Advertisement
ಮಂಗಳವಾರ ರಾತ್ರಿ ರಾ.ಹೆ. 75ರ ದೊಡ್ಡತಪ್ಳು ಬಳಿ ಅನಿಲ ಟ್ಯಾಂಕರ್ ಹಳ್ಳಕ್ಕೆ ಉರುಳಿ ಚಾಲಕ ಹಾಗೂ ಕ್ಲೀನರ್ ಮೃತಪಟ್ಟಿದ್ದು, ಅಪಘಾತವನ್ನು ನೋಡಲು ಹೋದ ವ್ಯಕ್ತಿಯೊಬ್ಬರೂ ವಾಹನ ಬಡಿದು ಅಸುನೀಗಿದ್ದಾರೆ. ಟ್ಯಾಂಕರ್ ನಿಂದ ಅನಿಲವೂ ಸೋರಿಕೆಯಾಗಿತ್ತು. ಮಾರ್ಗದಲ್ಲಿ ನಿರಂತರವಾಗಿ ಗುಡ್ಡ ಕುಸಿಯುತ್ತಿದ್ದು, ಬುಧವಾರವೂ ಎಂಟರಿಂದ ಹತ್ತು ಕಡೆ ಕಡೆ ಭೂಕುಸಿತ ಸಂಭವಿಸಿದೆ. ರಾತ್ರಿಯಿಂದ ಮತ್ತೆ ಮಳೆ ಆರಂಭವಾಗಿದ್ದು, ಹೆದ್ದಾರಿ ಮೇಲೆ ಮಣ್ಣು, ಕಲ್ಲು ಹಾಗೂ ಮರಗಳು ಬೀಳುತ್ತಿವೆ. ಹೀಗಾಗಿ ಘಾಟಿ ಸಂಚಾರ ಅಪಾಯಕಾರಿಯಾಗಿಯೇ ಪರಿಣಮಿಸಿದೆ. ಗುಡ್ಡ ಕುಸಿತ ಸಂದರ್ಭ 2 ಬಸ್‌ಗಳು ತಗ್ಗಿಗೆ ಜಾರಿದ್ದು ತೀವ್ರತೆಯನ್ನು ತೋರಿಸಿತು.
ಸುಬ್ರಹ್ಮಣ್ಯ: ಸುಬ್ರಹ್ಮಣ್ಯ- ಸಕಲೇಶಪುರ ನಡುವಿನ ರೈಲು ಹಳಿ ಮೇಲೆ ಎಡಕುಮೇರಿಯ ಸುರಂಗ 38ರ ಬಳಿ ಸುಮಾರು ನೂರು ಮೀ. ಪ್ರದೇಶದಲ್ಲಿ ಗುಡ್ಡ ಕುಸಿದಿದೆ. ತೆರವುಗೊಳಿಸಿದಂತೆ ಮತ್ತೆ ಮತ್ತೆ ಕುಸಿಯುತ್ತಿರುವುದು ಸಮಸ್ಯೆಯಾಗಿ ಪರಿಣಮಿಸಿದೆ. ಮಾರ್ಗ ಸುಗಮವಾಗಲು ಇನ್ನೂ ನಾಲ್ಕೈದು ದಿನ ಬೇಕಾಗಬಹುದು ಎಂದು ರೈಲ್ವೇ ಮೂಲಗಳು ತಿಳಿಸಿವೆ. ಕುಕ್ಕೆ ಸುಬ್ರಹ್ಮಣ್ಯಕ್ಕೆ ಆಗಮಿಸಿದ್ದ ಸಕಲೇಶಪುರ-ಹಾಸನ ಕಡೆಗಳ ಪ್ರಯಾಣಿಕರು ಬುಧವಾರ ಧರ್ಮಸ್ಥಳಕ್ಕೆ ತೆರಳಿ ಚಾರ್ಮಾಡಿ ಘಾಟಿ ಮೂಲಕ ಸಾರಿಗೆ ಬಸ್ ಗಳಲ್ಲಿ ಪ್ರಯಾಣ ಬೆಳೆಸಿದರು. ಖಾಸಗಿ ವಾಹನಗಳಲ್ಲಿ ಬಂದವರು ಸುಳ್ಯ-ಮಡಿಕೇರಿ ಮಾರ್ಗವಾಗಿ ಸಂಚರಿಸಿದರು. ಚಾರ್ಮಾಡಿ ಘಾಟಿ: ವಾಹನ ದಟ್ಟಣೆ
ಬೆಳ್ತಂಗಡಿ: ಮಳೆ ಹಾನಿಯಿಂದ ಉಳಿದೆಲ್ಲ ಘಾಟಿ ರಸ್ತೆಗಳಲ್ಲಿ ಸಂಚಾರ ಮೊಟಕುಗೊಂಡಿರುವುದ ರಿಂದ ಚಾರ್ಮಾಡಿ ಘಾಟಿಯ ಮೇಲೆ ಒತ್ತಡ ಹೆಚ್ಚಿದೆ. ಆಗಾಗ ಟ್ರಾಫಿಕ್ ಜಾಮ್ ಜತೆಗೆ ರಸ್ತೆ ಹೊಂಡಗಳೂ ನಿಧಾನ ಗತಿಯ ಸಂಚಾರಕ್ಕೆ ಕಾರಣವಾಗಿವೆ. ಬುಧವಾರ ರಾತ್ರಿ ಬಣಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಅಣ್ಣಪ್ಪ ಸ್ವಾಮಿ ಗುಡಿಯ ಬಳಿ ಟಿಪ್ಪರ್ ಕೆಟ್ಟು ನಿಂತು ಸ್ವಲ್ಪ ಕಾಲ ವಾಹನ ಸಂಚಾರಕ್ಕೆ ತಡೆ ಉಂಟಾಗಿತ್ತು.