ಶಿರಾ: ಸಾಮಾನ್ಯ ರೈತ ಕುಟುಂಬದಲ್ಲಿ ಹುಟ್ಟಿ ನಿತ್ಯ 4 ಕಿ.ಮೀ. ಸೈಕಲ್ ತುಳಿದು ಕೊಂಡು ಶಾಲೆಗೆ ಹೋಗಿ ಶ್ರದ್ಧೆಯಿಂದ ಕಲಿತು ಗುರು ಮೆಚ್ಚಿದ ಶಿಷ್ಯನಾಗಿ ಪಾಠ ಕಲಿತು, ಎಂಎಸ್ಸಿ ಪದವಿ ಪಡೆದು ಶಿಕ್ಷಣ ತಜ್ಞನಾಗಿ ಬೆಳೆದು, ಶಿರಾ ನಗರದಲ್ಲಿ ಪ್ರತಿಷ್ಠಿತ ದಿ.ಪ್ರಿಸಿಡೆನ್ಸಿ ಪಬ್ಲಿಕ್ ಸ್ಕೂಲ್ ಸ್ಥಾಪನೆ ಮಾಡಿ ರಾಜ್ಯ ಮಟ್ಟದಲ್ಲಿ ಶಿರಾ ಶಿಕ್ಷಣ ಕಾಶಿ ಎಂಬ ಹೆಗ್ಗಳಿಕೆ ಬರುವಂತೆ ಮಾಡಿದ ಚಿದಾನಂದ ಎಂ.ಗೌಡ ಇದೀಗ ವಿಧಾನ ಪರಿಷತ್ ಸದಸ್ಯ.
ಶಿರಾ ತಾಲೂಕಿನ ಹುಲಿಕುಂಟೆ ಹೋಬಳಿಯ ಹೂಸ ಹಳ್ಳಿ ಗ್ರಾಮದ ಮಲ್ಲೇಗೌಡ ಮತ್ತು ರಂಗಮ್ಮ ದಂಪತಿ ಪುತ್ರನಾಗಿ ಚಿದಾನಂದ ಎಂ.ಗೌಡ ಜನಿಸಿದ್ದು 1969ರಲ್ಲಿ. ಹಳ್ಳಿಗಾಡಿನ ಸಾಮಾನ್ಯ ರೈತನ ಮಗನಾಗಿ ಹುಟ್ಟಿ ಪ್ರಾಥಮಿಕ ಶಿಕ್ಷಣ ಸ್ವಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಮುಗಿಸಿ ಪ್ರೌಢಶಿಕ್ಷಣ ಪಡೆದರು.
ದಿ.ಪ್ರಿಸಿಡೆನ್ಸಿ ಪಬ್ಲಿಕ್ ಸ್ಕೂಲ್ ಆರಂಭ: ನಂತರ ಬರಗೂರು ಗ್ರಾಮದ ಶ್ರೀಆಂಜನೇಯ ಪ್ರೌಢಶಾಲೆಯಲ್ಲಿ ಓದಿ, ತುಮಕೂರು ಸರ್ಕಾರಿ ವಿಜ್ಞಾನ ಪದವಿ ಕಾಲೇಜ್‌ನಲ್ಲಿ ಬಿಎಸ್ಸಿ ಪದವಿ ಪಡೆದು, ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಎಂಎಸ್ಸಿ ಪದವಿ ಮುಗಿಸಿದರು. ಗ್ರಾಮೀಣ ಪ್ರದೇಶದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕೆಂಬ ಉದ್ದೇಶದಿಂದ 2000ರಲ್ಲಿ ಶಿರಾ ನಗರದಲ್ಲಿ ದಿ.ಪ್ರಿಸಿಡೆನ್ಸಿ ಪಬ್ಲಿಕ್ ಸ್ಕೂಲ್ ಆರಂಭ ಮಾಡಿದರು.
