ಶಿರಸಿ: ಕೇಂದ್ರ ಸರಕಾರದ ಸಾಗರಮಾಲಾ ಯೋಜನೆ ಅಡಿಯಲ್ಲಿ ಉದ್ದೇಶಿತ ದಿವಗಿಯಿಂದ ಹಾವೇರಿ ಮಾರ್ಗವಾಗಿ ತೆರಳಿರುವ ರಾಷ್ಟ್ರೀಯ ಹೆದ್ದಾರಿಯನ್ನು ಶೀಘ್ರ ಆರಂಭಿಸಲಾಗುತ್ತದೆ. ಶಿರಸಿ ಬೈಪಾಸ್ ಮೂಲಕ ಒಯ್ಯಲು ತೀರ್ಮಾನಿಸಲಾಗಿದೆ ಎಂದು ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಪ್ರಕಟಿಸಿದರು.
ತಾಲೂಕಿನ ಇಸಳೂರಿನಲ್ಲಿ ಬುಧವಾರ ನಡೆದ ಭಾರತ ಸಂಚಾರ ನಿಗಮದಿಂದ ನಿರ್ಮಾಣ ಮಾಡಲಾದ ಟವರ್ ಉದ್ಘಾಟಿಸಿ ಅವರು ಮಾತನಾಡಿದರು. ಕೆಲ ಸೋಗಲಾಡಿ ಪರಿಸರವಾದಿಗಳು ಮರ ಲೆಕ್ಕಾಚಾರ ಮಾಡುತ್ತಿರುವುದರಿಂದ ಸಾಗರಮಾಲಾ ಯೋಜನೆ ಹಿಂದೆ ಉಳಿದಿದೆ. ಆದರೆ, ಈಗಾಗಲೇ ಟೆಂಡರ್ ಕೂಡ ಆಗಿದ್ದು, ದೇವಿಮನೆ ಘಟ್ಟದಲ್ಲಿ ಕೂಡ ಪರವಾನಗಿ ಸಿಗಲಿದೆ ಎಂದ ಅವರು, ಶೀಘ್ರ ಕಾಮಗಾರಿ ಕೂಡ ಆರಂಭಿಸಲಾಗುತ್ತದೆ. ಶಿರಸಿ ಪಟ್ಟಣದ ಬದಲಿಗೆ ಬದಲಿ ಮಾರ್ಗ ಕೂಡ ಯೋಜಿತವಾಗಿದೆ. ಕುಮಟಾ ರಸ್ತೆಯಲ್ಲಿ ಕಾಗೇರಿ ಮೂಲಕ ಅದು ಬನವಾಸಿ ಮಾರ್ಗಕ್ಕೆ ಬಂದು ದೊಡ್ನಳ್ಳಿ ನರೇಬೈಲ್ ಮೂಲಕ ಹುಬ್ಬಳ್ಳಿ ಹಾವೇರಿ ಮಾರ್ಗ ಜೋಡಣೆ ಆಗಲಿದೆ. 45 ಮೀಟರ್ ಅಗಲೀಕರಣ ಆಗಲಿದೆ. ಬೇಲೇಕೆರಿ ಬಂದರಿನಿಂದ ರಾಷ್ಟ್ರೀಯ ಹೆದ್ದಾರಿ ತನಕ ಹಾಗೂ ದಿವಗಿಯಿಂದ ಹಾವೇರಿಗೆ ಸಂಪರ್ಕ ಆಗಲಿದೆ ಎಂದರು.
ಶಿರಸಿ-ಹಾವೇರಿ ಹಾಗೂ ತಾಳಗುಪ್ಪದಿಂದ ಸಿದ್ದಾಪುರ ರೈಲ್ವೆ ಮಾರ್ಗಕ್ಕೆ ಟ್ರಾಫಿಕ್ ಸರ್ವೇ ಆಗಿದೆ. ಬಹುತೇಕ ಅನುಮತಿ ಸಿಗಲಿದೆ. ಜಿಲ್ಲೆಯಲ್ಲಿ ಹಾಯ್ದು ಹೋಗುವ ಎಲ್ಲ ಯೋಜಿತ ರೈಲ್ವೆಯ ಕಾಮಗಾರಿ ಕೂಡ ನಿಲ್ಲುವುದಿಲ್ಲ ಎದೂ ಸ್ಪಷ್ಟಪಡಿಸಿದರು.
