Advertisement

ಶಿರಸಿ ಮಾರಿಕಾಂಬಾ ಜಾತ್ರೆ: ಎರಡು ವರ್ಷಕ್ಕೊಮ್ಮೆ ಸಿಗುವ ರಾಣಿಗೋಲಿನ ಆಶೀರ್ವಾದ!

10:59 AM Mar 22, 2024 | Team Udayavani |

ಉದಯವಾಣಿ ಸಮಾಚಾರ
ಶಿರಸಿ: ಪ್ರತಿ ಎರಡು ವರ್ಷಕ್ಕೊಮ್ಮೆ ನಡೆಯುವ ದಕ್ಷಿಣ ಭಾರತದ ಅತ್ಯಂತ ಪ್ರಸಿದ್ಧ ಜಾತ್ರೆಗಳಲ್ಲಿ ಒಂದಾದ ಶಿರಸಿ ಮಾರಿಕಾಂಬಾ ದೇವಿ ಜಾತ್ರಾ ಮಹೋತ್ಸವ ಆರಂಭವಾಗಿದ್ದು, ಗುರುವಾರ ಬೆಳಗ್ಗೆಯಿಂದ ಭಕ್ತರು ದೇವಿ ದರ್ಶನ ಪಡೆದು ವಿವಿಧ ಸೇವೆ ಸಲ್ಲಿಸುತ್ತಿದ್ದಾರೆ.

Advertisement

ದೇವಿಗೆ ಸೇವೆ ಹರಕೆ, ಒಪ್ಪಿಸಿ ಬಂದವರಲ್ಲಿ ಅನೇಕರು ಇಲ್ಲಿ ರಾಣಿಗೋಲಿನ ಆಶೀರ್ವಾದ ಕೂಡ ಪಡೆಯುತ್ತಾರೆ. ಇದು ಜಾತ್ರೆಯ ವಿಶೇಷಗಳಲ್ಲಿ ಒಂದು. ವಿದ್ಯಾಭ್ಯಾಸ, ನೆಮ್ಮದಿ, ಮಕ್ಕಳಾಗದವರು, ಮನೆಕಟ್ಟುವ ಬಯಕೆ, ಕೊಟ್ಟಿಗೆಯಲ್ಲಿನ ಸಮಸ್ಯೆಗಳು, ವರ್ತಕರ ಸಮಸ್ಯೆಗಳು, ಉದ್ಯೋಗ, ಆರೋಗ್ಯ ಸೇರಿದಂತೆ ಅನೇಕ ಸಮಸ್ಯೆಗಳನ್ನು ಪರಿಹರಿಸಿಕೊಡುವ ತಾಯಿಯ ಆಶೀರ್ವಾದ ಕೋಲು ಎಂದೇ ಭಾವಿಸಲಾಗಿದೆ. ದೇವಿಯ ನೇರ ಆಶೀರ್ವಾದಕ್ಕೆ ರಾಣಿಗೋಲು ನೆರವಾಗುತ್ತದೆ ಎಂಬುದು ನಂಬಿಕೆ.

ಏನಿದು ರಾಣಿಗೋಲು?: ಈ ರಾಣಿಗೋಲಿನ ಹಿಂದೆ ಒಂದು ಕಥೆ ಇದೆ. ಒಮ್ಮೆ ಬ್ರಹ್ಮ ರಾಕ್ಷಸನಿಗೂ ದೇವಿಗೂ ಘನಃಘೋರ ಯುದ್ಧ ನಡೆಯಿತು. ತಾಯಿ ರಾಕ್ಷಸನ ಜೊತೆ ಯುದ್ಧ ಮಾಡುವಾಗ ಅವಳ ಬೆನ್ನು ಸೋಲು ಬಂದಂತೆ. ಆಗ ಆಕೆಯ ನೆಚ್ಚಿನ ಭಕ್ತ ಆಸಾದಿ ಬಸವನ ಕನಸಿನಲ್ಲಿ ಬಂದು ನೆರವಾಗುವಂತೆ ಸೂಚಿಸಿದಳಂತೆ.

