರಕ್ಷಿಸಿದ್ದರು. ಮನೆಗಳಿಗೆ ನೀರು ನುಗ್ಗಿ ರಸ್ತೆ ಪಕ್ಕ ಅಡುಗೆ ಮಾಡಬೇಕಾದ ಸ್ಥಿತಿ ಉಂಟಾಗಿತ್ತು. ದುರಂತವೆಂದರೆ ಅಂತಹ ಸ್ಥಿತಿಯ ಬಳಿಕವೂ ಈ ಗ್ರಾಮಗಳಲ್ಲಿ ಮೊಬೈಲ್ ನೆಟ್‍ವರ್ಕ್ ಬಗ್ಗೆ ಅಧಿಕಾರಿಗಳು ತಲೆಕೆಡಿಸಿಕೊಂಡಿಲ್ಲ.
ಟೆಲಿಕಾಂ ಅತಂತ್ರ !
1995ರ ವೇಳೆ ಗ್ರಾಮದ ಜನತೆ ಸ್ಥಿರ ದೂರವಾಣಿಗಾಗಿ ಪೋನ್ ಕಂಬಗಳನ್ನು ತಾವೇ ಹೊತ್ತು ನಿಲ್ಲಿಸಿ ಇಲಾಖೆಗೆ ಹೆಗಲು ಕೊಟ್ಟು ಸ್ಥಿರ ದೂರವಾಣಿ ಸಂಪರ್ಕ ಪಡೆದುಕೊಂಡಿದ್ದರು. ಆ ಬಳಿಕ ಭೂಗತ ಕೇಬಲ್ ಅಳವಡಿಕೆಯಿಂದಾಗಿ ಗ್ರಾಮದ ಬಹುತೇಕ ಮನೆಗಳು ಪೋನ್ ಸಂಪರ್ಕ ಪಡೆದಿದ್ದರು. ದುರಂತವೆಂದರೆ, 1995 ರ ಪರಿಸ್ಥಿತಿಯೂ ಈಗಿಲ್ಲ! ಸ್ಥಿರ ದೂರವಾಣಿಗಳ ಕೇಬಲ್ ಹಾಳಾಗಿ, ಬಿ ಎಸ್ ಎನ್ ಎಲ್ ನ ನಿರ್ಲಕ್ಷದ ನಡುವೆ ಈಗ ಗ್ರಾಮದ ಸ್ಥಿರ ದೂರವಾಣಿಗಳೆಲ್ಲ ಹಾಳಾಗಿವೆ. ಇಂದು ಮನೆಯ ಎಲ್ಲ ಸದಸ್ಯರ ಕೈಯಲ್ಲಿ ಮೊಬೈಲ್ ಪೋನ್ ಇದ್ದರೂ ನೆಟ್‍ವರ್ಕ್ ಮಾತ್ರ ಇಲ್ಲ!
ಇದನ್ನೂ ಓದಿ:ದಾಖಲೆಗಳು ಮನೆ ಬಾಗಿಲಿಗೆ ತಲುಪಿಸಿ ಕಂದಾಯ ಕ್ರಾಂತಿ ಮಾಡಿದ್ದೇವೆ: ಸಿಎಂ
2009 ರಲ್ಲಿ ಗ್ರಾಮದ ಜನತೆ ನೇರ್ಲವಳ್ಳಿ, ಸರಕುಳಿ, ಮತ್ತಿಗಾರ ಜನತೆಗೆ ಪ್ರಯೋಜನ ಆಗುವ ಮಾದರಿಯಲ್ಲಿ ಮೊಬೈಲ್ ಟವರ್ ಸ್ಥಾಪಿಸಿಕೊಡುವಂತೆ ಟೆಲಿಕಾಂ ಕಂಪನಿಗಳಿಗೆ ಅರ್ಜಿ ಸಲ್ಲಿಸಿದ್ದರು. ಆ ಬಳಿಕ ಗ್ರಾಮದಲ್ಲಿಯೇ ಬಿಎಸ್ ಎನ್ ಎಲ್ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮೊಬೈಲ್ ಟವರ್ ಗೆ ಆಗ್ರಹಿಸಿದ್ದರು. ನೆಗ್ಗು ಗ್ರಾಮ ಪಂಚಾಯಿತಿಯಲ್ಲಿ ಠರಾವು ಮಾಡಿ, ಗ್ರಾಮ ಪಂಚಾಯಿತಿಯಿಂದಲೇ ಬಿಎಸ್ ಎನ್ ಎಲ್ ಗೆ ಮನವಿ ಕಳಿಸಿಕೊಟ್ಟಿದ್ದರು. ವರ್ಷಗಳು ಎರಡು ಕಳೆದು ಹೋಗಿವೆ. ಗಾಢ ನಿದ್ದೆಯಲ್ಲಿರುವ ಬಿ ಎಸ್ ಎನ್ ಎಲ್ ಗೆ ಗ್ರಾಮದ ಜನತೆಯ ಅರ್ಜಿ ತಲೆದಿಂಬಾಗಿ ಬಳಕೆಯಾಗುತ್ತಿದೆ.
