Advertisement

ಶಿರಾಡಿ ಘಾಟಿ ದುರಸ್ತಿ ಹಿನ್ನೆಲೆ: ಚಾರ್ಮಾಡಿ ಘಾಟಿಗೆ ಬೇಡಿಕೆ 

03:52 PM Jan 30, 2018 | Team Udayavani |

ಬೆಳ್ತಂಗಡಿ: ಶಿರಾಡಿ ಘಾಟಿ ಹೆದ್ದಾರಿಯ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಬಹುತೇಕ ಎಲ್ಲ ವಾಹನಗಳು ಚಾರ್ಮಾಡಿ ಘಾಟಿಯನ್ನೇ ಅವಲಂಬಿಸಿದ್ದು, ಅಪಾಯಕಾರಿ ತಿರುವುಗಳಿರುವ ಈ ರಸ್ತೆಯಲ್ಲಿ ಸಂಚಾರದಲ್ಲಿ ಭಾರೀ ವ್ಯತ್ಯಯವಾಗುತ್ತಿದೆ.

Advertisement

ದಿನಂಪ್ರತಿ ನೂರಾರು ಬಸ್‌ಗಳು, ಲಾರಿಗಳು, ಸಾವಿರಾರು ಕಾರುಗಳು ಈ ಮಾರ್ಗದಲ್ಲೇ ಸಂಚರಿಸುತ್ತಿವೆ. ರಾತ್ರಿ ವೇಳೆ ಬೆಂಗಳೂರಿಗೆ ತೆರಳುವ ಅನೇಕ ಖಾಸಗಿ ಬಸ್‌ಗಳಿಗೂ ಇದೇ ರಸ್ತೆ. ವಾಹನಗಳ ದಟ್ಟಣೆ ಹೆಚ್ಚಾದ ಹಿನ್ನೆಲೆಯಲ್ಲಿ ದಿನಂಪ್ರತಿ ಸಂಚರಿಸುವ ದ್ವಿಚಕ್ರ ವಾಹನ ಸವಾರರಿಗೆ ಕಷ್ಟವಾಗಿದೆ. ಕೆಲ ವಾಹನ ಸವಾರರು ಘಾಟಿಯಲ್ಲಿ ಟ್ರಾಫಿಕ್‌ ಜಾಮ್‌ ಆದಾಗ ತಾವೇ ಮುಂದೆ ಹೋಗಬೇಕೆಂದು ನುಗ್ಗುವುದು ಮತ್ತಷ್ಟು ಸಮಸ್ಯೆಗೆ ಕಾರಣವಾಗಿದೆ.

ತಿಂಡಿ, ನೀರು ಜತೆಗಿರಲಿ
ಚಾರ್ಮಾಡಿ ಘಾಟಿಯಲ್ಲಿ ವಾಹನ ಸಂಚಾರ ಬ್ಲಾಕ್‌ ಆದರೆ ಸೌಕರ್ಯ ಕಡಿಮೆ. ಚಿಕ್ಕ ಮಕ್ಕಳು, ವೃದ್ದರನ್ನು ಕರೆದುಕೊಂಡು
ಈ ರಸ್ತೆಯಲ್ಲಿ ಸಂಚರಿಸುವವರು ಆಹಾರ, ನೀರು ಜತೆಯಲ್ಲಿಟ್ಟುಕೊಳ್ಳುವುದು ಸೂಕ್ತ.

ನಿಡಿಗಲ್‌ ಸೇತುವೆ
ಕಲ್ಮಂಜದ ನಿಡಿಗಲ್‌ ಸೇತುವೆ ಮೇಲೆ ದಿನಂಪ್ರತಿ ವಾಹನಗಳು ನಿಲ್ಲುತ್ತಿವೆ. ಈ ಸೇತುವೆ ಕಿರಿದಾಗಿದ್ದು, ಏಕಕಾಲದಲ್ಲಿ ಎರಡು ಬಸ್‌ಗಳು ಎದುರುಬದುರಾದರೆ ಸಂಚರಿಸುವುದು ಕಷ್ಟ. ಆದರೂ ಕೆಲ ಬಸ್‌ ಹಾಗೂ ಲಾರಿಯವರು ಏಕಕಾಲದಲ್ಲಿ ಸೇತುವೆ ಮೇಲೆ ಸಂಚರಿಸಲು ಪ್ರಯತ್ನಿಸುವುದರಿಂದ ಉಳಿದ ವಾಹನಗಳಿಗೆ ತೊಂದರೆಯಾಗುತ್ತಿದೆ. ಸೇತುವೆ ಬದಿಯ ತಡೆ ಬೇಲಿಯೂ ಮುರಿದು ಹೋಗಿದ್ದು ಅಪಾಯದ ಪ್ರಮಾಣವನ್ನು ಹೆಚ್ಚಿಸಿದೆ. ಸೇತುವೆಯೂ ಶಿಥಿಲವಾಗಿದ್ದು, ಈಗಲೋ ಆಗಲೋ ಎನ್ನುವಂತಿದೆ.

