Advertisement

ಜು. 5ರೊಳಗೆ ಶಿರಾಡಿ ಘಾಟಿ ರಸ್ತೆ ಸಂಚಾರಕ್ಕೆ ಮುಕ್ತ: ರೇವಣ್ಣ

07:55 AM Jun 20, 2018 | Karthik A |

ಮಂಗಳೂರು: ಶಿರಾಡಿ ಘಾಟಿಯಲ್ಲಿ ಹೆದ್ದಾರಿ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು ಜು. 5ರೊಳಗೆ ವಾಹನ ಸಂಚಾರಕ್ಕೆ ಮುಕ್ತಗೊಳಿಸಲಾಗುವುದು ಎಂದು ರಾಜ್ಯ ಲೋಕೋಪಯೋಗಿ ಸಚಿವ ಎಚ್‌.ಡಿ. ರೇವಣ್ಣ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿರಾಡಿ ಘಾಟಿಯಲ್ಲಿ ಇನ್ನೂ 4 ದಿನಗಳ ಕಾಮಗಾರಿ ಬಾಕಿ ಇದೆ. ಬಳಿಕ 10 ದಿನಗಳ ವಾಟರ್‌ ಕ್ಯೂರಿಂಗ್‌ ಕೆಲಸ ಮುಗಿಸಲಾಗುವುದು ಎಂದರು. ಶಿಶಿಲ – ಬೈರಾಪುರ ರಸ್ತೆ ನಿರ್ಮಾಣ ಕುರಿತಂತೆ ಸಮೀಕ್ಷೆಗೆ ಅನುದಾನ ಬಿಡುಗಡೆ ಮಾಡಲಾಗುವುದು. ಸುಬ್ರಹ್ಮಣ್ಯ-ಒಣಗೂರು, ಸಂಪಾಜೆ ಘಾಟಿ ರಸ್ತೆ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು. ಹೊರನಾಡು- ಸುಬ್ರಹ್ಮಣ್ಯ ರಸ್ತೆಗೆ ಮತ್ತೆ ಯೋಜನೆ ರೂಪಿಸಲಾಗುವುದು ಎಂದರು.

Advertisement

ಚಾರ್ಮಾಡಿಗೆ ಬೇಕು 250 ಕೋ.ರೂ.: ಚಾರ್ಮಾಡಿ ಘಾಟಿಯಲ್ಲಿ ಮಳೆಯಿಂದ ಆಗಿರುವ ಹಾನಿಯ ಬಗ್ಗೆ ಮಂಗಳವಾರ  ಪರಿಶೀಲನೆ ನಡೆಸಿದ್ದೇನೆ. ಅಲ್ಲಿ ತಾತ್ಕಾಲಿಕವಾಗಿ ರಸ್ತೆಯನ್ನು ಸರಿಪಡಿಸಿ ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಪಕ್ಕಾ ದುರಸ್ತಿಗೆ 250 ಕೋ.ರೂ. ಅಗತ್ಯವಿದೆ ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ವಿವರವಾದ ಯೋಜನಾ ವರದಿ ಸಿದ್ಧಪಡಿಸಿ ಕೇಂದ್ರ ಸರಕಾರಕ್ಕೆ ಕಳುಹಿಸಿಕೊಡಲಾಗುವುದು ಎಂದರು.

ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು, ಉಡುಪಿ ಜಿಲ್ಲೆಯ ಕರಾವಳಿ ಬೈಪಾಸ್‌ ಹಾಗೂ ಕುಂದಾಪುರ ಜಂಕ್ಷನ್‌ ಗಳಲ್ಲಿ ರಾಷ್ಟ್ರೀಯ  ಹೆದ್ದಾರಿಗಳಲ್ಲಿ ಫ್ಲೈ ಓವರ್‌ ನಿರ್ಮಾಣ ಕಾಮಗಾರಿ ವಿಳಂಬಗತಿಯಲ್ಲಿ ಸಾಗುತ್ತಿರುವುದರಿಂದ ಮಳೆಗಾಲದಲ್ಲಿ ಹೆಚ್ಚಿನ ಸಮಸ್ಯೆ ಸೃಷ್ಟಿಯಾಗಿದೆ. ಬೆಂಗಳೂರಿನಲ್ಲಿ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಹಾಗೂ ಉಭಯ ಜಿಲ್ಲಾಧಿಕಾರಿಗಳ ಸಭೆ ನಡೆಸಿ ಕಾಮಗಾರಿ ಶೀಘ್ರ ಪೂರ್ಣಗೊಳ್ಳಲು ಕ್ರಮ ಕೈಗೊಳ್ಳಲಾಗುವುದು ಎಂದರು. 

ಬಜೆಟ್‌ ಗೊಂದಲವಿಲ್ಲ
ಬಜೆಟ್‌ ಮಂಡನೆ ಕುರಿತಂತೆ ಸಿಎಂ  ಕುಮಾರಸ್ವಾಮಿ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಮಧ್ಯೆ ಯಾವುದೇ ಗೊಂದಲ ಇಲ್ಲ ಎಂದು ಸಚಿವ  ಎಚ್‌.ಡಿ. ರೇವಣ್ಣ  ಹೇಳಿದ್ದಾರೆ. ನಗರದ ಸರ್ಕಿಟ್‌ ಹೌಸ್‌ ನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಧರ್ಮಸ್ಥಳದ ಶಾಂತಿವನದಲ್ಲಿ ಪ್ರಕೃತಿ ಚಿಕಿತ್ಸೆ ಪಡೆಯುತ್ತಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆರೋಗ್ಯ ವಿಚಾರಿಸಿ ಬಂದಿದ್ದೇನೆ. ಇದು ಸ್ನೇಹಯುತ ಭೇಟಿ. ಯಾವುದೇ ರೀತಿಯ ರಾಜಕೀಯ ಚರ್ಚೆ ಮಾಡಿಲ್ಲ ಎಂದು ಹೇಳಿದರು. ಮಳೆಯಿಂದ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ರಸ್ತೆಗಳಿಗೆ ಆಗಿರುವ ಹಾನಿ ಸರಿಪಡಿಸಲು ಸೂಚಿಸಿದ್ದೇನೆ. ಮಹಾನಗರ ಪಾಲಿಕೆಗೆ ಸಂಬಂಧಿಸಿದ ರಸ್ತೆಗಳನ್ನು ಸರಿಪಡಿಸಲು ಪಾಲಿಕೆ ಗಮನ ಹರಿಸಬೇಕು. ಅನುದಾನದ ಕೊರತೆ ಇದ್ದಲ್ಲಿ ಇಲಾಖೆಯಿಂದ ಆದಷ್ಟು ನೆರವು ಒದಗಿಸಲು ಪ್ರಯತ್ನಿಸಲಾಗುವುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next