ಇತ್ತೀಚಿನ ದಿನಗಳಲ್ಲಿ ಈ ಗ್ರಾಮದ ಕೆಲ ಉಳ್ಳವರ ಮನೆಗಳಿಗೆ ಎಫ್ ಟಿ ಟಿ ಎಚ್ ಸಂಪರ್ಕ ಬಂದಿದೆಯಾದರೂ ಬಡವರು, ಮಧ್ಯಮ ವರ್ಗದವರಿಗೆ ಈ ಸೌಲಭ್ಯ ಹೊಂದಲು ಕಷ್ಟವಾಗುತ್ತಿದೆ. ಮಹಾನಗರದಲ್ಲಿ ಉದ್ಯೋಗದಲ್ಲಿ ಇರುವ ಕೆಲವರು ಮನೆಗೆ ಎಫ್ ಟಿಟಿಎಚ್ ಒದಗಿಸಿದ್ದರೂ, ಬಟನ್ ಪೋನ್ ಬಳಸುವ ವಯಸ್ಸಾದ ತಂದೆ ತಾಯಿಗಳಿಗೆ ಪ್ರಯೋಜನಕ್ಕೆ ಬರದಂತಾಗಿದೆ.
ನೆಟ್‍ವರ್ಕ್ ಶಾಡೊ ಇರುವ ಪ್ರದೇಶ ಗುರುತಿಸಿ ಮೊಬೈಲ್ ರಿಪೀಟರ್ ಅಳವಡಿಸಿ ಎಂದು ಸೂಚಿಸಿರುವುದು ಇಲ್ಲಿಯ ಜನತೆಗೆ ಸಂತಸ ಮೂಡಿಸಿದೆ. ಇನ್ನಾದರೂ ನಮ್ಮ ಗ್ರಾಮದ ನೆಟ್‍ವರ್ಕ್ ಸಮಸ್ಯೆ ಟೆಲಿಕಾಂ ಕಂಪನಿಗಳ ಗಮನಕ್ಕೆ ಬಂದು ಟವರ್ ಸ್ಥಾಪಿಸಬಹುದೇ ಎಂದು ಜನತೆ ಕಾದಿದ್ದಾರೆ.
ಸಂಪೂರ್ಣ ನೇರ್ಲವಳ್ಳಿ, ಸರಕುಳಿ ಗ್ರಾಮ ನೆಟ್‍ವರ್ಕ್ ಶಾಡೋ ಪ್ರದೇಶವಾಗಿದ್ದು, ಇಲ್ಲಿ ಮೊಬೈಲ್ ಟಾವರ್ ಸ್ಥಾಪಿಸಲು ಟೆಲಿಕಾಂ ಕಂಪನಿಗಳಿಗೆ ಅನೇಕ ಬಾರಿ ಮನವಿ ಮಾಡಿದ್ದೇವೆ. ಜಿಲ್ಲಾಧಿಕಾರಿಗಳು ಈ ವಿಷಯ ಪ್ರಸ್ತಾಪಿಸಿರುವುದು ಉತ್ತಮ ಬೆಳವಣಿಗೆ ಆಗಿದ್ದು, ಗ್ರಾಮ ಪಂಚಾಯಿತಿಯಿಂದ ಜಿಲ್ಲಾಧಿಕಾರಿಗಳಿಗೆ ಸಮಸ್ಯೆ ಕುರಿತ ಮಾಹಿತಿ ಕಳಿಸಿಕೊಡಲು ನಿರ್ಧರಿಸಿದ್ದೇವೆ. – ಚಂದ್ರಕಾಂತ ಹೆಗಡೆ ನೇರ್ಲದ್ದ ನೇರ್ಲವಳ್ಳಿ ವಾರ್ಡ್, ನೆಗ್ಗು ಪಂಚಾಯಿತಿ ಸದಸ್ಯ