ಶೇ.95 ಅಂಕ ಪಡೆದ ಮಕ್ಕಳಿಗೆ ಉಚಿತ ಶಿಕ್ಷಣ: ಗುಣ ಮಟ್ಟದ ಶಿಕ್ಷಣ ನೀಡಿದ ಕಾರಣ ಕೇವಲ 10 ವರ್ಷಗಳಲ್ಲಿ ರಾಜ್ಯ ಮಟ್ಟದ ಶಾಲೆಯಾಗಿ ಪ್ರಿಸಿಡೆನ್ಸಿ ಶಾಲೆ ಖ್ಯಾತಿ ಪಡೆಯಿತು. ಇಂಥ ಪ್ರಸಿದ್ಧಿ ಪಡೆದಿದ್ದರೂ ಸಹ ಸರ್ಕಾರಿ ಶಾಲೆಯಲ್ಲಿ ಎಸ್‌ಎಸ್‌ಎಲ್ ಪರೀಕ್ಷೆಯಲ್ಲಿ ಶೇ.95 ಅಂಕ ಪಡೆದ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡುವ ಮೂಲಕ ಬಡ ವಿದ್ಯಾರ್ಥಿಗಳು ಸಹ ಡಾಕ್ಟರ್, ಎಂಜಿನಿಯರ್ ಅಗ ಬಹುದೆಂಬ ಕಲ್ಪನೆ ಸಾಕಾರಗೊಳಿಸಿದ ಕೀರ್ತಿ ವಿಧಾನ ಪರಿಷತ್ ಸದಸ್ಯ ಚಿದಾನಂದ ಎಂ.ಗೌಡ ಅವರಿಗೆ ಸಲ್ಲುತ್ತದೆ.
ಇತಿಹಾಸ ಸೃಷ್ಟಿಸಿದ, “ಹುಲಿ’ಕುಂಟೆ ಹೋಬಳಿ:ಬರಗಾಲದಿಂದ ಕುಡಿಯುವ ನೀರಿಗೆ ಹಾಹಾಕಾರಪಡುತ್ತಿದ್ದ ಶಿರಾ ನಗರದ ಜನತೆ ದಾಹ ನಿಗಿಸುವ ನಿಟ್ಟಿನಲ್ಲಿ ನಿತ್ಯ ಹಲವಾರು ಟ್ಯಾಂಕರ್ ಮೂಲಕ ಜನತೆಗೆಉಚಿತವಾಗಿ ನೀರು ಸರಬರಾಜು ಮಾಡಿದ್ದಾರೆ.ಅಲ್ಲದೇ ಕೋವಿಡ್ ಸಂದರ್ಭದಲ್ಲಿ ಉಚಿತ ದಿನಸಿ ಕಿಟ್ ನೀಡಿ ಸಮಾಜ ಸೇವೆಯಂತ ಸಮಾಜ ಮುಖೀ ಸೇವೆಯಲ್ಲಿ ನಿರತರಾಗಿದ್ದ ಚಿದಾನಂದ ಎಂ.ಗೌಡಅವರು, ಮತ್ತಷ್ಟು ಜನ ಸೇವೆ ಮಾಡ ಬೇಕೆಂಬ ಉದ್ದೇಶದಿಂದ 2018ರ ವಿಧಾನ ಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಿ ಪರಾಜಿತರಾದರು. ಜನಾದೇಶಕ್ಕೆ ತಲೆಬಾಗಿದ ಚಿದಾನಂದ ಗೌಡ ತದ ನಂತರ 2019ರಲ್ಲಿ ಬಿಜೆಪಿ ಪಕ್ಷ ಸೇರಿ ಆಗ್ನೇಯ ಪದವೀ ಧರರ ಕ್ಷೇತ್ರದಿಂದ ಸ್ಪರ್ಧೆ ಮಾಡುವ ಇಚ್ಚೆ ವ್ಯಕ್ತ ಪಡಿಸಿ ಸಂಘಟನೆಯಲ್ಲಿ ಸಕ್ರಿಯರಾಗಿ 2020ರ ಆಗ್ನೇಯ ಪದವೀಧರ ಕ್ಷೇತ್ರದಿಂದ ಸ್ಪರ್ಧೆ ಮಾಡಿ ಆಯ್ಕೆಯಾಗುವ ಮೂಲಕ ವಿಧಾನ ಪರಿಷತ್ ಸದಸ್ಯರಾಗಿದ್ದಾರೆ.
