Advertisement
ಕೋವಿಡ್ ಲಾಕ್‌ಡೌನ್ ಹಿನ್ನೆಲೆಯಲ್ಲಿ ಕಳೆದ 2 ವರ್ಷಗಳಿಂದ ತಾಲೂಕಿನ ಪ್ರವಾಸೋದ್ಯಮಕ್ಕೆ ತೀವ್ರ ಪೆಟ್ಟು ಬಿದ್ದಿದ್ದು, ಇದೀಗ ಹಾಗೂ ಹೀಗೂ ಚೇತರಿಸಿ ಕೊಳ್ಳುವ ಸಮಯದಲ್ಲಿ ಸರ್ಕಾರದ ವೀಕೆಂಡ್ ಕರ್ಫ್ಯೂ ಆದೇಶ ಪ್ರವಾಸೋದ್ಯಮಕ್ಕೆ ಮತ್ತಷ್ಟು ಸಮಸ್ಯೆ ಉಂಟು ಮಾಡಿದೆ. ಇಂತಹ ವೇಳೆ ಚತುಷ್ಪಥ ರಸ್ತೆ ಕಾಮಗಾರಿ ಹೆಸರಿನಲ್ಲಿ ಶಿರಾಡಿ ಘಾಟ್ ರಸ್ತೆ ಬಂದ್ ಮಾಡಲು ಗುತ್ತಿಗೆ ದಾರರು ಯೋಚಿಸುತ್ತಿ ರುವುದು ಜನಸಾಮಾನ್ಯರನ್ನು ನಿದ್ದೆಗೆಡಿಸಿದೆ.
Related Articles
Advertisement
ರೆಸಾರ್ಟ್‌ಗಳಿಗೂ ತೊಂದರೆ: ತಾಲೂಕಿನಲ್ಲಿ ನೂರಾರು ರೆಸಾರ್ಟ್‌ಗಳು ಹಾಗೂ ಹೋಂಸ್ಟೆಗಳಿದ್ದು, ಇದರ ವ್ಯವಹಾರಗಳಿಗೆ ಸಹ ಶಿರಾಡಿ ಬಂದ್‌ನಿಂದ ತೀವ್ರ ಹೊಡೆತ ಬೀಳುವ ಸಾಧ್ಯತೆಯಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಲವಾರು ಪವಿತ್ರ ಧಾರ್ಮಿಕ ಸ್ಥಳಗಳಿದ್ದು ರಸ್ತೆ ಬಂದ್ ಆದಲ್ಲಿ ಧಾರ್ಮಿಕ ಸ್ಥಳಗಳಿಗೆ ಹೋಗುವವರಸಂಖ್ಯೆ ಕಡಿಮೆಯಾಗಿ ಎರಡು ಜಿಲ್ಲೆಗಳ ಆದಾಯಕ್ಕೆ ಧಕ್ಕೆಯಾಗುವ ಸಾಧ್ಯತೆಯಿದೆ.
ಆರೋಗ್ಯ ಕ್ಷೇತ್ರಕ್ಕೂ ಬಿಸಿ ತಟ್ಟುವ ಸಾಧ್ಯತೆ: ತಾಲೂಕಿನಲ್ಲಿ ಉತ್ತಮ ಆರೋಗ್ಯ ಸೌಲಭ್ಯವಿಲ್ಲದಕಾರಣ ತುರ್ತು ಸಂದರ್ಭಗಳಲ್ಲಿ ತಾಲೂಕಿನ ಜನ ದಕ್ಷಿಣ ಕನ್ನಡ ಜಿಲ್ಲೆಯ ಆಸ್ಪತ್ರೆಗಳಿಗೆ ಚಿಕಿತ್ಸೆಗಾಗಿ ಹೋಗುತ್ತಾರೆ. ಒಂದು ವೇಳೆ ಹೆದ್ದಾರಿ ಬಂದ್ ಆದಲ್ಲಿ ಹಲವು ರೋಗಿಗಳು ಜೀವ ಕಳೆದುಕೊಳ್ಳುವ ಸಾಧ್ಯತೆಯಿದೆ. ದಕ್ಷಿಣ ಕನ್ನಡ ಜಿಲ್ಲೆಯಕೆಲವು ಖಾಸಗಿ ಆಸ್ಪತ್ರೆಗಳಿಗೆ ಹೋಗುವ ರೋಗಿಗಳು ಬೆಂಗಳೂರು ಕಡೆಗೆ ಹೋಗಬೇಕಾಗುವುದರಿಂದ ದಕ್ಷಿಣ ಕನ್ನಡ ಜಿಲ್ಲೆಯ ಆಸ್ಪತ್ರೆಗಳ ಆದಾಯಕ್ಕೂ ಧಕ್ಕೆಯುಂಟಾಗಲಿದೆ.
