ಸುಬ್ರಹ್ಮಣ್ಯ: ಶಿರಾಡಿ ಘಾಟಿಯ ಮೂಲಕ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಳೆದ ಮಳೆಗಾಲದ ಅತಿವೃಷ್ಟಿ ಸಂದರ್ಭ ಉಂಟಾದ ಹಾನಿಯನ್ನು ಸರಿಪಡಿಸುವ ಕೆಲಸ ಇನ್ನೂ ಬಾಕಿ ಉಳಿದಿದೆ. ಮಳೆಗಾಲದ ಹೊಸ್ತಿಲಲ್ಲಿದ್ದರೂ ಪ್ರಯಾಣಿಕರ ಸುರಕ್ಷತೆಗೆ ಹಾಸನ ಮತ್ತು ದಕ್ಷಿಣ ಕನ್ನಡ ಜಿಲ್ಲಾಡಳಿತಗಳು ಕ್ರಮಕ್ಕೆ ಮುಂದಾಗಿಲ್ಲ.
ಘಾಟಿ ರಸ್ತೆಯಲ್ಲಿ ಗುಂಡ್ಯದಿಂದ ಹೆಗ್ಗದ್ದೆ ತನಕ ಹಾಸನ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ 26 ಕಿ.ಮೀ.ಕಾಂಕ್ರೀಟ್ ರಸ್ತೆಯಲ್ಲಿ 12 ಕಡೆ ಭೂಕುಸಿತ ಉಂಟಾಗಿತ್ತು. ಉದ್ದಕ್ಕೂ ಹೊಳೆ ಇರುವ ಬದಿಯಲ್ಲಿ ಬೃಹತ್ ಪ್ರಮಾಣದಲ್ಲಿ ಭೂಕುಸಿತವಾಗಿತ್ತು. ಇದರಿಂದ ಸುದೀರ್ಘ ಕಾಲ ರಸ್ತೆ ಸಂಚಾರ ಸ್ಥಗಿತಗೊಂಡಿತ್ತು.
ಕುಸಿತವಾದಲ್ಲಿ ತಾತ್ಕಾಲಿಕ ಕ್ರಮವಾಗಿ ಮರಳಿನ ಚೀಲಗಳನ್ನು ಸೇರಿಸಿ, ಮಣ್ಣಿನ ಮೇಲೆ ಟಾರ್ಪಾಲ್ ಹಾಸಿ ಮುಚ್ಚಲಾಗಿದೆ. ಕಾಂಕ್ರೀಟ್ ಅಳವಡಿಸಿದ ಸ್ಥಳಗಳ ಮೇಲ್ಭಾಗದಲ್ಲೂ ತಾತ್ಕಾಲಿಕ ಗೋಡೆ ನಿರ್ಮಿಸಲಾಗಿದೆ. ಇಲ್ಲೆಲ್ಲಾ ಆಗ ಅಳವಡಿಸಿದ ಎಚ್ಚರಿಕೆ ಫಲಕಗಳು ಇಂದಿಗೂ ಇವೆ. ಇದಿಷ್ಟು ಬಿಟ್ಟರೆ ಕುಸಿತ ಉಂಟಾದ ಅಪಾಯಕಾರಿ ಸ್ಥಳಗಳಲ್ಲಿ ಬೇರಾವುದೇ ಶಾಶ್ವತ ಕೆಲಸ ಆಗಿಲ್ಲ.
ಕುಸಿತ ಉಂಟಾದಲ್ಲಿ ವಾಹನ ಸಂಚಾರಕ್ಕೆ ಅಡ್ಡಿ ಇದೆ. ಒಂದು ಕಡೆ ಗುಡ್ಡಗಳು ಅಪಾಯಕಾರಿ ಸ್ಥಿತಿಯಲ್ಲಿವೆ. ಇನ್ನೊಂದು ಬದಿ ಕುಸಿತದ ಕಾರಣ ರಸ್ತೆ ಇಕ್ಕಟ್ಟಾಗಿದೆ. ರಸ್ತೆಯ ಎರಡೂ ಬದಿಗೆ ಚರಂಡಿ ವ್ಯವಸ್ಥೆಯೂ ಇಲ್ಲ. ಇಂತಹ ಅಪಾಯಕಾರಿ ಸ್ಥಿತಿಯಲ್ಲಿ ಈಗ ಸಂಚರಿಸಬೇಕಿದೆ. ಸದ್ಯ ಹೆದ್ದಾರಿಯಲ್ಲಿ ವಾಹನಗಳ ಒತ್ತಡ ಕೂಡ ಹೆಚ್ಚಿದೆ.
ಒಂಭತ್ತು ತಿಂಗಳು ಬಂದ್: ಶಿರಾಡಿ ಹೆದ್ದಾರಿಯನ್ನು ಎರಡನೇ ಹಂತದ ಕಾಂಕ್ರೀಟ್ ಕಾಮಗಾರಿಗಾಗಿ ಕಳೆದ ವರ್ಷ ಜ.19ರಿಂದ ಬಂದ್ ಮಾಡಲಾಗಿತ್ತು. ಜೂ.15ರ ವೇಳೆಗೆ ಲಘು ವಾಹನಗಳಿಗೆ ಸಂಚರಿಸಲು ಅವಕಾಶ ನೀಡಲಾಗಿತ್ತು.
ಈ ಅವಧಿಯಲ್ಲಿ ಭಾರೀ ಮಳೆಯಾಗಿ ಭೂಕುಸಿತವಾದ ಕಾರಣ ಮತ್ತೆ ಸಂಚಾರ ನಿಷೇಧಿಸಲಾಯಿತು. ಬಳಿಕ ತಾತ್ಕಾಲಿಕ ದುರಸ್ತಿ ಕಾಮಗಾರಿ ನಡೆಸಿ, ವಾಹನ ಸಂಚಾರಕ್ಕೆ ಮುಕ್ತಗೊಳಿಸಲಾಯಿತು. ಬಳಿಕ ಇಲ್ಲಿ ಶಾಶ್ವತ ಕಾಮಗಾರಿಗಳು ನಡೆದಿಲ್ಲ.
ಶಿರಾಡಿ ರಸ್ತೆಯಲ್ಲಿ ಭೂಕುಸಿತ ನಡೆದ ಸ್ಥಳಗಳ ವೀಕ್ಷಣೆಗೆ ಹೈದರಾಬಾದ್‌ನ ವಿಶೇಷ ತಜ್ಞರ ತಂಡ ವಾರದೊಳಗೆ ಭೇಟಿ ನೀಡಲಿದೆ. ವರದಿ ಆಧರಿಸಿ ಕ್ರಮಕ್ಕೆ ಸರಕಾರಕ್ಕೆ ತಿಳಿಸುತ್ತೇವೆ. ಮಳೆಗಾಲಕ್ಕೆ ಮುನ್ನ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ.
-ಸುಬ್ಬರಾವ್ ಹೊಳ್ಳ, ಸಹಾಯಕ ಅಭಿಯಂತರ, ರಾ.ಹೆ. ವಿಭಾಗ, ಮಂಗಳೂರು.