Advertisement

ಗೆಲುವಿಗಾಗಿ ಕೈ-ತೆನೆ ನಡುವೆ ಹಣಾಹಣಿ

03:21 PM May 07, 2023 | Team Udayavani |

ಶಿರಾ: ಕಳೆದ ಉಪಚುನಾವಣೆವರೆಗೂ ಶಿರಾ ತಾಲೂಕಿನ ಮೊದಲೂರಿನ ಕೆರೆ ತುಂಬಿಸುವುದು ರಾಜಕೀಯ ಪಕ್ಷಗಳಿಗೆ ಪ್ರಮುಖ ಅಸ್ತ್ರವಾಗಿತ್ತು. ಆದರೆ 2023ರ ಚುನಾವಣೆ ವೇಳೆ ತಾಲೂಕಿನ ಅಭಿವೃದ್ಧಿ ಬಗ್ಗೆ ಪಕ್ಷಗಳ ನಡುವೆ ಪರಸ್ಪರ ದೋಷಾರೋಪ ಕೇಳಿ ಬರುತ್ತಿದೆ.

Advertisement

ಸಚಿವ ಟಿ. ಬಿ. ಜಯಚಂದ್ರ ಕಾಂಗ್ರೆಸ್‌ನಿಂದ, ಜೆಡಿಎಸ್‌ನಿಂದ ಆರ್‌. ಉಗ್ರೇಶ್‌ ಹಾಗೂ ಬಿಜೆಪಿ ಪಕ್ಷದಿಂದ ಡಾ. ಸಿಎಂ ರಾಜೇಶ್‌ ಗೌಡರು ಆಯ್ಕೆ ಬಯಸಿದ್ದಾರೆ. ಒಟ್ಟು 15 ಅಭ್ಯರ್ಥಿಗಳು ಕಣದಲ್ಲಿದ್ದು, ಅವರಲ್ಲಿ ಈ ಮೂರರ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಕಳೆದ ಉಪಚುನಾವಣೆಯಲ್ಲಿ ಹಲವು ರಣತಂತ್ರ ಉಪಯೋಗಿಸಿ ಆಡಳಿತರೂಢ ಬಿಜೆಪಿ ತನ್ನ ಅಭ್ಯರ್ಥಿಯನ್ನು ಗೆಲ್ಲಿಸುವುದರಲ್ಲಿ ಸಫ‌ಲವಾಯಿತು. ಆದರೆ, ಪ್ರಸ್ತುತ ರಾಜಕಾರಣದ ಪರಿಸ್ಥಿತಿಯೇ ಬೇರೆ. ರಾಜ್ಯ ರೇಷ್ಮೆ ನಿಗಮ ಮಂಡಳಿ ಮಾಜಿ ಅಧ್ಯಕ್ಷ ಎಸ್‌.ಆರ್‌ ಗೌಡ ಪಕ್ಷ ತೊರೆದು ಜೆಡಿಎಸ್‌ ಸೇರಿ ದ್ದಾರೆ. ಬಿಜೆಪಿಯ ತಳಮಟ್ಟದ ಹಲವು ನಾಯಕರು ಜೆಡಿಎಸ್‌ ಹಾಗೂ ಕಾಂಗ್ರೆಸ್‌ ಸೇರಿದ್ದಾರೆ. ಬಿಜೆಪಿಗೆ ಅನ್ಯ ಪಕ್ಷಗಳಿಂದ ಸೇರುವರ ನಾಯಕರ ಸಂಖ್ಯೆಯಲ್ಲಿ ಇಳಿಮುಖವಾಗಿದೆ.

