Advertisement
ವಿಧಾನ ಪರಿಷತ್‌ನಲ್ಲಿ ಸದಸ್ಯ ಐವನ್ ಡಿ’ಸೋಜಾ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಶಿರಾಡಿ ಘಾಟಿಯ 2ನೇ ಹಂತದ ಕಾಮಗಾರಿ (90. 27 ಕೋ.ರೂ. ಅನುದಾನ) ನಿರ್ವಹಿಸಬೇಕಾದ ಗುತ್ತಿಗೆದಾರರು ಕಾಮಗಾರಿ ವ್ಯವಸ್ಥೆಯನ್ನು ಪೂರ್ಣವಾಗಿ ಸಮಯಕ್ಕೆ ಸರಿಯಾಗಿ ಸಿದ್ಧಗೊಳಿಸದ ಹಿನ್ನೆಲೆಯಲ್ಲಿ ಅವರ ಟೆಂಡರ್ ರದ್ದುಗೊಳಿಸಲಾಗಿದೆ. ಈ ಕಾಮಗಾರಿಗೆ ಮರು ಟೆಂಡರ್ ಕರೆಯಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.
ಶಿರಾಡಿ ಘಾಟಿಯಲ್ಲಿ ಸುರಂಗ ಮಾರ್ಗ ಕಾಮಗಾರಿಗಾಗಿ ಕೇಂದ್ರ ಭೂಸಾರಿಗೆ ಹಾಗೂ ಹೆದ್ದಾರಿ ಮಂತ್ರಾಲಯದವರು ಸಾಧ್ಯಾಸಾಧ್ಯತೆ ಹಾಗೂ ಡಿಪಿಆರ್ ಕಾರ್ಯಕ್ಕೆ 10.15 ಕೋ.ರೂ. ಅನುದಾನವನ್ನು ಮಂಜೂರು ಮಾಡಿದ್ದಾರೆ. ಮೆ| ಜಿಯೋ ಕನ್ಸಲ್ಟೆಂಟ್ ಗುರಗಾಂವ್ ಅವರನ್ನು ಈ ಕಾಮಗಾರಿಯ ಸಾಧ್ಯತಾ ವರದಿ ನೀಡಲು ನೇಮಿಸಲಾಗಿತ್ತು. ವರದಿಗಳನ್ನು ರಾಜ್ಯ/
ಕೇಂದ್ರ ಭೂಸಾರಿಗೆ ಮಂತ್ರಾಲಯಕ್ಕೆ ಸಲ್ಲಿಸಲಾಗಿದೆ. ಮತ್ತು ಜಿಯೋ ಟೆಕ್ನಿಕಲ್ (ಭೂ ವಿಜ್ಞಾನ) ಅಧ್ಯಯನವನ್ನು ತಯಾರಿಸಲಾಗುತ್ತಿದೆ. ಸುರಂಗ ಹಾಗೂ ಸೇತುವೆ ಬರುವ ಸ್ಥಳದಲ್ಲಿ ಭೂರಂಧ್ರಗಳನ್ನು ಕೊರೆದು 29 ಬೋರ್‌ವೆಲ್‌ಗಳನ್ನು ಅಧ್ಯಯನ ಮಾಡಲಾಗುತ್ತಿದೆ. ಈ ವರದಿಯನ್ನು ಜುಲೈ ವೇಳೆಗೆ ಸಲ್ಲಿಸಲಾಗುವುದೆಂದು ತಿಳಿಸಲಾಗಿದೆ. ಯೋಜನಾ ವರದಿ ಅನುಮೋದನೆಯಾದ ಅನಂತರ ಮುಂದಿನ ವರ್ಷದ ಜನವರಿ ವೇಳೆಗೆ ಟೆಂಡರ್ ಪ್ರಕ್ರಿಯೆ ಕೈಗೆತ್ತಿಕೊಳ್ಳಲಾಗುವುದು ಎಂದವರು ತಿಳಿಸಿದರು.