ಮಧುಗಿರಿ: ತಾಲೂಕಿನಲ್ಲಿ ಆರಂಭವಾಗಿರುವ ಸಹಾಯಕ ಪ್ರಾದೇಶಿಕ ಕಚೇರಿ ಆರಂಭವಾಗಿದ್ದು, ಹೆಚ್ಚು ಆದಾಯ ತರುವ ಶಿರಾ ತಾಲೂಕನ್ನು ಮತ್ತೆ ಮಧುಗಿರಿ ಪ್ರಾದೇಶಿಕ ಕಚೇರಿ ವ್ಯಾಪ್ತಿಗೆ ಸೇರಿಸಲು ಸರ್ಕಾರ ಆದೇಶ ಹೊರಡಿಸಿದೆ.
ಸ್ವತಂತ್ರ ಪೂರ್ವದಲ್ಲೇ ಉಪವಿಭಾಗವಾಗಿ ಪರಿಗಣಿ ಸಲ್ಪಟ್ಟಿದ್ದ ಮಧುಗಿರಿಗೆ ಮಾಸ್ತಿ ವೆಂಕಟೇಶ್ ಅಯ್ನಾಂಗಾರ್ ಉಪವಿಭಾಗಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದು, ಮದ್ದಗಿರಿ ಎಂಬ ಹೆಸರಿದ್ದ ಈ ಕ್ಷೇತ್ರಕ್ಕೆ ಮಧುಗಿರಿ ಎಂದು ನಾಮಕರಣ ಮಾಡಿದರು. ಇಂತಹ ಪುರಾತನ ಉಪವಿಭಾಗದಲ್ಲಿ ಜಿಲ್ಲಾ ಪಂಚಾಯಿತಿ, ಸಾರ್ವಜನಿಕ ಶಿಕ್ಷಣ, ಅಬಕಾರಿ, ಆದಾಯ ತೆರಿಗೆ, ಹಾಗೂ ಬೆಸ್ಕಾಂ ಇಲಾಖೆ ಸೇರಿದಂತೆ ಹಲವು ಇಲಾಖೆಗಳ ಉಪ ವಿಭಾಗಗಳು ಕಾರ್ಯ ನಿರ್ವಹಿಸುತ್ತಿವೆ.
ಕಳೆದ ಅವಧಿಯಲ್ಲಿ ಮಧುಗಿರಿಗೆ ಕಾಂಗ್ರೆಸ್ ಸರ್ಕಾರ ಪ್ರಾದೇಶಿಕ ಆಯುಕ್ತರ ಉಪ ಕಚೇರಿ ನೀಡಿತ್ತು. ಆದರೆ ರಾಜಕೀಯ ವೈಷಮ್ಯಕ್ಕೆ ಶಿರಾ ತಾಲೂಕು ಮಧುಗಿರಿ ಕಚೇರಿಯಿಂದ ಹೊರಗುಳಿ ಯಿತು. ಮಾಜಿ ಶಾಸಕ ಕೆ.ಎನ್.ರಾಜಣ್ಣ ಮಧುಗಿರಿ, ಮಾಜಿ ಸಚಿವ ಟಿ.ಬಿ.ಜಯಚಂದ್ರ ಶಿರಾ ಕ್ಷೇತ್ರ ಪ್ರತಿನಿಧಿಸುತ್ತಿದ್ದರು. ಇವರಿಬ್ಬರ ನಡುವಿನ ಹೊಂದಾ ಣಿಕೆ ಕೊರತೆಯಿಂದ ಶೇ.60ರಷ್ಟು ಆದಾಯ ತರುತ್ತಿದ್ದ ಶಿರಾ ತಾಲೂಕು ಹೊರಗುಳಿಯಿತು. ನಂತರ ಇಲ್ಲಿನ ಎಆರ್‌ಟಿಒ ಆದಾಯ ಕಡಿಮೆಯಾಗಿದ್ದು, ಶಿರಾ ತಾಲೂಕಿನ ಜನತೆಗೂ ಸಮಸ್ಯೆಯಾಯಿತು. 80 ಕಿ.ಮೀ. ದೂರದ ತುಮಕೂರು ಜಿಲ್ಲಾ ಕೇಂದ್ರಕ್ಕೆ ಹೋಗಿ ಕೆಲಸ ಮಾಡಿಸಿಕೊಂಡು ಬರಲು ದಿನವೆಲ್ಲ ಕಳೆದು ಹೋಗುತ್ತಿತ್ತು. ಆದರೆ ಕೇವಲ 36 ಕಿ.ಮೀ. ದೂರದ ಮಧುಗಿರಿಗೆ ಶಿರಾವನ್ನು ಸೇರಿಸಿ ಎಂಬ ಆಗ್ರಹವಿದ್ದರೂ ಸಾಧ್ಯವಾಗಿರಲಿಲ್ಲ.
ಶಾಸಕರಿಂದ ಸಮಸ್ಯೆ ಇತ್ಯರ್ಥ: ಇಂತಹ ಜಟಿಲ ಸಮಸ್ಯೆಯನ್ನು ಶಿರಾ ಶಾಸಕ ಬಿ.ಸತ್ಯನಾರಾಯಣ ಜೊತೆಗೆ ಚರ್ಚಿಸಿದ ಶಾಸಕ ಎಂ.ವಿ.ವೀರಭದ್ರಯ್ಯ, ಶಿರಾ ಕ್ಷೇತ್ರ ಈ ಕಚೇರಿಯಿಂದ ಹೊರಗುಳಿದಿರುವುದು ಶಿರಾ ತಾಲೂಕಿನ ಜನತೆಗೆ ಅನಾನುಕೂಲವಾಗಿದೆ. ಹಾಗೂ ಇಲ್ಲಿನ ಪ್ರಾದೇಶಿಕ ಕಚೇರಿಯ ಆದಾಯವೂ ಇಳಿಮುಖವಾಗಿದ್ದು, ಸರ್ಕಾರದ ಬೊಕ್ಕಸಕ್ಕೆ ಹೊರೆ ಯಾಗಲಿದೆ. ಇದನ್ನು ಅರಿತು ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಜೊತೆಗೆ ಚರ್ಚಿಸಿ ಮಧುಗಿರಿ ಎಆರ್‌ಟಿಒ ಕಚೇರಿಗೆ ಶಿರಾ ಕ್ಷೇತ್ರವನ್ನು ಸೇರ್ಪಡೆ ಮಾಡ ಲಾಗಿದೆ. ಶಾಸಕರ ಕಾರ್ಯದಿಂದ ಮಧುಗಿರಿಗೆ ಜಿಲ್ಲಾ ಕೇಂದ್ರಕ್ಕೆ ಸಿಗುವ ಅರ್ಹತೆಯಲ್ಲಿ ಒಂದು ಹೆಚ್ಚಿನ ಗರಿ ಸಿಕ್ಕಿದೆ ಎಂದು ಜನರು ಹರ್ಷ ವ್ಯಕ್ತಪಡಿಸಿದ್ದಾರೆ.
● ಮಧುಗಿರಿ ಸತೀಶ್