ದೇವಿಯ ಸೂಚನೆ ಗಮನಿಸಿ ಯುದ್ಧ ನಡೆಯುವ ಸ್ಥಳಕ್ಕೆ ಬಂದಾಗ ಬಸವನಿಗೆ ತಾಯಿಗೆ ನೆರವಾಗಲು ಅಲ್ಲೇ ಇದ್ದ ಒಂದು ಬಿದಿರಿನ ಕೋಲು ಕಂಡಿತು. ಅದನ್ನೇ ಆಕೆಯ ಬೆನ್ನಿಗೆ ಆನಿಕೆಯಾಗಿ ನೀಡಿದನಂತೆ. ಯುದ್ಧದಲ್ಲಿ ಆ ಬಿದಿರಿನ ಕೋಲು ಬೆಂಡಾಯಿತು. ರಾಕ್ಷಸನ ಸಂಹಾರವೂ ಆಯಿತು. ಬಸವನ ಭಕ್ತಿಯನ್ನು ಕಂಡು ಈ ಕೋಲನ್ನು ರಾಣಿಗೋಲು ಎಂತಲೂ, ಅದನ್ನು ಹಿಡಿದು ಯಾರಿಗೇ ಹರಸಿದರೂ ತನ್ನ ನೇರ ಆಶೀರ್ವಾದ ಸಿಗಲಿದೆ ಎಂದೂ ದೇವಿ ಹೇಳಿ ಬೆಂಡಾದ ಕೋಲು ನೀಡಿದಳಂತೆ. ಸುಮಾರು ನಾಲ್ಕು ನೂರು ವರ್ಷಗಳಿಂದಲೂ ಈ ಕೋಲು ದೇವಿಯ ಆಶೀರ್ವಾದದ ಭಾಗವಾಗಿ ಬಳಸಲಾಗುತ್ತಿದೆ.

ಎರಡು ವರ್ಷಕ್ಕೊಮ್ಮೆ ಆಶೀರ್ವಾದ: ರಾಣಿಗೋಲಿನ ಆಶೀರ್ವಾದ ಭಕ್ತರಿಗೆ ಎರಡು ವರ್ಷಕ್ಕೊಮ್ಮೆ ಸಿಗಲಿದೆ. ದೇವಿ ಜಾತ್ರೆ ಪ್ರತಿ ಬದಲಿ ವರ್ಷಕ್ಕೆ ನಡೆಯುತ್ತದೆ. ಜಾತ್ರೆಯಲ್ಲಿ ದೇವಿಗೆ ಭಕ್ತರ ಸೇವೆ ಆರಂಭವಾದ ಕ್ಷಣದಿಂದ ಸೇವಾ ಮುಕ್ತಾಯ ಆಗುವ ತನಕ ರಾಣಿಗೋಲಿನ ಆಶೀರ್ವಾದ ಕೂಡ ಭಕ್ತರಿಗೆ ಸಿಗಲಿದೆ. ಆನವಟ್ಟಿಯ ಹುಚ್ಚಮ್ಮ, ಗಣೇಶ ನೆಗವಾಡಿ ಅವರನ್ನು ಒಳಗೊಂಡ 30 ಕ್ಕೂ ಅಧಿಕ ಜನ ಆನವಟ್ಟಿಯಿಂದ ಆಗಮಿಸಿ ರಾಣಿಗೋಲಿನ ಸೇವೆ ನೀಡುತ್ತಾರೆ. ಜಾತ್ರೆ ವಿಧಿ ವಿಧಾನ ಮುಗಿದ ಬಳಿಕ ಈ ಕೋಲು ದೇವಸ್ಥಾನದಲ್ಲೇ ಇರಲಿದೆ. ಬಿದಿರಿನ ಬೆತ್ತದ ಕೋಲಿಗೆ ಬೆಳ್ಳಿಯ ಹೊದಿಕೆ ಕೂಡ ಇರಲಿದೆ. ಮೂರನೇ ಹೊರಬೀಡಿನಿಂದ ಈ ರಾಣಿಗೋಲನ್ನು ಈ ಕುಟುಂಬಕ್ಕೆ ಹಸ್ತಾಂತರಿಸಲಾಗುತ್ತದೆ.

Advertisement

ಈ ರಾಣಿಗೋಲಿನ ಆಶೀರ್ವಾದಿಂದ ಭಕ್ತರ ಹರಕೆ ಈಡೇರಿದೆ. ಮಕ್ಕಳಾಗದವರಿಗೆ ಮಕ್ಕಳಾಗಿವೆ. ಬೇಡಿಕೆ ಏನೇ ಇದ್ದರೂ ತಾಯಿ ಈಡೇರಿಸುತ್ತಾಳೆ. ನಾವು ಕೂಡ ಭಕ್ತರ ಬೇಡಿಕೆಯನ್ನು, ಸುಖ ಶಾಂತಿ ನೆಮ್ಮದಿಯನ್ನು ಬೇಡಿಕೊಳ್ಳುತ್ತೇವೆ. ಭಕ್ತರ ತಲೆಗೆ, ಭುಜಗಳಿಗೆ ಈ ರಾಣಿಗೋಲಿನ ಆಶೀರ್ವಾದ ಮಾಡಿಸುತ್ತೇವೆ. ಭಕ್ತರು ಕಾಣಿಕೆ, ಕೋಳಿ ನೀಡುತ್ತಾರೆ ಎನ್ನುತ್ತಾರೆ ಗಣೇಶ.

