ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಯಾವಾಗಲೂ ಸುತ್ತಾಡುವ ನಾವು, ನಾಲ್ಕು ಗೋಡೆಗಳ ಮಧ್ಯೆ ಕೂತಲ್ಲೇ ಕುಳಿತು, ಹೇಗೊ ಇದ್ದಷ್ಟು ದಿನ ಸಮಯ ತಳ್ಳಿ ಜೀವನ ಮುಗಿಸಿದರಾಯಿತು ಎಂಬ ಮನಸ್ಥಿತಿ ಹೊಂದಿದವರಲ್ಲ; ಪ್ರತಿದಿನವೂ ಥ್ರಿಲ್ ಇರಬೇಕು, ಸಿಕ್ಕ ಒಂದೇ ಜನುಮವನ್ನು ನೆಮ್ಮದಿಯಿಂದ ಕಳೆಯಬೇಕು ಎನ್ನುವ ಸಂಚಾರಿ ಮನಸ್ಕರು. ಅದರಂತೆ, ವಾರಾಂತ್ಯ ಬಂತೆಂದರೆ ನಿಸರ್ಗದೊಡಲಿನ ಸುಂದರ ತಾಣಗಳಿಗೆ ಭೇಟಿ ಕೊಡುವುದು ಮಾಮೂಲಿ.
ಅಂದಹಾಗೆ, ಎಂದಿನಂತೆ ಈ ಬಾರಿ ನಾವು ಯಲ್ಲಾಪುರದ ಬಳಿ ಇರುವ ಶಿರಳೆ ಫಾಲ್ಸ್ ಗೆ ಹೋಗುವ ತೀರ್ಮಾನ ಕೈಗೊಂಡೆವು. ಇದಕ್ಕಾಗಿ ಸಾಕಷ್ಟು ಯೋಜನೆಗಳನ್ನೂ ರೂಪಿಸಿದೆವು. ಜಲಪಾತಗಳ ಸೊಬಗನ್ನು ಕಣ್ತುಂಬಿಕೊಂಡು ಕನಸು ಕಾಣುತ್ತಾ ನಿದ್ದೆ ಆವರಿಸಿದ್ದೇ ತಿಳಿಯಲಿಲ್ಲ. ಪ್ರತಿ ರವಿವಾರವನ್ನು ಕುಂಭಕರ್ಣನ ವಾರವಾಗಿ ಆಚರಿಸುವ ಗೆಳೆಯನೊಬ್ಬನ ವ್ರತ ಭಂಗ ಮಾಡಿ, ರೆಡಿ ಡಿಸುವಷ್ಟರಾಗಲೇ ಗಂಟೆ 11 ತೋರಿಸುತ್ತಿತ್ತು. ಹೇಗೋ ಅವಸರವಸರವಾಗಿ ಒಂದು ಗಂಟೆಯ ಕಾಲಾವಧಿಯಲ್ಲಿ ಮುಂಡಗೋಡಿನಿಂದ ಯಲ್ಲಾಪೂರ ತಲುಪಿದೆವು. ಅಲ್ಲಿನ ಹೊಟೇಲ್‌ನಲ್ಲಿ ಭರ್ಜರಿ ಊಟ ಮುಗಿಸಿ ಹೊರಡುವಾಗ ಸುಮಾರು 1 ಗಂಟೆ ತೋರಿಸು ತ್ತಿತ್ತು.
ಫಾಲ್ಸ್‌ಗೆ ಹೋಗುವ ದಾರಿ ತಿಳಿಯದ ನಾವು ಹೊಟೇಲ್ ನಿಂದ ಹೊರಬಂದು ಸ್ಥಳೀಯರೊಬ್ಬರ ಬಳಿ ವಿಚಾರಿಸಿದೆವು. ಅವರ ತೋರಿದ ಬೆರಳ ನೇರಕ್ಕೆ ಬೈಕ್ ಓಡಿಸುತ್ತ ಮುಕ್ಕಾಲು ಗಂಟೆಯಲ್ಲಿ ಶಿರಳೆ ಫಾಲ್ಸ್‌ನ ಟೋಲ್ ಗೇಟ್ ಬಳಿ ನಿಂತೆವು. ಅಲ್ಲಿಯ ರಕ್ಷಣಾ ಸಿಬಂದಿ ಜತೆಗೆ ಮಾತುಕತೆ ನಡೆಸಿ, ಮುನ್ನೆಚ್ಚರಿಕಾ ಕ್ರಮವಾಗಿ ಜಲಪಾತದ ಆಳ, ಅಗಲ, ಅಪಾಯಕಾರಿ ಪ್ರದೇಶದ ಬಗ್ಗೆ ಮಾಹಿತಿ ಕಲೆ ಹಾಕಿದೆವು. ಮೊದಲೇ ಆತುರದಲ್ಲಿದ್ದ ಮನಕ್ಕೆ ಮತ್ತೆ ಕಾಯಿಸಲಾರದೆ, ಅಲ್ಲಿಂದ ಕಾಲ್ಕಿತ್ತು, ಕಾಡಿನ ಮಧ್ಯ ನಿಸರ್ಗದಚ್ಚರಿಗೆ ಬೆರಗಾಗುತ್ತ ಸಾಗಿದೆವು. ನಾಲ್ಕು ಮೈಲಿ ಸುದೀರ್ಘ ನಡಿಗೆಯಿಂದ ಕಾಲು ನೋವಿನ ಅನುಭವ ಆರಂಭವಾಗಿತ್ತು. ಅಷ್ಟರಲ್ಲೇ ಜಲಧಾರೆಯ ಸುನಾದ, ನೋವನ್ನು ಮರೆಸಿ ಜಲ ಪಾತದ ಬಳಿಗೆ ಓಡುವಂತೆ ಮಾಡಿತು.