ಅತಿವೇಗ, ಅಪಾಯ ಬೇಗ
ಈ ಘಾಟಿಯಲ್ಲಿ ವಾಹನ ದಟ್ಟಣೆ ಹೆಚ್ಚಿದ್ದಾಗಲೂ ವೇಗದೂತ ಬಸ್‌ಗಳು ಹಾಗೂ ಲಾರಿಗಳು ಅತೀ ವೇಗದಿಂದ ಸಂಚರಿಸುತ್ತಿರುವುದು ಅಪಾ ಯಕ್ಕೆ ಆಹ್ವಾನ ನೀಡಿದೆ. ರಸ್ತೆಯ ಕುರಿತು ಸಮರ್ಪಕ ಮಾಹಿತಿ ಯಿಲ್ಲದ ದೂರದೂರಿನ
ವಾಹನದವರು ಇಲ್ಲಿನ ಕಿರಿದಾದ ರಸ್ತೆಯಲ್ಲಿ ಅತಿವೇಗದಿಂದ ಚಲಿಸುವುದು ಹಾಗೂ ಓವರ್‌ ಟೇಕ್‌ ಮಾಡುವುದೂ ಹೆಚ್ಚಾಗಿದೆ ಎಂಬುದು ಸ್ಥಳೀಯರ ಅಭಿಪ್ರಾಯ.

Advertisement

ಅವಸರದ ನಿರ್ಧಾರ
ಅಗಲ ಕಿರಿದಾದ ಈ ಡಾಮರು ರಸ್ತೆಯ ಇಕ್ಕೆಲಗಳ ಹೆಚ್ಚಿನ ಕಡೆ ಸುಮಾರು ಒಂದೂವರೆ ಅಡಿಯಷ್ಟು ಆಳವಿದೆ. ಇದಕ್ಕೆ
ಮಣ್ಣು ತುಂಬಿದ ಬಳಿಕ ಶಿರಾಡಿ ಘಾಟಿಯನ್ನು ಮುಚ್ಚಬೇಕಿತ್ತು. ಸಂಬಂಧಪಟ್ಟ ಇಲಾಖೆಯವರು ಇನ್ನಾದರೂ ಈ ಬಗ್ಗೆ ಗಮನಹರಿಸಿದರೆ ವಾಹನ ಸವಾರರು, ಪಾದಚಾರಿಗಳು ಸ್ವಲ್ಪ ನಿರಾಳವಾಗಿ ಸಾಗಬಹುದು.
ಅರವಿಂದ ಹೆಬ್ಟಾರ್‌ ,
   ವಾಹನ ಸವಾರ

ಕಡಿವಾಣ ಅಗತ್ಯ
ಚಾರ್ಮಾಡಿ ಘಾಟಿ ರಸ್ತೆಯಲ್ಲಿ ಘನ ವಾಹನಗಳಿಗೆ ಕಡಿವಾಣ ಹಾಕಬೇಕಿದೆ. ಘಾಟಿ ರಸ್ತೆ ಬದಿಯಲ್ಲಿ ಅನೇಕ ಲಾರಿ ಹಾಗೂ ಇತರ ವಾಹನಗಳನ್ನು ನಿಲ್ಲಿಸುವುದರಿಂದಲೂ ವಾಹನ ಸಂಚಾರಕ್ಕೆ ತೊಡಕುಂಟಾಗುತ್ತಿದೆ. ಘಾಟಿ ಏರುವ ವಾಹನಗಳಿಗೆ ತಮ್ಮ ಎದುರಿನ ವಾಹನಗಳು ಸೂಕ್ತ ರೀತಿಯಲ್ಲಿ ಅನುವು ಮಾಡಿಕೊಟ್ಟರೆ ಅನುಕೂಲ. ವಾಹನ ಚಾಲಕರ ನಿರ್ಲಕ್ಷ್ಯವೂ ಸಮಸ್ಯೆ ಸೃಷ್ಟಿಸುತ್ತಿದೆ.
ರಾಜೇಶ್‌ ಎಂ. ಕಾನರ್ಪ,
   ಪ್ರಯಾಣಿಕ

ಗುರು ಮುಂಡಾಜೆ

Advertisement

Udayavani is now on Telegram. Click here to join our channel and stay updated with the latest news.

Next