ರಂಗ ಮಂಟಪ ವಿಶೇಷ: ಬಿಡಕಿಬಯಲಿನ ಜಾತ್ರಾ ಗದ್ದುಗೆಯ ಮುಂಭಾಗದಲ್ಲಿ ಹಾಕಲಾದ ರಂಗ ಮಂಟಪದಲ್ಲಿ ರಾಣಿಗೋಲಿನ ಆಶೀರ್ವಾದ ಮಾಡಲಾಗುತ್ತದೆ. ದೇವಿ ದರ್ಶನ ಪಡೆದು, ಉಡಿ ಸೇವೆ ಸಲ್ಲಿಸಿ, ಇಲ್ಲಿಗೆ ಬಂದು ಆಶೀರ್ವಾದ ಪಡೆಯುವ ಭಕ್ತರನೇಕರಿದ್ದಾರೆ. ಅನೇಕರಿಗೆ ಇದನ್ನು ಯಾಕೆ ಮಾಡುತ್ತಾರೆ ಎಂಬ ವಿವರಗಳೂ ಗೊತ್ತಿಲ್ಲ. ರಂಗ ಮಂಟಪದಲ್ಲಿ ಅಕ್ಕಿಯಿಂದ ಕೋಣನ ಶಿರ, ಬಾಲ, ರಥದ ಚಿತ್ರ, ತೆಂಗಿನ ಕಾಯಿ, ವಸ್ತ್ರ ಬಳಸಿ ತಾಯಿ ಎಂದು ಆರಾ ಧಿಸಲಾಗುತ್ತದೆ. ಕೋಣನ ಶಿರ ಭಾಗದಲ್ಲಿ ದೀಪವನ್ನೂ, ಉಳಿದೆಡೆ ಇಟ್ಟ ಗಡಿಗೆಗಳಿಗೆ ಪರಸ್ಪರ ದಾರದ ಬಂಧವನ್ನೂ ಮಾಡಲಾಗಿರುತ್ತದೆ. ನಿತ್ಯ ಹದಿನೈದು ಇಪ್ಪತ್ತು ಸಾವಿರ ಭಕ್ತರು ರಾಣಿಗೋಲಿನ ಆಶೀರ್ವಾದ ಪಡೆಯುತ್ತಾರೆ.

ರಾಣಿಗೋಲಿನ ಆಶೀರ್ವಾದ ಪಡೆದ ಅನೇಕರು ಸುಖ, ಶಾಂತಿ, ನೆಮ್ಮದಿ ಪಡೆದಿದ್ದಾರೆ. ತಾಯಿಯ ನೇರ ಆಶೀರ್ವಾದ ರಾಣಿಗೋಲಿನಿಂದ ಆಗುತ್ತದೆ.
ನಾಗೇಶ ನೆಗವಾಡಿ, ಹುಚ್ಚಮ್ಮ ಆನವಟ್ಟಿ
ಆಸಾದಿ, ಪ್ರಮುಖರು

ರಾಣಿಗೋಲಿನ ಮೂಲಕ ತಾಯಿಯ ನೇರಾಶೀರ್ವಾದ ಪಡೆಯುವ ಪುಣ್ಯ ಕ್ಷಣ ಜಾತ್ರೆಯಲ್ಲಿ ಸಿಗಲಿದೆ. ಇದೊಂದು ಜಾನಪದದ
ಗಟ್ಟಿ ನಂಬಿಕೆಯ ವಿನ್ಯಾಸವಾದರೂ ಮನಸ್ಸಿನಲ್ಲಿ ಪುಳಕದ ಭಾವ ವ್ಯಕ್ತವಾಗುತ್ತದೆ.
ಗಜಾನನ ಎಸ್‌. ದಾವಣಗೆರೆ ಭಕ್ತ

*ರಾಘವೇಂದ್ರ ಬೆಟ್ಟಕೊಪ್ಪ

Advertisement

Udayavani is now on Telegram. Click here to join our channel and stay updated with the latest news.

Next