ಅಬ್ಬಾ ! ಹಚ್ಚ ಹಸುರಿನಿಂದ ಆವೃತವಾಗಿರುವ ಬೆಟ್ಟ ಗುಡ್ಡಗಳ ಮಧ್ಯೆ, ಕಲ್ಲು ಕೋರೆಗಳನ್ನು ಕೊರೆದು, ಉಬ್ಬು ದಿಣ್ಣೆಗಳನ್ನು ಜಿಗಿದು, ಎತ್ತರದ ಪ್ರದೇಶದಿಂದ ಆಳದ ಕಂದಕಕ್ಕೆ ಧುಮುಕ್ಕುತ್ತಿರುವ, ಹಾಲಿನ ನೊರೆಯಂತೆ ಚಿಮ್ಮುತ್ತಿರುವ ಜಲಧಾರೆಯನ್ನು ಕಂಡಾಕ್ಷಣ ಮನ ದಲ್ಲಿ ಸಾರ್ಥಕ ಭಾವ ಮೂಡಿತ್ತು.
ಬಿಡುವಿರದ ಜೀವನದ ಎಲ್ಲ ಕಷ್ಟಗಳು, ಹತಾಶೆಗಳು ಒಮ್ಮೆಲೇ ಮಾಯವಾಗಿ ಹೊಸ ಉತ್ಸಾಹ, ಚೈತನ್ಯ ಮನದಲ್ಲಿ ಚಿಗುರೊಡೆದಂತಹ ಸಂತೃಪ್ತಿ ಉಂಟಾ ಗಿ ತ್ತು. ಮನಸೋ ಇಚ್ಛೆ ಕುಣಿದು ಕುಪ್ಪಳಿಸಿ, ಅತ್ತಿಂದಿತ್ತ ಓಲಾಡಿ, ಬಂಡೆಗಳು ತಾಕಿದಾಕ್ಷಣ ವೈಯಾರದಿಂದ ನಾಟ್ಯ ಮಯೂರಿಯಂತೆ ಓಡೋಡಿ ಬರುತ್ತಿರುವ ಜಲಧಾರೆಯನ್ನು ನೋಡಿದಾಗ ಮನಸ್ಸಿಗೆ ಆದ ಖುಷಿಯನ್ನು ಪದಗಳಲ್ಲಿ ವರ್ಣಿಸಲು ಅಸಾಧ್ಯವೆಂದೆನಿಸತೊಡಗಿತು.
ಸುತ್ತಲ ಜಗತ್ತನ್ನೇ ಮರೆತು ಮೈಮನ ತಣಿಯುವರೆಗೂ ನೀರಿನಲ್ಲಿ ಮಿಂದೆದ್ದು, ನೀರಿನ ಮಧ್ಯೆ, ಬಂಡೆ ಗಳ ಮೇಲೇರಿ ಫೋಟೋ ತೆಗೆ ಯುತ್ತ ಖುಷಿಪಡುತ್ತಿದ್ದ ನಮ್ಮನ್ನು ಕಂಡ ಸೂರ್ಯ, ಹೊಟ್ಟೆಕಿಚ್ಚಿನಿಂದ ತಾನೂ ಬೇಗನೆ ಕೆಲಸ ಮುಗಿಸಿ, ಇತ್ತ ಬರಬೇಕೆಂಬ ಆಸೆ ತೋರಿ, ಆಕಾಶದಂಚಿನಿಂದ ಕಣ್ಮರೆಯಾಗಲು ಸಿದ್ಧನಾಗುತ್ತಿದ್ದ. ಅಷ್ಟರಲ್ಲಿ ಹೊಟ್ಟೆಯೂ ಚುರುಗುಟ್ಟ ತೊಡಗಿತ್ತು. ಇನ್ನು ನಿಂತರೆ ಕತ್ತಲಾಗುತ್ತೆ ಎಂದು ತಿಳಿದು ಅಲ್ಲಿಂದ ಮರಳಿ ಮನೆಯತ್ತ ಹೊರಡಲು ಅನುವಾದೆವು. ದಾರಿ ಮಧ್ಯೆ ತಿಂಡಿ ತಿಂದು, ಕಾಫಿ ಕುಡಿದು, ಜಲಪಾತದ ಸೊಬಗನ್ನು ಮೆಲುಕು ಹಾಕುತ್ತ ಮನೆ ತಲುಪುವಾಗ ರಾತ್ರಿ ಸುಮಾರು 8 ಗಂಟೆ ತೋರಿಸುತ್ತಿತ್ತು.
ರೂಟ್ ಮ್ಯಾಪ್
. ಮಂಗಳೂರಿನಿಂದ 275 ಕಿ.ಮೀ. ದೂರ. -.ಶಿರಸಿಯಿಂದ 2.5 ಕಿ.ಮೀ. ದೂರ.
. ಸ್ವಂತ ವಾಹನ ಮಾಡಿ ಕೊಂಡು ಹೋದರೆ ಉತ್ತಮ.
.ಫಾಲ್ಸ್ ಗುಡ್ಡಗಳ ಮಧ್ಯೆ ಇರುವುದರಿಂದ ಹತ್ತಿರದಲ್ಲಿ ಊಟ, ವಸತಿ ಸೌಲಭ್ಯಗಳಿಲ್ಲ.
.ಜಾರುವ ಕಲ್ಲು ಬಂಡೆ, ಆಳವಾದ ಅಪಾಯಕಾರಿ ಪ್ರದೇಶಗಳಿರುವುದರಿಂದ ಈ ಬಗ್ಗೆ ತಿಳಿದು ಹೋಗುವುದು ಉತ್ತಮ.
ಕೆ.ಎಂ.