ಮೂರು ನಾಯಕರು ಒಕ್ಕಲಿಗರ ಸಮುದಾಯಕ್ಕೆ ಸೇರಿರುವುದರಿಂದ ಇವರ ನಡುವೆ ಜಿದ್ದಾಜಿದ್ದಿ ಏರ್ಪಟ್ಟಿದೆ. ಕಳೆದ ಉಪಚುನಾವಣೆಯಲ್ಲಿ ಶೇ. 80 ಗೊಲ್ಲ ಜನಾಂಗದವರು ಬಿಜೆಪಿ ಯನ್ನು ಬೆಂಬಲಿಸಿದ್ದರು. ಆದರೆ ಈಗ ಗೊಲ್ಲ ಜನಾಂಗದ ಮತಗಳು ಮೂರು ಪಕ್ಷಗಳಿಗೂ ವಿಂಗಡಣೆಯಾಗಲಿವೆ. ಮುಸಲ್ಮಾನರ ಮತಗಳನ್ನು ಕಾಂಗ್ರೆಸ್‌ ಶೇ. 60- 70 ಪಡೆಯುವ ಸಾಧ್ಯತೆ ಇದೆ. ಉಳಿದವು ಜೆಡಿಎಸ್‌ ಹಾಗೂ ಇತರ ಪಕ್ಷಗಳು ಹಂಚಿಕೊಳ್ಳಲಿವೆ. ಉಪ ಚುನಾವಣೆಯಲ್ಲಿದ್ದ ಬಿಜೆಪಿ ಅಲೆ ಈಗ ಕಾಣುತ್ತಿಲ್ಲ. ಆದರೂ ಎರಡು ಪಕ್ಷಗಳ ನಡುವೆ ಬಿಜೆಪಿ ಪೈಪೋಟಿ ನೀಡಲಿದೆ.

ನಿನ್ನೆಯಷ್ಟೆ ಪ್ರಧಾನಿ ಜಿಲ್ಲೆಗೆ ಆಗಮಿಸಿ ಪ್ರಚಾರ ನಡೆಸಿದ್ದಾರೆ. ಆದರೆ ಕ್ಷೇತ್ರ ಯಾರು ಬಂದಂತೆ ಕಾಣುತ್ತಿಲ್ಲ. ಜೆಡಿಎಸ್‌ ವರಿಷ್ಠ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಹಾಗೂ ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಸೇರಿ ಈಗಾಗಲೇ ಪ್ರಚಾರ ಸಭೆಯನ್ನು ನಡೆಸಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ಕಾಂಗ್ರೆಸ್‌ ಪರ ಪ್ರಚಾರ ಸಭೆಯನ್ನು ನಡೆಸಿದ್ದಾರೆ.

ಮೇಲ್ನೋಟಕ್ಕೆ ಬಿಜೆಪಿ ಪಕ್ಷ ಪ್ರಚಾರದಲ್ಲಿ ಕಳೆಗುಂದಿದ್ದರೂ ಚುನಾವಣೆ ಬತ್ತಳಿಕೆಯಲ್ಲಿ ಗೆಲ್ಲಲು ಯಾವ ಅಸ್ತ್ರ ಪ್ರಯೋಗ ಮಾಡಲಿದೆ ಎಂಬುದರ ಬಗ್ಗೆ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಎದುರು ನೋಡುತ್ತಿವೆ. 2018 ರ ಚುನಾವಣೆಯಲ್ಲಿ ಜೆಡಿಎಸ್‌ ಪಕ್ಷದ ಬಿ. ಸತ್ಯನಾರಾಯಣ ಜಯಗಳಿಸಿ ದಾಗ ಟಿ.ಬಿ.ಜಯಚಂದ್ರ ವಿರುದ್ಧ ಅಲೆಯಿತ್ತು. ಆ ಕಾರಣದಿಂದಾಗಿ ಬಿಜೆಪಿ ಮತಗಳು ಬಿ.ಸತ್ಯನಾರಾಯಣ ಅವರಿಗೆ ದೊರಕಿ ಜಯಸಾಧಿಸಿದ್ದರು. ಬಿ.ಸತ್ಯನಾರಾಯಣ ರವರ ಅಕಾಲಿಕ ಮರಣದಿಂದ 2020ರಲ್ಲಿ ನಡೆದ ಉಪ ಚುನಾವಣೆಯಲ್ಲಿ ಆಡಳಿತ ಪಕ್ಷದ ರಣತಂತ್ರದಿಂದ ಜೆಡಿಎಸ್‌ ಮತ ಬಿಜೆಪಿಗೆ ವರ್ಗಾವಣೆಯಾಗಿ ಅಂದು ಡಾ. ಸಿ.ಎಂ. ರಾಜೇಶ್‌ ಗೌಡ ಜಯಗಳಿಸಿ ಸರ್ಕಾರದಿಂದ ಸುಮಾರು 1,150 ಕೋಟಿ ಅನುದಾನವನ್ನು ಭದ್ರಾ ಮೇಲ್ದಂಡೆ ಕಾಮಗಾರಿಗೆ ಬಿಡಗಡೆ ಮಾಡಿಸಿದ್ದಲ್ಲದೆ ಹಲವು ಜನಪರ ಕಾರ್ಯ ಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ.

