Advertisement

ಶಿರಾಡಿ ಘಾಟಿ ಕಾಮಗಾರಿ: ರಾಜಕೀಯ ಹಸ್ತಕ್ಷೇಪ ನಿಂತರೆ ಕೆಲಸ ಸುಗಮ

11:44 PM Jan 29, 2022 | Team Udayavani |

ಬೆಂಗಳೂರು: ಉತ್ತಮ ಕಾಮಗಾರಿ ನಡೆಸಲು ಸದ್ಯ ನಮ್ಮ ದೇಶದಲ್ಲಿ ತಾಂತ್ರಿಕ ಹಿನ್ನಡೆ ಇಲ್ಲ. ಬೇಕಾದದ್ದು ರಾಜಕೀಯ ಇಚ್ಛಾ ಶಕ್ತಿ ಮಾತ್ರ. ಜತೆಗೆ ಕಾಮಗಾರಿಯಲ್ಲಿ ಗುಣಮಟ್ಟ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ರಾಜಕೀಯ ಹಸ್ತಕ್ಷೇಪ ಸಂಪೂರ್ಣವಾಗಿ ನಿಲ್ಲಬೇಕು – ಇಂಥದ್ದೊಂದು ಏಕಕಂಠದ ಅಭಿ ಪ್ರಾಯ ವ್ಯಕ್ತ ವಾದದ್ದು ಫಿಕ್ಕಿ ಕರ್ನಾಟಕ ವಿಭಾಗದ ಮಾಜಿ ಅಧ್ಯಕ್ಷ ಡಾ| ಜೆ.ಕ್ರಾಸ್ತಾ ಮತ್ತು ಅಸೋಸಿಯೇಶನ್‌ ಆಫ್ ಕನ್ಸಲ್ಟಿಂಗ್‌ ಸಿವಿಲ್‌ ಎಂಜಿನಿಯರ್ಸ್‌ ಸಂಸ್ಥೆಯ ಬೆಂಗಳೂರು ಕೇಂದ್ರದ ಅಧ್ಯಕ್ಷ ಶ್ರೀಕಾಂತ್‌ ಚನ್ನಾಳ್‌ ಅವರಿಂದ.

Advertisement

ಬೆಂಗಳೂರು ಮೆಟ್ರೋ ಯೋಜನೆಯಲ್ಲಿ ತೊಡಗಿಸಿಕೊಂಡಿರುವ ಏಷ್ಯಾ ಫೌಂಡೇಷನ್ಸ್‌ ಆ್ಯಂಡ್‌ ಕನ್‌ಸ್ಟ್ರಕ್ಷನ್‌ ಲಿ. (ಆಫ್ಕಾನ್ಸ್‌) ಅತ್ಯುತ್ತಮ ರೀತಿಯಲ್ಲಿ ಕಾಮಗಾರಿ ನಿರ್ವಹಿಸುತ್ತಿದೆ. ಅದೇ ರೀತಿ ಕಾಮಗಾರಿ ಸಂದರ್ಭದಲ್ಲಿ ರಾಜಕೀಯ ಹಸ್ತಕ್ಷೇಪಗಳು ಕಡಿಮೆಯಾಗಬೇಕು. ಶಿರಾಡಿ ಘಾಟಿ ರಸ್ತೆಯ ಗುಂಟ ಇರುವ ಮಣ್ಣು ಅತ್ಯಂತ ಮೃದು. ಹೀಗಾಗಿ, ಆ ಪರಿಸ್ಥಿತಿಯನ್ನು ನಿಭಾಯಿಸಲು ತಾಂತ್ರಿಕವಾಗಿ ಅತ್ಯಂತ ಪ್ರಾವೀಣ್ಯ ಇರಬೇಕಾಗುತ್ತದೆ ಎಂದು ಶ್ರೀಕಾಂತ್‌ ಚನ್ನಾಳ್‌ ಹೇಳುತ್ತಾರೆ. ಸದ್ಯ ಶಿರಾಡಿ ಘಾಟಿಯ ರಸ್ತೆ ದುರವಸ್ಥೆಗೆ ರಾಜಕೀಯ ಹಸ್ತಕ್ಷೇಪವೇ ಕಾರಣವಾಗಿದೆ.

