Advertisement
ಹೆಬ್ರಿ ನಕ್ಸಲ್ ನಿಗ್ರಹ ದಳದ ಇನ್ಸ್‌ಪೆಕ್ಟರ್ ತಿಮ್ಮಪ್ಪ ನಾಯ್ಕ ಹಾಗೂ ಕಿಗ್ಗ ನಕ್ಸಲ್ ನಿಗ್ರಹ ದಳದ ಸಬ್ ಇನ್ಸ್‌ಪೆಕ್ಟರ್ ಅಮರೇಶ್ ನೇತೃತ್ವದ ಒಟ್ಟು 24 ಸಿಬಂದಿಯನ್ನೊಳಗೊಂಡ ಎರಡು ಪ್ರತ್ಯೇಕ ಸಶಸ್ತ್ರ ತಂಡಗಳು ಮಧ್ಯಾಹ್ನದ ವೇಳೆಗೆ ಮಿತ್ತಮಜಲಿಗೆ ಆಗಮಿಸಿ, ಡಿವೈಎಸ್ಪಿ ಶ್ರೀನಿವಾಸ್ ಅವರಿಂದ ಮಾಹಿತಿ ಪಡೆದುಕೊಂಡಿವೆ. ಬಳಿಕ ಇನ್ಸ್‌ಪೆಕ್ಟರ್ ತಿಮ್ಮಪ್ಪ ನಾಯ್ಕ ನೇತೃತ್ವದ ತಂಡ ಶಿಶಿಲ ಅರಣ್ಯ ಪ್ರದೇಶ ದತ್ತ ನುಗ್ಗಿದರೆ, ಇನ್ಸ್‌ಪೆಕ್ಟರ್ ಅಮರೇಶ್ ನೇತೃತ್ವದ ತಂಡ ಕಬ್ಬಿನಾಲೆ ಅರಣ್ಯ ಪ್ರದೇಶದಲ್ಲಿ ನಕ್ಸಲರ ಬೇಟೆ ಪ್ರಾರಂಭಿಸಿದೆ.
ನಕ್ಸಲರು ಭೇಟಿ ನೀಡಿರುವ ಮನೆಗಳಿಗೆ ಡಿವೈಎಸ್ಪಿ ಶ್ರೀನಿವಾಸ್, ಗ್ರಾಮಾಂತರ ಪೊಲೀಸ್ ಇನ್ಸ್‌ಪೆಕ್ಟರ್ ಗೋಪಾಲ ನಾಯ್ಕ, ಉಪ್ಪಿನಂಗಡಿ ಸಬ್ ಇನ್ಸ್‌ಪೆಕ್ಟರ್ ನಂದಕುಮಾರ್ ಭೇಟಿ ನೀಡಿದ್ದು, ಮೂರು ಮಂದಿಯಿಂದ ಪ್ರತ್ಯೇಕ ಹೇಳಿಕೆ ಪಡೆದುಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Related Articles
ನಕ್ಸಲರು ಪ್ರಥಮವಾಗಿ ಭೇಟಿ ಆಗಿದ್ದು ನನ್ನನ್ನು. ನನಗೆ ಹೆದರಿಕೆ ಆಯಿತು, ನಾನು ಓಡಿ ಹೋದೆ ಎಂದು ಎಂ.ಕೆ. ಮೋಹನ್ ಅವರ ಪುತ್ರ ನವನೀತ್ ತಿಳಿಸಿದ್ದಾರೆ. ಮನೆ ಯಲ್ಲಿ ನಾನೊಬ್ಬನೇ ಇದ್ದೆ. ನಾಯಿ ಬೊಗಳುತ್ತಿದ್ದುದನ್ನು ನೋಡಿ ಮನೆಯಿಂದ ಹೊರಗೆ ಬರುತ್ತಿದ್ದಂತೆ ಕೋವಿ ಹಿಡಿದಿದ್ದ 3 ಮಂದಿ ನೇರವಾಗಿ ಅಂಗಳಕ್ಕೆ ಬಂದು “ನಾವು ನಕ್ಸಲರು’ ಎಂದರು. ಗಾಬರಿಗೊಂಡ ನಾನು ನೇರವಾಗಿ ಚಿಕ್ಕಪ್ಪ ಸುರೇಶ್ ಅವರ ಮನೆಗೆ ಓಡಿ ಹೋದೆ ಎಂದು ನವನೀತ್ ತಿಳಿಸಿದ್ದಾರೆ.