Advertisement

ಸ್ಥಳೀಯ ನಿರುದ್ಯೋಗಿಗಳನ್ನು ಗಮನ ದಲ್ಲಿರಿಸಿಕೊಂಡು ಹೆಚ್ಚು ಕೈಗಾರಿಕೆಗಳಿಗೆ ಅವಕಾಶ ನೀಡಲು ಕ್ರಮ ವಹಿಸುವೆ. ಭದ್ರಾ ಮೇಲ್ದಂಡೆ, ಹೇಮಾವತಿ ಮತ್ತು ಎತ್ತಿನಹೊಳೆ ಕಾಮಗಾರಿಗಳನ್ನು ತ್ವತಿತಗತಿಯಲ್ಲಿ ಪೂರ್ಣಗೊಳಿಸಿ ಶಿರಾ ತಾಲೂಕನ್ನು ತ್ರಿವೇಣಿ ಸಂಗಮ ಮಾಡುವುದು ನನ್ನ ಕನಸು. ಮಾಜಿ ಸಚಿವ ಟಿ.ಬಿ.ಜಯಚಂದ್ರ, ಕಾಂಗ್ರೆಸ್‌ ಅಭ್ಯರ್ಥಿ

ಅತಿ ಕಡಿಮೆ ಸಮಯ ಅಧಿಕಾರ ದೊರೆತರೂ ಸಿಕ್ಕ ಅವಧಿಯಲ್ಲಿಯೇ ಸಾಕಷ್ಟು ಜನಪರ ಕೆಲಸಗಳನ್ನು ನಿರ್ವಹಿ ಸಿದ್ದು, ಪೂರ್ಣ ಅವಧಿ ಸಿಕ್ಕರೆ ತಾಲೂಕಿನ ಸರ್ವಾಂಗೀಣ ಅಭಿವೃದ್ಧಿಗೆ ರೂಪುರೇಷೆ ಸಿದ್ಧಪಡಿಸಿಕೊಂಡಿದ್ದೇನೆ. ಡಾ.ಸಿ.ಎಂ.ರಾಜೇಶ್‌ಗೌಡ, ಬಿಜೆಪಿ ಅಭ್ಯರ್ಥಿ

ಸಾಮಾನ್ಯ ರೈತನ ಮಗನಾದ ನನಗೆ ರೈತ ಪಡುತ್ತಿರುವ ಕಷ್ಠಗಳ ಬಗ್ಗೆ ಅರಿವಿದ್ದು, ಅವರ ಏಳಿಗೆಯೇ ನನ್ನ ಗುರಿ. ಮತ್ತು ಮೂಲತಃ ಇದೇ ಕ್ಷೇತ್ರದವನಾದ ನಾನು ಮಾದರಿ ಕ್ಷೇತ್ರ ಮಾಡುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತೇನೆ. ಆರ್‌.ಉಗ್ರೇಶ್‌, ಜೆ.ಡಿ.ಎಸ್‌ ಅಭ್ಯರ್ಥಿ

ಎಸ್‌.ಕೆ.ಕುಮಾರ್‌ ಶಿರಾ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next