ಚೆನಾಬ್‌ ಬ್ರಿಡ್ಜ್ ಮಾದರಿ
ಜಮ್ಮು ಮತ್ತು ಕಾಶ್ಮೀರದಲ್ಲಿ ಚೆನಾಬ್‌ ನದಿಗೆ ಕಟ್ಟಿರುವ ರೈಲ್ವೆ ಸೇತುವೆ ಕಾಮಗಾರಿಯಲ್ಲಿ ರಾಜಕೀಯ ಹಸ್ತಕ್ಷೇಪ ಇರಲಿಲ್ಲ. ರೈಲ್ವೆ ಸಚಿವಾಲಯದ ಕಾಮಗಾರಿಯನ್ನು ಆಫ್ಕಾನ್ಸ್‌ ಸಂಸ್ಥೆ ಸುಗಮ ಮತ್ತು ಸುಲಲಿತವಾಗಿ ನಿರ್ಮಾಣ ಮಾಡಿದೆ.

ಬಂಗಾರದ ರಸ್ತೆ ನಿರ್ಮಿಸಬಹುದಿತ್ತು
ಸದ್ಯ ರಾಷ್ಟ್ರೀಯ ಹೆದ್ದಾರಿ 75 ಆಗಿರುವ ಶಿರಾಡಿ ರಸ್ತೆಗೆ ಇದುವರೆಗೆ ಖರ್ಚು ಮಾಡಿದ ಹಣದ ಲೆಕ್ಕಾಚಾರ ಮಾಡುವುದಿದ್ದರೆ, ಬಂಗಾರದ ರಸ್ತೆ ನಿರ್ಮಿಸಬಹುದಿತ್ತು ಎನ್ನುತ್ತಾರೆ ಡಾ| ಜೆ. ಕ್ರಾಸ್ತಾ. ಈಗ ಕೇಂದ್ರ ಸರಕಾರದ ವತಿಯಿಂದ 1,200 ಕೋ. ರೂ. ಮೊತ್ತವನ್ನು ಹೊಸದಾಗಿ ಬಿಡುಗಡೆ ಮಾಡಲಾಗಿದೆ. ಅದನ್ನಾದರೂ ಸದ್ವಿನಿಯೋಗಿಸಿ ಕೊಳ್ಳಬೇಕು. ಜಪಾನ್‌ ಸಹಯೋಗದಲ್ಲಿ ನಿರ್ಮಾಣ ವಾಗಬೇಕಾಗಿದ್ದ ಸುರಂಗ ಮಾರ್ಗಕ್ಕೂ ಕೆಲವರು ಅಡ್ಡಗಾಲು ಹಾಕುತ್ತಿದ್ದಾರೆ ಎಂದರು ಕ್ರಾಸ್ತಾ.