ವ್ಯಾಪಾರ ವಹಿವಾಟಿಗೆ ತೊಡಕು :
ಸಕಲೇಶಪುರ ಪಟ್ಟಣ ವ್ಯಾಪ್ತಿಯ ಬೈಪಾಸ್ ರಸ್ತೆ ಕಾಮಗಾರಿಯ ವಿಳಂಬದಿಂದ ರಾಷ್ಟ್ರೀಯ ಹೆದ್ದಾರಿ ಹಾದು ಹೋಗುವ ಸಕಲೇಶಪುರ ಪಟ್ಟಣದಲ್ಲಿ ವಾಹನಗಳ ದಟ್ಟಣೆ ಹೆಚ್ಚಾಗಿ ಪಟ್ಟಣ ವ್ಯಾಪ್ತಿಯಲ್ಲಿ ವಾಹನಗಳ ನಿಲುಗಡೆ ನಿಷೇಧ ಮಾಡಿರುವುದರಿಂದ ಪಟ್ಟಣದ ವರ್ತಕರ ವ್ಯಾಪಾರ ವ್ಯವಹಾರಗಳು ಇಳಿಮುಖಗೊಂಡಿವೆ. ಈಗಾಗಲೆ ಹಾಸನ-ಸಕಲೇಶಪುರ-ಮಾರನಹಳ್ಳಿವರೆಗೆ ಸುಮಾರು 56 ಕಿ.ಮೀ ದೂರ ಚತುಷ್ಟಥ ರಸ್ತೆ ಕಾಮಗಾರಿ ನಡೆಸುತ್ತಿರುವ ರಾಜ್‌ಕಮಲ್ ಕಂಟ್ರಕ್ಷನ್ ಕಂಪನಿ ಶೇ.40 ಕಾಮಗಾರಿ ಪೂರ್ಣ ಮಾಡಿಲ್ಲ. ಇಂತಹ ಸಂಧರ್ಭದಲ್ಲಿ ಕಡಿದಾದ ತಿರುವುಗಳು ಇರುವ ಸಕಲೇಶಪುರ ಮಾರನಹಳ್ಳಿವರೆಗಿನ ರಸ್ತೆಯನ್ನು 6 ತಿಂಗಳಲ್ಲಿ ಎಂತಹ ತಂತ್ರಜ್ಞಾನವನ್ನು ತಂದರು ಸಹ ಈ ಗುತ್ತಿಗೆದಾರನಿಂದ ಕಾಮಗಾರಿ ಮುಗಿಸಲು ಸಾಧ್ಯವಿಲ್ಲ. ಇದನ್ನು ಮೀರಿ ರಸ್ತೆ ಬಂದ್ ಮಾಡಿದಲ್ಲಿ ರಾಜ್ಯದ ಆರ್ಥಿಕತೆಗೆ ತೀವ್ರ ಪೆಟ್ಟು ಬೀಳುವ ಸಾಧ್ಯತೆಯಿದೆ.
ಹೋರಾಟದ ಹಾದಿ ಅನಿವಾರ್ಯ : ಈಗಾಗಲೆ ಶಿರಾಡಿ ಉಳಿಸಿ ಹೋರಾಟ ಸಮಿತಿಯಿಂದ ವಿವಿಧ ಸಂಘಟನೆಗಳ ಸಭೆ ಮಾಡಿ ಮೊದಲ ಹಂತದಲ್ಲಿ ಪ್ರಧಾನಿ, ರಾಷ್ಟ್ರಪತಿ, ಮುಖ್ಯಮಂತ್ರಿ, ರಾಜ್ಯಪಾಲರು ಸೇರಿದಂತೆ ಸುಮಾರು 100ಕ್ಕೂ ಹೆಚ್ಚು ಗಣ್ಯರಿಗೆ ಶಿರಾಡಿ ಘಾಟ್ ರಸ್ತೆ ಬಂದ್ ಮಾಡುವುದನ್ನು ಕೈಬಿಡುವಂತೆ ಆಗ್ರಹಿಸಿ ಹಕ್ಕೋತ್ತಾಯ ಪತ್ರವನ್ನು ಬರೆಯಲಾಗಿದೆ. ಇದಕ್ಕೆ ಸ್ಪಂದಿಸದೆ ಬಂದ್ ಮಾಡಿದಲ್ಲಿ ಹೋರಾಟದ ಹಾದಿ ಹಿಡಿಯಬೇಕಾಗುತ್ತದೆ ಎಂದು ಶಿರಾಡಿ ಘಾಟ್ ಉಳಿಸಿ ಹೋರಾಟ ಸಮಿತಿ ಅಧ್ಯಕ್ಷ ಸಂಜೀತ್ ಶೆಟ್ಟಿ ತಿಳಿಸಿದ್ದಾರೆ.
ಹಾಸನದಿಂದ ಸಕಲೇಶಪುರದವರೆಗಿನ ಹೆದ್ದಾರಿ ಕಾಮಗಾರಿಯನ್ನು ಗುತ್ತಿಗೆದಾರರು ಮೊದಲು ಮುಗಿಸಲಿ, ಏಕಾಏಕಿ ಹೆದ್ದಾರಿ ಬಂದ್ ಮಾಡುವುದರಿಂದ ಆರ್ಥಿಕತೆಗೆ ತೀವ್ರ ಪೆಟ್ಟು ಬೀಳುತ್ತದೆ. ಯಾವುದೇ ಕಾರಣ ಕ್ಕೂ ಹೆದ್ದಾರಿ ಬಂದ್ ಮಾಡಲು ಅವಕಾಶ ಕೊಡುವುದಿಲ್ಲ. –ಎಚ್.ಕೆ ಕುಮಾರಸ್ವಾಮಿ, ಶಾಸಕರು
6 ತಿಂಗಳು ಹೆದ್ದಾರಿ ಬಂದ್ ಮಾಡುವುದು ಕಷ್ಟ, ಈ ಕುರಿತು ಮರುಪರಿಶೀಲನೆಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಪತ್ರ ಬರೆಯಲಾಗಿದೆ. –ಗಿರೀಶ್, ಹಾಸನ ಜಿಲ್ಲಾಧಿಕಾರಿ
– ಸುಧೀರ್ ಎಸ್.ಎಲ್