ಶಿರಸಿ: ಅಜಿತ ಮನೋಚೇತನಾ ಸಂಸ್ಥೆಯ ಪದಾಧಿಕಾರಿಗಳು, ಶಿಕ್ಷಕರು ಮೇ 25 ರಿಂದ ವಿಕಾಸ ವಿಶೇಷ ಶಾಲೆಗೆ ಬುದ್ಧಿಮಾಂದ್ಯ ಮಕ್ಕಳನ್ನು ಸೇರಿಸಿ ಎಂಬ ಸಂಪರ್ಕ ಅಭಿಯಾನ ಆರಂಭಿಸಿದ್ದಾರೆ.ಬುದ್ಧಿಮಾಂದ್ಯ ಮಕ್ಕಳ ಮನೆಗಳಿಗೆ ಭೇಟಿ ನೀಡುತ್ತಿದ್ದಾರೆ. ಪಾಲಕರ ಮನ ಒಲಿಸಿ ವಿಶೇಷ ಶಾಲೆಗೆ ಮಕ್ಕಳನ್ನು ಕರೆತನ್ನಿ ಎಂದು ಮನವಿ ಮಾಡುತ್ತಿದ್ದಾರೆ.
ಶಿರಸಿ ನಗರಸಭೆ ಹಾಗೂ ಪಂಚಾಯತಗಳ ಅಂಗವಿಕಲ ಸೇವಾ ಕಾರ್ಯಕರ್ತರ ಜೊತೆ ಅಜಿತ ಮನೋಚೇತನಾದಲ್ಲಿ
ಸಮಾಲೋಚನೆ ನಡೆಸಿ ಇನ್ನಷ್ಟು ಜಾಗೃತಿ ಆರಂಭಿಸಿದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಂಯೋಜಕರಾದ
ಫರ್ಜಾನಾ ಮತ್ತು ಎಂ.ಆರ್.ಡಬ್ಲ್ಯೂ ಸ್ನೇಹಾ ತಾಲೂಕಿನಲ್ಲಿ148 ಬುದ್ಧಿಮಾಂದ್ಯ ಮಕ್ಕಳು ಇದ್ದಾರೆ. ಅವರ ಪೈಕಿ 44 ಮಕ್ಕಳು
ಅಜಿತ ಮನೋಚೇತನಾಕ್ಕೆ ಸೇರ್ಪಡೆ ಆಗಿದ್ದಾರೆ ಎಂಬ ಮಾಹಿತಿ ನೀಡಿದರು. ಇನ್ನಷ್ಟು ಮಕ್ಕಳನ್ನು ಸಂಪರ್ಕಿಸಿ ಶಾಲೆಗೆ ಸೇರಿಸುವ
ಜವಾಬ್ದಾರಿ ನಮ್ಮ ಮೇಲೆ ಇದೆ ಎಂದರು.
ಶೈಕ್ಷಣಿಕ ಸಲಹೆಗಾರ ಡಾ| ಕೇಶವ ಎಚ್. ಕೊರ್ಸೆ ಅವರು ಪಾಲಕರಲ್ಲಿ ಜಾಗೃತಿ ಮಾಡಿಸಲು ಜೂನ್‌ನಲ್ಲಿ ಪಾಲಕರನ್ನು ವಿಕಾಸ ಶಾಲೆಗೆ ಭೇಟಿ ನೀಡುವಂತೆ ಕಾರ್ಯಕ್ರಮ ರೂಪಿಸಬೇಕು ಎಂದು ಸೂಚಿಸಿದರು. ಸಂಸ್ಥೆ ಅಧ್ಯಕ್ಷ ಸುಧೀರ ಭಟ್ ಬನವಾಸಿ ಸೇರಿದಂತೆ ಗ್ರಾಮೀಣ ಭಾಗದಲ್ಲೂ ಜಾಗೃತಿ ಸಮಾಲೋಚನೆ ನಡೆಸಲಿದ್ದೇವೆ ಎಂದು ಪ್ರಕಟಿಸಿದರು. ಕಾರ್ಯದರ್ಶಿ ಅನಂತ ಹೆಗಡೆ ಅಶೀಸರ ನಿರಾಮಯ ಮುಂತಾದ ಸೌಲಭ್ಯ ನೀಡಲು ಅಂಗವಿಕಲರ ಕಲ್ಯಾಣ ಇಲಾಖೆಯ ಸಹಕಾರ ಬೇಕು ಎಂದು ಮನವಿ ಮಾಡಿದರು.
ಜೂ.15 ರಂದು ಜಿಲ್ಲಾ ಮಟ್ಟದಲ್ಲಿ ವಿಶೇಷ ಶಿಕ್ಷಕರ ಕಾರ್ಯಗಾರ ಏರ್ಪಡಿಸುತ್ತೇವೆ ಎಂದರು. ಸಮಾಲೋಚನ ಸಭೆಯಲ್ಲಿ ಶಿರಸಿ ನಗರ ಮತ್ತು ಎಲ್ಲಾ ಗ್ರಾಪಂಗಳ ಅಂಗವಿಕಲ ಸೇವಾ ಕಾರ್ಯಕರ್ತರು, ಅಜಿತ ಮನೋಚೇತನಾ ಪದಾಧಿಕಾರಿಗಳು. ಶಿಕ್ಷಕರು ಪಾಲ್ಗೊಂಡಿದ್ದರು.