ಮುಖ್ಯಮಂತ್ರಿ ಪ್ರತ್ಯೇಕ
ಸೆಲ್‌ ರಚಿಸಬೇಕು
ದೇಶದ ಕೆಲವು ರಾಷ್ಟ್ರೀಯ ಹೆದ್ದಾರಿ ಯೋಜನೆಗಳಿಗೆ ಮತ್ತು ಮೂಲಸೌಕರ್ಯ ಯೋಜನೆಗಳ ಕಾಮಗಾರಿಗಳನ್ನು ಪ್ರಧಾನಿ ನರೇಂದ್ರ ಮೋದಿಯವರೇ ಖುದ್ದು ಉಸ್ತುವಾರಿ ನೋಡಿಕೊಳ್ಳುತ್ತಾರೆ. ಅದೇ ಮಾದರಿಯನ್ನು ಕರ್ನಾಟಕದ ಮುಖ್ಯಮಂತ್ರಿಯವರೂ ಅನುಸರಿಸಬೇಕು ಎಂದು ರಾಜ್ಯದವರೇ ಆಗಿರುವ ಗ್ಯಾಮನ್‌ ಇಂಡಿಯಾದ ಸಿಇಒ, ಎಂ.ಎಸ್‌.ಜಂಬಗಿ ಅವರು ಪ್ರತಿಪಾದಿಸುತ್ತಾರೆ. ರಾಜ್ಯದಲ್ಲಿ ಪ್ರಮುಖವಾಗಿ ಇರುವ ಹೆದ್ದಾರಿ ಮತ್ತು ಇತರ ಯೋಜನೆಗಳನ್ನು ಆದ್ಯತೆಯಲ್ಲಿ ವರ್ಗೀಕರಿಸಿ ಅದರ ಅನುಷ್ಠಾನಕ್ಕಾಗಿ ಪ್ರತ್ಯೇಕ ಸೆಲ್‌ ರಚಿಸಬೇಕು ಮತ್ತು ಒಬ್ಬ ಉತ್ತಮ ಅಧಿಕಾರಿಯನ್ನು ಅದರ ಉಸ್ತುವಾರಿಗಾಗಿ ನೇಮಿಸಬೇಕು ಎಂದು ಅವರು ಸಲಹೆ ಮಾಡಿದ್ದಾರೆ. ಆ ಅಧಿಕಾರಿ ನೇರವಾಗಿ ಮುಖ್ಯಮಂತ್ರಿಗೇ ವರದಿ ಮಾಡಿಕೊಳ್ಳಬೇಕು. ಮುಖ್ಯಮಂತ್ರಿಗಳೇ ನಿಯಮಿತವಾಗಿ ಕಾಮಗಾರಿ ಪ್ರಗತಿ ಬಗ್ಗೆ ಸಭೆ ನಡೆಸಬೇಕು ಎಂದು ಸಲಹೆ ನೀಡಿದ್ದಾರೆ. ಮತ್ತು ಬೇರೆಯವರ ಹಸ್ತಕ್ಷೇಪ ಅಂಥ ಕಾಮಗಾರಿಗಳಲ್ಲಿ ಇರಲೇಬಾರದು ಎಂಬುದು ಜಂಬಗಿ ಅಭಿಪ್ರಾಯ.

Advertisement

ಇದನ್ನೂ ಓದಿ:

ಶಿರಾಡಿ ಘಾಟಿ ಸಂಚಾರ ನಿರ್ಬಂಧ ಎಷ್ಟು ಸೂಕ್ತ?-  https://bit.ly/354VPOy
ಸಂಚಾರ ಸ್ಥಗಿತ ಚಿಂತನೆ; ಪರ್ಯಾಯ ವ್ಯವಸ್ಥೆಗೆ ಆಗ್ರಹ –https://bit.ly/3qTX4Zp
ಎಲ್ಲೆಲ್ಲೋ ಸುತ್ತಿ ಮಂಗಳೂರಿಗೆ ಪ್ರಯಾಣಿಕರು ಹೈರಾಣ-https://bit.ly/3fUDfed
ಶಿರಾಡಿ ಘಾಟಿ: 6 ತಿಂಗಳು ರಸ್ತೆ ಮುಚ್ಚಿದರೆ ತತ್ತರಿಸಲಿದೆ ಆರ್ಥಿಕತೆ-https://bit.ly/34bJ5oO
6 ತಿಂಗಳು ಬಂದ್‌: ಪರ್ಯಾಯ, ಪರಿಹಾರ ಸಾಧ್ಯತೆಗಳು-https://bit.ly/33YQCYz

-ಸದಾಶಿವ ಕೆ.

Advertisement

Udayavani is now on Telegram. Click here to join our channel and stay updated with the latest news.

Next