ಜಿಲ್ಲೆಯಲ್ಲಿ 402 ಬಿಎಸ್‌ಎನ್‌ಎಲ್ ಟವರ್ ಇದೆ. ಇನ್ನೂ ಒಂಬತ್ತು ಟವರ್ ಉದ್ಘಾಟನೆಗೆ ಸಿದ್ಧವಿದೆ. ಇವುಗಳಲ್ಲಿ 160 ಟವರ್ ತ್ರಿಜಿ ಸೌಲಭ್ಯವಿದೆ. ಕರ್ನಾಟಕದ ಯಾವುದೇ ಜಿಲ್ಲೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಇಲ್ಲ. ಜಿಲ್ಲೆಯಲ್ಲಿ 85 ಕೋಟಿ ರೂ. ಆದಾಯ ಬರುತ್ತಿದೆ. ಆದರೂ ಜಿಲ್ಲೆಯ ಅನೇಕ ಕಡೆ ಸೌಲಭ್ಯ ತಲುಪಲು ಆಗಿಲ್ಲ. ಕಿತ್ತೂರು ಖಾನಾಪುರ ಸೇರಿ 49 ಟವರ್ ಇದೆ. ಇಲ್ಲಿ ಎರಡು ಮನೆಗೂ ಒಂದೊಂದು ಟವರ್ ಹಾಕಬೇಕು. ಸರಾಸರಿ ತಾಲೂಕಿಗೆ 65 ಟವರ್ ಬರುತ್ತದೆ. 180ಕ್ಕೂ ಅಧಿಕ ವೈಫೈ, 800ಕ್ಕೂ ಹೆಚ್ಚು ವೈಟೊಟಿಎಫ್, 8000ಕ್ಕೂ ಅಧಿಕ ಬ್ರಾಡ್ ಬ್ರಾಂಡ್ ಸೌಲಭ್ಯ ಕೊಡಲಾಗಿದೆ. ದೂರ ಸಂಪರ್ಕದಲ್ಲಿ ಹೊಸ ಕ್ರಾಂತಿ ನಡೆದಿದೆ. 310 ಕ್ಕೂ ಕಡೆ ಸಾಮಾನ್ಯ ಸೇವಾ ಕೇಂದ್ರ ಆರಂಭಿಸಲಾಗಿದೆ. ಗ್ರಾಮದಲ್ಲಿ ಪಿಯುಸಿ ಮೇಲ್ಪಟ್ಟವರಿಗೆ ಡಿಜಿಟಲ್ ಗ್ರಾಮಕ್ಕಾಗಿ 241 ಕೇಂದ್ರಗಳನ್ನು ಆರಂಭಿಸಿ ಇನ್ನು ಸಂಪೂರ್ಣ ಸೇವೆಗಳು ಗ್ರಾಮದಲ್ಲೇ ಸಿಗುವಂತೆ ಆಗಲಿದೆ ಎಂದರು.
ತಾಪಂ ಉಪಾಧ್ಯಕ್ಷ ಚಂದ್ರು ಎಸಳೆ, ಭಾರತ ಸಂಚಾರ ನಿಗಮದ ಅಧಿಕಾರಿ ಎ.ಬಿ. ಗೌಡ, ಜಿ.ಪಂ. ಸದಸ್ಯೆ ಉಷಾ ಹೆಗಡೆ, ಗ್ರಾ.ಪಂ. ಅಧ್ಯಕ್ಷೆ ನಿರ್ಮಲಾ ಗೌಡ, ಉಪಾಧ್ಯಕ್ಷೆ ಕವಿತಾ ಕೆರೆಕೊಪ್ಪ, ಇತರರು ಇದ್ದರು. ಗ್ರಾ.ಪಂ. ಸದಸ್ಯ ಶಿವರಾಮ ಭಟ್ಟ ಸ್ವಾಗತಿಸಿದರು.
ಉದ್ಯೋಗ ಮೇಳ
ಫೆ. 24, 25ಕ್ಕೆ ಉದ್ಯೋಗ ಮೇಳ ಶಿರಸಿಯಲ್ಲಿ ಆಯೋಜಿಸಲಾಗಿದೆ. ಯಾರು ಏಷ್ಟೇ ಓದಿದ್ದರೂ ತೊಂದರೆಯಿಲ್ಲ. ಏಳನೆ ತರಗತಿಯಿಂದ ಪಿಎಚ್‌ಡಿ ತನಕ ಓದಿದವರಿಗೂ ವಯಸ್ಸು ದಾಟಿದರೂ 10 ಸಾವಿರ ಉದ್ಯೋಗ ನೀಡುವ ಆಶಯದಲ್ಲಿ ಉದ್ಯೋಗ ಮೇಳ ಸಂಘಟಿಸಲಾಗಿದೆ.
•ಅನಂತಕುಮಾರ ಹೆಗಡೆ ಕೇಂದ್ರ ಸಚಿವ