ಮಂಗಳೂರು: ಶಿರಾಡಿ ಘಾಟಿ ಎರಡನೇ ಹಂತದ ರಸ್ತೆ ಕಾಮಗಾರಿ ಸಂದರ್ಭದಲ್ಲಿ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಳಿಸುವ ಇಲ್ಲವೇ ಲಘು ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡುವ ಬಗ್ಗೆ ಪರಿಶೀಲಿಸಲು ದ.ಕ. ಜಿಲ್ಲಾಧಿಕಾರಿ ಮತ್ತು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಸಮೀಕ್ಷೆ ನಡೆಸಿ, ತೀರ್ಮಾನಿಸಲಾಗುವುದು ಎಂದು ಸಚಿವ ಬಿ. ರಮಾನಾಥ ರೈ ತಿಳಿಸಿದರು.
ದ.ಕ. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ರಸ್ತೆ ಗುಣಮಟ್ಟ ಹಾಗೂ ಸಾರ್ವಜನಿಕರ ಹಿತಾಸಕ್ತಿ ಗಮನಿಸಿ ಹೆಚ್ಚು ವಿಳಂಬಿಸದೆ ಕಾಮಗಾರಿ ಕೈಗೆತ್ತಿಕೊಳ್ಳಬೇಕು ಎಂದು ಅವರು ತಿಳಿಸಿದರು. ಸಚಿವ ಯು.ಟಿ. ಖಾದರ್ ಮಾತನಾಡಿ, ಶಿರಾಡಿ ಘಾಟಿ ರಸ್ತೆಯ ಕಾಮಗಾರಿ ಆರಂಭಿಸುವುದಕ್ಕೂ ಮೊದಲು ಚಾರ್ಮಾಡಿ ಘಾಟಿ ರಸ್ತೆಯ ಅಭಿವೃದ್ಧಿ ಹಾಗೂ ಅಗಲಗೊಳಿಸುವ ಕಾಮಗಾರಿ ನಡೆಸಬೇಕು ಎಂದರು.
ಶಾಸಕಿ ಶಕುಂತಳಾ ಶೆಟ್ಟಿ ಮಾತನಾಡಿ, ರಸ್ತೆಯನ್ನು ಏಕಕಾಲದಲ್ಲಿ ಸಂಪೂರ್ಣ ಮುಚ್ಚುವ ಅಗತ್ಯ ವಿಲ್ಲ. ಕೈಕಂಬ- ಕಡಬ – ಉಪ್ಪಿನಂಗಡಿ ಮಾರ್ಗ ದಲ್ಲಿ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡಬಹುದು. ಸಣ್ಣಪುಟ್ಟ ಮೋರಿ ಕಾಮಗಾರಿ ಸಂದರ್ಭ ವಾಹನ ಸಂಚಾರಕ್ಕೆ ಅವಕಾಶ ನೀಡಬಹುದು ಎಂದರು. ಜಿಲ್ಲಾಧಿಕಾರಿ ಶಶಿಕಾಂತ ಸೆಂಥಿಲ್ ಮಾತನಾಡಿ, ಕಾಮಗಾರಿ ತ್ವರಿತವಾಗಿ ಪೂರ್ಣಗೊಳ್ಳುವ ಸಲುವಾಗಿ ಲೋಕೋಪಯೋಗಿ ಇಲಾಖೆಗೆ ನಾನ್ ಸಿಆರ್‌ಝಡ್ ವ್ಯಾಪ್ತಿಯಲ್ಲಿ ಎರಡು ಮರಳು ಬ್ಲಾಕ್‌ಗಳನ್ನು ಹಂಚಿಕೆ ಮಾಡಲಾಗುವುದು ಎಂದರು.
ಲೋಕೋಪಯೋಗಿ ಇಲಾಖೆ ಎಂಜಿನಿಯರ್ (ರಾ.ಹೆ.) ರಮೇಶ್ ಮಾತನಾಡಿ, ದ್ವಿತೀಯ ಹಂತದಲ್ಲಿ 13 ಕಿ.ಮೀ. ಉದ್ದದ ರಸ್ತೆ ಕಾಮಗಾರಿ ಸುಮಾರು 61.57 ಕೋ.ರೂ. ಅಂದಾಜು ವೆಚ್ಚದಲ್ಲಿ ನಡೆಯಲಿದೆ. ಕಾಮಗಾರಿಗೆ 5 ತಿಂಗಳ ಸಮಯ ಬೇಕಿದ್ದು, ಈಗಾಗಲೇ ಟೆಂಡರ್ ಕಾರ್ಯಾದೇಶ ನೀಡಲಾಗಿದೆ. ಗುಣಮಟ್ಟದ ಕಾಮಗಾರಿಗೆ ವಿದೇಶದಿಂದ ಅತ್ಯಾಧುನಿಕ ಯಂತ್ರವನ್ನು ತರಿಸಲಾಗಿದೆ. ರಸ್ತೆ ಗುಣಮಟ್ಟ ಕಾಪಾಡಲು ಕಾಮಗಾರಿ ಸಂದರ್ಭದಲ್ಲಿ ವಾಹನ ಸಂಚಾರ ನಿರ್ಬಂಧ ಅಗತ್ಯ ಎಂದರು. ಗೇರು ಅಭಿವೃದ್ಧಿ ನಿಗಮ ಅಧ್ಯಕ್ಷ ಬಿ.ಎಚ್. ಖಾದರ್, ಜಿ.ಪಂ. ಸಿಇಒ ಡಾ| ಎಂ.ಆರ್. ರವಿ, ಅಪರ ಜಿಲ್ಲಾಧಿಕಾರಿ ಕುಮಾರ್ ಉಪಸ್ಥಿತರಿದ್ದರು.