Advertisement
ಶ್ರೀಮಂತರ ಮನೆ ವಿಚಾರಿಸಿದರು: ಲೀಲಾಬಳಿಕ ನಕ್ಸಲರು ಪಕ್ಕದ ಲೀಲಾ ಅವರ ಮನೆಗೆ ತೆರಳಿದ್ದಾರೆ. “ನಾವು ನಕ್ಸಲರು, ಹೆದರಬೇಡಿ, ನಾವು ನಿಮಗೆ ತೊಂದರೆ ಮಾಡುವುದಿಲ್ಲ, ಇಲ್ಲಿ ಶ್ರೀಮಂತರ ಮನೆ ಇದೆಯಾ?’ ಎಂದು ಮಾತು ಆರಂಭಿಸಿದ್ದಾರೆ; ನಮ್ಮನ್ನು ಹೆದರಿಸಿಲ್ಲ ಎಂದು ನಕ್ಸಲ್ ತಂಡ ಭೇಟಿ ನೀಡಿದ ಮನೆಯ ಲೀಲಾ ಪ್ರತಿಕ್ರಿಯಿಸಿದ್ದಾರೆ. ರವಿವಾರ ಸಂಜೆ 7.30ರ ಸುಮಾರಿಗೆ ಇಬ್ಬರು ಪುರುಷರು, ಒಬ್ಟಾಕೆ ಮಹಿಳೆ ಇದ್ದ ತಂಡ ಮನೆಯೊಳಗೆ ಪ್ರವೇಶಿಸಿತು. ಆಗ ನಾನು, ಅಮ್ಮ, ತಮ್ಮನ ಮಗಳು ಮನೆಯಲ್ಲಿ ಇದ್ದೆವು. ಅವರು ಬಂದವರೇ ಅಕ್ಕಿ, ಸಾಮಗ್ರಿ ಕೊಡಿ ಎಂದು ಕೇಳಿದರು. ನಾನು “ನಮ್ಮಲ್ಲಿ ಇಲ್ಲ’ ಎಂದು ಹೇಳಿದೆ, ಚಹಾ ಮಾಡಿದ್ದು ಇದೆ, ದೋಸೆ ಇದೆ, ಅದನ್ನು ಕೊಡುತ್ತೇನೆ ಎಂದೆ. ಆದರೆ ಅದು ಬೇಡ ಎಂದು ಅವರು ಮಾತು ಮುಂದುವರಿಸಿದರು. ನಾವು ನಿಮಗೆ ಏನೂ ಮಾಡುವುದಿಲ್ಲ, ನಾವು ನಕ್ಸಲರು; ಪುರುಷೋತ್ತಮ, ರಾಜೇಶ್, ಲತಾ ಎಂದು ಪರಿಚಯಿಸಿಕೊಂಡರು. ರಾಜೇಶ್, ತಾನು ಶೃಂಗೇರಿಯವನು ಎಂದು ಹೇಳಿಕೊಂಡಿದ್ದಾನೆ. ಇಲ್ಲಿ ಶ್ರೀಮಂತರು ಯಾರಿದ್ದಾರೆ, ಅಂತಹವರು ಇದ್ದರೆ ತಿಳಿಸಿ ಎಂದರು. ಆಗ ನನ್ನ ತಮ್ಮ ಸುರೇಶ್ ಬಂದಿದ್ದಾನೆ. ರಾಜೇಶ್ ಎಂದು ಪರಿಚಯಿಸಿ ಕೊಂಡ ವ್ಯಕ್ತಿ ಸುರೇಶ್ ಜತೆಗೆ ಅವರ ಮನೆಗೆ ಹೋಗಿದ್ದಾರೆ. ನಮ್ಮ ಮನೆಯಲ್ಲಿ ಅವರು ಒಟ್ಟು 10 ನಿಮಿಷ ಮಾತ್ರ ಇದ್ದರು. ಮೂವರೂ ಹಸಿರು ಬಣ್ಣದ ಪ್ಯಾಂಟ್ ಶರ್ಟ್ ಧರಿಸಿದ್ದರು ಎಂದರು. ಅಡುಗೆ ಸಾಮಗ್ರಿ ಪಡೆದರು: ಸುರೇಶ್