ಇಬ್ಬರೂ ಹುಲಿಕುಂಟೆ ಹೋಬಳಿಯವರೇ: ಕಾಕತಾಳಿಯ ಎಂಬತೆ ಶಿರಾ ತಾಲೂಕಿನ ಹುಲಿಕುಂಟೆ ಹೋಬಳಿಯ ಹೊಸಹಳ್ಳಿ ಗ್ರಾಮದ ಚಿದಾನಂದ ಎಂ. ಗೌಡ ವಿಧಾನ ಪರಿಷತ್ ಸದಸ್ಯರಾದರೆ, ಹುಲಿಕುಂಟೆ ಹೋಬಳಿಯ ಚಿರತಹಳ್ಳಿ ಗ್ರಾಮದ ಡಾ.ಸಿ.ಎಂ. ರಾಜೇಶ್ ಗೌಡ ವಿಧಾನ ಸಭೆ ಸದಸ್ಯರಾಗಿ ಆಯ್ಕೆಯಾಗುವ ಮೂಲಕ ಹುಲಿಕುಂಟೆ ಹೋಬಳಿಯಕೀರ್ತಿ ಹೆಚ್ಚಿಸಿದ್ದಾರೆ.
ಒಬ್ಬ ಸಂಸದ, 5 ಶಾಸಕರ ನೀಡಿದ ಹುಲಿಕುಂಟೆ : ಹುಲಿಕುಂಟೆ ಹೋಬಳಿಯ ಬರಗೂರು ಗ್ರಾಮದ ದಿ.ರಾಮೇಗೌಡ 2 ಬಾರಿ ಶಾಸಕರಾಗಿದ್ದರೆ, ಚಿರತಹಳ್ಳಿ ಗ್ರಾಮದ ಸಿ.ಪಿ.ಮೂಡಲಗಿರಿಯಪ್ಪ 3 ಬಾರಿ ಚಿತ್ರದುರ್ಗ ಕ್ಷೇತ್ರದ ಸಂಸದರಾಗಿ 1 ಬಾರಿ ಶಾಸಕರಾಗಿದ್ದಾರೆ. ಚಿರತಹಳ್ಳಿ ಗ್ರಾಮದ ಮೂಡ್ಲೆಗೌಡ ಶಿರಾಕ್ಷೇತ್ರದಲ್ಲಿ ಪಕ್ಷೇತರವಾಗಿ ಸ್ಪರ್ಧೆ ಮಾಡಿ ಗೆದ್ದಿದ್ದಾರೆ. ಒಬ್ಬ ಸಂಸದ, 5 ಶಾಸಕರನ್ನು ನೀಡಿದ ಹೆಮ್ಮೆ ಶಿರಾ ತಾಲೂಕಿನ ಹುಲಿಕುಂಟೆ ಹೋಬಳಿಗೆ ಸಲ್ಲುತ್ತದೆ.
ಕ್ಷೇತ್ರದ ಮತದಾರರು ಈ ಬಾರಿ ಬದಲಾವಣೆ ಬಯಸಿರುವುದಕ್ಕೆ ನನ್ನ ಗೆಲುವೇ ಸಾಕ್ಷಿ. ನನ್ನ ಗೆಲುವಿನಲ್ಲಿ ಪಕ್ಷದ ವರಿಷ್ಠರು , ಕಾರ್ಯಕರ್ತರ ಹೆಚ್ಚಿನ ಶ್ರಮವಿದೆ. ನನೆಗುದಿಗೆ ಬಿದ್ದಿರುವ ಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಸಾಮಾನ್ಯಕಾರ್ಯಕರ್ತ ನಾಗಿ ಶ್ರಮಿಸಿಸುತ್ತೇನೆ.
–ಡಾ.ರಾಜೇಶ್‌ಗೌಡ, ನೂತನ ಎಂಎಲ್‌ಎ
ಆಗ್ನೇಯ ಪದವೀಧರಕ್ಷೇತ್ರದ ಮತದಾರರು ಪ್ರಜ್ಞಾವಂತರೆಂದು ನನ್ನ ಗೆಲುವಿನ ಮೂಲಕ ಸಾಬೀತುಪಡಿಸಿದ್ದಾರೆ. ನನ್ನ ಗೆಲುವಿಗೆ ಮತ ನೀಡಿರುವ ಎಲ್ಲರಿಗೂ ನನ್ನ ಹೃತ್ಪೂರ್ವಕ ಅಭಿ ನಂದನೆಗಳು. ಶಿಕ್ಷಣ ಕ್ಷೇತ್ರದಲ್ಲಿ ಇರುವ ಕುಂದು-ಕೊರತೆ ಬಗೆಹರಿಸಲು ಹೆಚ್ಚು ಒತ್ತು ನೀಡುತ್ತೇನೆ.
-ಚಿದಾನಂದ ಎಂ.ಗೌಡ, ನೂತನ ಎಂಎಲ್‌ಸಿ
– ಎಸ್.ಕೆ.ಕುಮಾರ್, ಶಿರಾ