Advertisement

ಶಿರಾಡಿ ಘಾಟಿ: ಗುಡ್ಡ ಕುಸಿತ

01:38 AM Sep 07, 2019 | Sriram |

ನೆಲ್ಯಾಡಿ: ಮಂಗಳೂರು -ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಶಿರಾಡಿ ಘಾಟಿಯಲ್ಲಿ ಶುಕ್ರವಾರ ನಾಲ್ಕೈದು ಕಡೆ ಅಲ್ಪ ಪ್ರಮಾಣದ ಗುಡ್ಡ ಕುಸಿತ ನಡೆದಿದೆ.

Advertisement

ಮಾರನಹಳ್ಳಿ ಬಳಿ 5-6 ಬಂಡೆಗಳು ಉರುಳಿ ಬಿದ್ದಿವೆ. ಹೆದ್ದಾರಿಯ ಅಂಚಿಗೆ ಬಂಡೆಗಳು ಉರುಳಿ ಚರಂಡಿಯಲ್ಲೇ ನಿಂತಿದ್ದು ವಾಹನ ಸಂಚಾರಕ್ಕೆ ತಡೆ ಉಂಟಾಗಿಲ್ಲ. ಗುಂಡ್ಯದಿಂದ ಮಾರನಹಳ್ಳಿಯ ವರೆಗೂ ಹಲವೆಡೆಗಳಲ್ಲಿ ಗುಡ್ಡದಿಂದ ಮಣ್ಣು, ಬಂಡೆಗಳು ಅಲ್ಪ ಪ್ರಮಾಣದಲ್ಲಿ ಕುಸಿಯುತ್ತಿರುವುದರಿಂದ ವಾಹನ ಸವಾರರು ಆತಂಕಕ್ಕೆ ಒಳಗಾಗಿದ್ದಾರೆ.

ಆತಂಕ ಅಗತ್ಯವಿಲ್ಲ
ಶಿರಾಡಿ ಘಾಟಿ ಹೆದ್ದಾರಿಯಲ್ಲಿ ಸಕಲೇಶಪುರದಿಂದ ಗುಂಡ್ಯದ ವರೆಗೆ ಎಲ್ಲೇ ಗುಡ್ಡ ಕುಸಿತವಾದರೂ ತತ್‌ಕ್ಷಣ ತೆರವುಗೊಳಿಸಲು 2 ವಾಹನಗಳನ್ನು ನಿಯೋಜನೆ ಮಾಡಲಾಗಿದೆ. ಮಳೆಯಿಂದ ಕೆಲವು ಭಾಗಗಳಲ್ಲಿ ಮಣ್ಣು ಅಲ್ಪ ಪ್ರಮಾಣದಲ್ಲಿ ಕುಸಿಯುತ್ತಿದ್ದು, ಇದು ಸಾಮಾನ್ಯ. ಹೆಚ್ಚು ಕುಸಿತವಾದರೂ ತತ್‌ಕ್ಷಣ ತೆರವು ಮಾಡಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗುವುದು, ಈ ಬಗ್ಗೆ ಆತಂಕ ಪಡಬೇಕಾಗಿಲ್ಲ ಎಂದು ಹೆದ್ದಾರಿ ಇಲಾಖೆಯ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಮಡಿಕೇರಿಯಲ್ಲಿ ಮಳೆ ಶಾಂತ
ಮಡಿಕೇರಿ: ಕಳೆದ 4 ದಿನಗಳಿಂದ ಕೊಡಗಿನಾದ್ಯಂತ ಮತ್ತೆ ಪ್ರವಾಹದ ಆತಂಕ ಸೃಷ್ಟಿಸಿದ್ದ ಮಳೆಯ ಆರ್ಭಟ ಗುರುವಾರ ಕೊಂಚ ಕಡಿಮೆಯಾಗಿದೆ. ಮಡಿಕೇರಿ ತಾಲೂಕಿನಲ್ಲಿ ಮಳೆ ಶಾಂತವಾಗಿದ್ದರೆ ಸೋಮವಾರಪೇಟೆ ಹಾಗೂ ವಿರಾಜಪೇಟೆ ತಾಲೂಕಿನಲ್ಲಿ ಉತ್ತಮ ಮಳೆಯಾಗುತ್ತಿದೆ.

ದಕ್ಷಿಣ ಕೊಡಗಿನ ಭಾಗಗಳಲ್ಲಿ ಭಾರೀ ಮಳೆೆಯಿಂದ ಲಕ್ಷ್ಮಣತೀರ್ಥ ಮತ್ತು ಕೇರಳದತ್ತ ಸಾಗುವ ಬರಪ್ಪೊಳೆ ಉಕ್ಕಿ ಹರಿಯುತ್ತಿದ್ದು ಗ್ರಾಮೀಣರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮಡಿಕೇರಿಯಲ್ಲಿ ಶುಕ್ರವಾರ ತಿಳಿ ಬಿಸಿಲಿನ ವಾತಾವರಣ ಕಂಡು ಬಂದಿದೆ.

Advertisement

ತಲಕಾವೇರಿ ಮತ್ತು ಭಾಗಮಂಡಲ ವ್ಯಾಪ್ತಿಯಲ್ಲಿ 4 ಇಂಚು ಮಳೆ ದಾಖಲಾಗಿದೆ. ಶುಕ್ರವಾರ ಮಳೆಯ ತೀವ್ರತೆ ಇಳಿಮುಖಗೊಂಡು ಮಡಿಕೆೇರಿ ರಸ್ತೆಯ ಮೇಲೆ ಹರಿಯುತ್ತಿದ್ದ ಪ್ರವಾಹದ ನೀರು ಇಳಿದು ಸಂಚಾರ ಪುನರಾರಂಭಗೊಂಡಿದೆ.
ನಾಪೋಕ್ಲು ರಸ್ತೆಯಲ್ಲಿ ಪ್ರವಾಹದ ನೀರು ಇನ್ನಷ್ಟೆ ಇಳಿಯಬೇಕಿದೆ.

ಅರೆಕಲ್ಲು ಗುಡ್ಡದಲ್ಲಿ ಕುಸಿತ
ಸುಳ್ಯ: ಸುಳ್ಯ -ಮಡಿಕೇರಿ ಗಡಿ ಪ್ರದೇಶವಾದ ಅರೆಕಲ್ಲಿನಲ್ಲಿ ಕೊಪ್ಪರಿಗೆ ಗುಡ್ಡೆಯ ಬಳಿ ಕುಸಿತ ಸಂಭವಿಸಿ ಬಂಡೆಗಲ್ಲುಗಳು ಕೆಳಗೆ ಉರುಳಿ ಬಿದ್ದಿದ್ದು, ಸ್ಥಳಕ್ಕೆ ನೂರಾರು ಮಂದಿ ಭೇಟಿ ನೀಡಿ ವೀಕ್ಷಿಸುತ್ತಿದ್ದಾರೆ.

ಕಳೆದ ವರ್ಷ ಕೊಡಗಿನಲ್ಲಿ ಪ್ರಕೃತಿ ವಿಕೋಪ ಸಂಭವಿಸಿದ ಸಂದರ್ಭ ಈ ಪ್ರದೇಶದಲ್ಲಿ ಕುಸಿತ ಉಂಟಾಗಿ ರೆಡ್‌ ಅಲರ್ಟ್‌ ಪ್ರದೇಶವೆಂದು ಘೋಷಿಸಲಾಗಿತ್ತು. ಅಲ್ಲಿನ ಹಲವು ಕುಟುಂಬಗಳನ್ನು ಸ್ಥಳಾಂತರಿಸಲಾಗಿತ್ತು. ಇದರ ಸಮೀಪವೇ ಕುಸಿತ ಸಂಭವಿಸಿದೆ. ಆದರೆ ಆತಂಕಕ್ಕೆ ಕಾರಣವಾಗುವ ಘಟನೆಗಳು ನಡೆದಿಲ್ಲ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next