ನವನೀತ್ ಮಾಹಿತಿ ನೀಡಿದ ಕೂಡಲೇ ನಾನು ಅಕ್ಕನ ಮನೆಗೆ ತೆರಳಿದೆ. ರಾಜೇಶ್ ಎಂದು ಪರಿಚಯಿಸಿಕೊಂಡ ವ್ಯಕ್ತಿ ನಮಗೆ 10 ಕೆ.ಜಿ. ಅಕ್ಕಿ ಮತ್ತು ಸಾಮಗ್ರಿ ತಂದುಕೊಡಿ ಎಂದು ಕೇಳಿದ. ಬಳಿಕ ನನ್ನ ಮನೆಗೆ ತೆರಳಿದೆವು. ಮನೆಯಲ್ಲಿ ಇದ್ದ 3 ಕೆ.ಜಿ.ಯಷ್ಟು ಕುಚ್ಚಲಕ್ಕಿ, 8 ಕೆ.ಜಿ.ಯಷ್ಟು ಬೆಳ್ತಿಗೆ, ಟೊಮೆಟೋ, ಬಟಾಟೆ, ಎಣ್ಣೆ ತೆಗೆದುಕೊಂಡರು ಎಂದು ಸುರೇಶ್ ಪ್ರತಿಕ್ರಿಯೆ ನೀಡಿದ್ದಾರೆ. ರಿಜುವನ್ನು ಕೇಳಿದರು
ಅಕ್ಕಿ ಕೇಳುವ ಜತೆಗೆ ಅವರು ಇಲ್ಲಿನ ರಿಜು ಎಂಬವನ ಬಗ್ಗೆ ವಿಚಾರಿಸಿದ್ದಾರೆ. “ಅವನು ಕಳೆದ ಬಾರಿ ನಾವು ಸುಬ್ರಹ್ಮಣ್ಯಕ್ಕೆ ಬಂದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದ, ಹೀಗಾಗಿ ನಮ್ಮ ಜತೆಗಾರ ಎಲ್ಲಪ್ಪ ಸಾಯುವಂತಾಯಿತು’ ಎಂದು ಹೇಳಿದ್ದಾರೆ ಎಂದು ಸುರೇಶ್ ತಿಳಿಸಿದ್ದಾರೆ. 2 ತಂಡದಿಂದ ಶೋಧ: ಡಿವೈಎಸ್‌ಪಿ ಶ್ರೀನಿವಾಸ್
ಶಿರಾಡಿ ಗ್ರಾಮದ ಅಡ್ಡಹೊಳೆ ಸಮೀಪದ ಮಿತ್ತ ಮಜಲು ಎಂಬಲ್ಲಿಗೆ 3 ಮಂದಿ ನಕ್ಸಲರು ಬಂದಿರುವು ದನ್ನು ದೃಢಪಡಿಸಲಾಗಿದೆ. ಈ ನಿಟ್ಟಿನಲ್ಲಿ ನಕ್ಸಲ್ ನಿಗ್ರಹ ಪಡೆಯ 2 ತಂಡ ಕಾಡಿನಲ್ಲಿ ಶೋಧ ಆರಂಭಿಸಿದೆ ಎಂದು ಪುತ್ತೂರು ಉಪ ವಿಭಾಗದ ಡಿವೈಎಸ್ಪಿ ಶ್ರೀನಿವಾಸ್ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸುತ್ತ ತಿಳಿಸಿದ್ದಾರೆ. ನಕ್ಸಲ್ ನಿಗ್ರಹ ಪಡೆಯ ಕಾರ್ಕಳ ವಿಭಾಗದ ಇನ್ಸ್‌ಪೆಕ್ಟರ್ ತಿಮ್ಮಪ್ಪ ನಾಯ್ಕ ಮತ್ತು ಹೆಬ್ರಿ ಘಟಕದ ಸಬ್ ಇನ್ಸ್‌ಪೆಕ್ಟರ್ ಅಮರೇಶ್ ನೇತೃತ್ವದ 2 ಪ್ರತ್ಯೇಕ ತಂಡ ಕಾರ್ಯಾಚರಣೆ ನಡೆಸುತ್ತಿದ್ದು, 2 ತಂಡಗಳಲ್ಲಿ ಒಟ್ಟು 26 ಮಂದಿ ಇದ್ದಾರೆ. ತಂಡದಲ್ಲಿದ್ದ ಮಹಿಳೆ ಮುಂಡಗಾರು ಲತಾ?
ಪೊಲೀಸರು ನಕ್ಸಲರ ಫೊಟೋಗಳನ್ನು ಮನೆಯವರಿಗೆ ತೋರಿಸಿದ್ದು, ಈ ಪೈಕಿ ರಾಜೇಶ್ ಹಾಗೂ ಲತಾ ಎಂದು ಹೆಸರು ಹೇಳಿಕೊಂಡು ಬಂದಿದ್ದ ಇಬ್ಬರನ್ನು ಮನೆ ಯವರು ಗುರುತಿಸಿರುವುದರಿಂದ ಬಂದವರು ನಕ್ಸಲರೇ ಅನ್ನುವುದು ದೃಢವಾಗಿದೆ. ಈ ಪೈಕಿ ಲತಾ ಎಂದು ಹೇಳಿಕೊಂಡ ಮಹಿಳೆ ಮುಂಡಗಾರು ಲತಾ ಎಂದು ಹೇಳಲಾಗುತ್ತಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲೂ ಶೋಧ
ಶಿರಾಡಿ ಘಾಟಿ ಸಮೀಪದ ಕೆಲವು ಮನೆಗಳಿಗೆ ರವಿವಾರ ನಕ್ಸಲರ ಗುಂಪೊಂದು ಭೇಟಿ ನೀಡಿರುವ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ಜಿಲ್ಲೆಯ ನಕ್ಸಲ್ ಪೀಡಿತ ಪ್ರದೇಶಗಳಲ್ಲೂ ನಕ್ಸಲ್ ನಿಗ್ರಹದಳ ಶೋಧ ಚುರುಕುಗೊಳಿಸಿದೆ. ನಿಗ್ರಹದಳದ ಒಟ್ಟು 5 ತಂಡಗಳು ನಕ್ಸಲ್ ಪ್ರಭಾವಿತ ಪ್ರದೇಶಗಳಲ್ಲಿ ಕಾರ್ಯಾಚರಣೆ ಆರಂಭಿಸಿವೆ. ಶೃಂಗೇರಿಯ ಕೆರೆಕಟ್ಟೆ, ತನಿಕೋಡು, ಮೆಣಸಿನಹಾಡ್ಯ ಸೇರಿದಂತೆ ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಶೋಧ ಕಾರ್ಯಾಚರಣೆ ಚುರುಕುಗೊಳಿಸಲಾಗಿದೆ ಎಂದು ತಿಳಿದು ಬಂದಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ಅಣ್ಣಾಮಲೈ ಅಧಿಕಾರಿಗಳೊಂದಿಗೆ ಈ ಬಗ್ಗೆ ಸಭೆ ನಡೆಸಿದ್ದಾರೆ.